ADVERTISEMENT

ಕಾಂಗ್ರೆಸ್ ಶಾಸಕ ಜಮೀರ್, ಬೇಗ್‌ಗೆ ಇ.ಡಿ ಕಂಟಕ

ಆಪ್ತರು, ಸಂಬಂಧಿಕರ ಮನೆಗಳ ಮೇಲೂ ದಾಳಿ: ಮುಂದುವರಿದ ಶೋಧ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2021, 22:08 IST
Last Updated 5 ಆಗಸ್ಟ್ 2021, 22:08 IST
ಇ.ಡಿ ಅಧಿಕಾರಿಗಳು ಶೋಧ ನಡೆಸಿದ ರೋಷನ್ ಬೇಗ್ ಅವರ ಫ್ರೇಜರ್ ಟೌನ್‌ನ ಮನೆ –ಪ್ರಜಾವಾಣಿ ಚಿತ್ರಗಳು
ಇ.ಡಿ ಅಧಿಕಾರಿಗಳು ಶೋಧ ನಡೆಸಿದ ರೋಷನ್ ಬೇಗ್ ಅವರ ಫ್ರೇಜರ್ ಟೌನ್‌ನ ಮನೆ –ಪ್ರಜಾವಾಣಿ ಚಿತ್ರಗಳು   

ಬೆಂಗಳೂರು: ಐಎಂಎ ಹಗರಣ ಮಾಜಿ ಸಚಿವ ರೋಷನ್ ಬೇಗ್‌ ಮತ್ತು ಶಾಸಕ ಜಮೀರ್ ಅಹಮದ್ ಖಾನ್ ಅವರಿಗೆ ಕಂಟಕವಾಗಿ ಕಾಡುತ್ತಿದ್ದು, ಜಾರಿ ನಿರ್ದೇಶನಾಲಯದ(ಇ.ಡಿ) ಅಧಿಕಾರಿಗಳು ಗುರುವಾರ ಬೆಳಿಗ್ಗೆ ಈ ಇಬ್ಬರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ.

ಕಂಟೋನ್ಮೆಂಟ್‌ ರೈಲು ನಿಲ್ದಾಣದ ಬಳಿ ಇರುವ ಜಮೀರ್ ಅಹಮದ್ ಖಾನ್ ಅವರ ಭವ್ಯ ಬಂಗಲೆ, ಯು.ಬಿ. ಸಿಟಿಯಲ್ಲಿರುವ ಫ್ಲ್ಯಾಟ್, ಕಲಾಸಿಪಾಳ್ಯದಲ್ಲಿನ ನ್ಯಾಷನಲ್ ಟ್ರಾವೆಲ್ಸ್ ಕಚೇರಿ, ರಿಚ್‌ಮಂಡ್‌ ಟೌನ್‌ ಹಾಗೂಬೆನ್ಸನ್‌ ಟೌನ್‌ನಲ್ಲಿರುವ ಮನೆ, ಕಚೇರಿ, ಸದಾಶಿವನಗರದಲ್ಲಿನ ಆಪ್ತರ ಮನೆ ಸೇರಿ ಆರು ಕಡೆ ದಾಳಿ ನಡೆಸಿದ್ದಾರೆ.

ದೆಹಲಿಯಿಂದ ಬಂದ 46 ಅಧಿಕಾರಿಗಳಿದ್ದ ಇ.ಡಿ ತಂಡ ಬೆಳಿಗ್ಗೆ 6 ಗಂಟೆಯಿಂದ ಶೋಧ ಕಾರ್ಯಾಚರಣೆ ಆರಂಭಿಸಿದೆ. ಪತ್ನಿ ಮತ್ತು ಮಕ್ಕಳ ಜೊತೆಯಲ್ಲಿ ಜಮೀರ್ ಕೂಡ ಮನೆಯಲ್ಲಿ ಇದ್ದರು. ಇವರೆಲ್ಲರ ಸಮ್ಮುಖದಲ್ಲೇ ಶೋಧ ಕಾರ್ಯವನ್ನು ಇ.ಡಿ ಅಧಿಕಾರಿಗಳು ನಡೆಸಿದರು.

