ಬೆಂಗಳೂರು: ಐ ಮಾನಿಟರಿ ಅಡ್ವೈಸರಿಯ (ಐಎಂಎ) ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರೋಷನ್ ಬೇಗ್ ಅವರಿಗೆ ಸೇರಿದ ₹ 