ADVERTISEMENT

2018 ಚುನಾವಣೆ ವೇಳೆ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಆಸ್ತಿ ವಿವರದ ಪ್ರಕಾರ ₹40.34 ಕೋಟಿ ಆಸ್ತಿಯನ್ನು ಜಮೀರ್ ಹೊಂದಿದ್ದು, ₹22.75 ಕೋಟಿ ಸಾಲವನ್ನೂ ಜಮೀರ್ ತೋರಿಸಿದ್ದರು. ಇವೆಲ್ಲಾ ದಾಖಲೆಗಳನ್ನು ಮೊದಲೇ ಸಂಗ್ರಹಿಸಿದ್ದ ಇ.ಡಿ ಅಧಿಕಾರಿಗಳು, ಐ ಮಾನಿಟರಿ ಅಡ್ವೈಸರಿ (ಐಎಂಎ) ಹಗರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್‌ ಜತೆ ಹಣಕಾಸಿನ ವ್ಯವಹಾರ ನಡೆಸಿರುವ ಆರೋಪದಲ್ಲಿ ತನಿಖೆ ಆರಂಭಿಸಿದ್ದಾರೆ.

‘ರಿಚ್‌ಮಂಡ್ ಸರ್ಕಲ್‌ನಲ್ಲಿ ಒಂದು ಆಸ್ತಿಯನ್ನು ಮನ್ಸೂರ್‌ಗೆ ಕೊಟ್ಟಿದ್ದೆ. ಆ ವಿಷಯದಲ್ಲಷ್ಟೇ ವ್ಯವಹಾರ ಇಟ್ಟುಕೊಂಡಿದ್ದೆ’ ಎಂದು ಜಮೀರ್ ಈ ಹಿಂದೆ ಸ್ಪಷ್ಟನೆ ನೀಡಿದ್ದರು. ಆದರೆ, ಹಣಕಾಸು ವ್ಯವಹಾರ ನಡೆದಿರುವ ಮಾಹಿತಿಯನ್ನು ಅಳಿಸಿ ಹಾಕಲಾಗಿದ್ದು, ಅದನ್ನು ಇ–ಮೇಲ್ ಕ್ಲೌಡ್‌ನಲ್ಲಿ ಇ.ಡಿ ಅಧಿಕಾರಿಗಳು ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

‘ರಿಚ್‌ಮಂಡ್ ರಸ್ತೆಯಲ್ಲಿದ್ದ ಆಸ್ತಿಯೊಂದನ್ನು ₹90 ಕೋಟಿಗೆ ಮಾರಾಟ ಮಾಡಿದ್ದ ಆಸ್ತಿಯ ಮೊತ್ತವನ್ನು ಕೇವಲ ₹9 ಕೋಟಿ ಎಂದು ತೋರಿಸಿದ್ದರು. ಇದು ಅವ್ಯವಹಾರವಾಗಿದ್ದು, ತನಿಖೆ ನಡೆಸಬೇಕು’ ಎಂದು ಬಿಜೆಪಿ ಮುಖಂಡ ಎನ್‌.ಆರ್‌. ರಮೇಶ್ ಅವರು ಈ ಹಿಂದೆ ಇ.ಡಿಗೂ ದೂರು ನೀಡಿದ್ದರು.

ಸಹೋದರನ ವಿಚಾರಣೆ: ಜಮೀರ್ ಸಹೋದರಮುಜಾಮಿಲ್ ಅಹಮದ್ ಖಾನ್ ಅವರನ್ನು ಮನೆಯಿಂದ ಕರೆದೊಯ್ದಿರುವ ಇ.ಡಿ ಅಧಿಕಾರಿಗಳು ರಹಸ್ಯ ಸ್ಥಳದಲ್ಲಿ ವಿಚಾರಣೆ ನಡೆಸಿದರು. ಇನ್ನೊಂದೆಡೆ ಜಮೀರ್ ಆಪ್ತ ಮುಜಾಹಿದ್ ಮನೆ ಮೇಲೆಯೂ ದಾಳಿ ನಡೆಸಿದ್ದಾರೆ.

ಶೋಧ ಕಾರ್ಯ ಮುಗಿಸಿದ ಬಳಿಕ ಜಮೀರ್ ಅಹಮದ್ ಅವರನ್ನು ವಿಚಾರಣೆಗಾಗಿ ನವದೆಹಲಿಗೆ ಕರೆದೊಯ್ಯುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.

ರೋಷನ್ ಬೇಗ್ ಅಳಿಯ ವಶಕ್ಕೆ

ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫ್ರೇಜರ್ ಟೌನ್‌ನಲ್ಲಿರುವ ‌ಮಾಜಿ ಸಚಿವ ಆರ್.ರೋಷನ್ ಬೇಗ್ ಅವರ ಮನೆ, ಸಂಜಯನಗರದ ಮನೆ, ಭೂಪಸಂದ್ರದ ಮಗಳ ಮನೆ, ಇಂದಿರಾ ನಗರದಲ್ಲಿನ ಮಗಳ ಮನೆಗಳ ಮೇಲೆ ಏಕಕಾಲದಲ್ಲೇ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬೆಳಿಗ್ಗೆಯಿಂದ ರಾತ್ರಿ ತನಕವೂ ಶೋಧ ಕಾರ್ಯಚರಣೆಯನ್ನು ಮುಂದುವರಿದಿದೆ. ಬೇಗ್ ಅವರ ಅಳಿಯ ಸಮೀರ್, ಆಪ್ತ ಎಸ್ಸಾನ್‌ ಅವರನ್ನು ಇ.ಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಐಎಂಎ ಹಗರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಬೇಗ್ ಅವರು, ಅನಾರೋಗ್ಯದ ಕಾರಣ ನೀಡಿ ಜಾಮೀನು ಪಡೆದುಕೊಂಡಿದ್ದಾರೆ. ಈ ನಡುವೆ, ರೋಷನ್ ಬೇಗ್ ಆಸ್ತಿ ಜಪ್ತಿ ಮಾಡುವಂತೆ ರಾಜ್ಯ ಸರ್ಕಾರದ ಸಕ್ಷಮ ಪ್ರಾಧಿಕಾರಕ್ಕೆ ಹೈಕೋರ್ಟ್‌ ಆದೇಶ ನೀಡಿತ್ತು. ಅದನ್ನು ಆಧರಿಸಿ ಆಸ್ತಿ ಮುಟ್ಟುಗೋಲಿಗೆ ಸರ್ಕಾರ ಕೂಡ ಆದೇಶ ಹೊರಡಿಸಿತ್ತು.

ಬೆಂಬಲಿಗರ ಪ್ರತಿಭಟನೆ

ಜಮೀರ್ ಅಹಮದ್ ಖಾನ್ ಅವರ ಮನೆ ಮೇಲೆ ಇ.ಡಿ ನಡೆಸಿರುವ ದಾಳಿ ಖಂಡಿಸಿ ಬೆಂಬಲಿಗರು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.

ಮನೆಯ ಒಳಗೆ ಇ.ಡಿ ಅಧಿಕಾರಿಗಳು ಶೋಧ ನಡೆಸುತ್ತಿದ್ದರೆ, ಹೊರಗೆ ಬೆಂಬಲಿಗರು ಘೋಷಣೆ ಕೂಗಿದರು. ಈ ದಾಳಿ ರಾಜಕೀಯ ಪ್ರೇರಿತ. ಕಾಂಗ್ರೆಸ್‌ನಲ್ಲಿ ಪ್ರಭಾವಿ ನಾಯಕನಾಗಿ ಜಮೀರ್ ಅವರು ಬೆಳೆಯುತ್ತಿರುವುದನ್ನು ಸಹಿಸದೆ ಈ ದಾಳಿ ನಡೆಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.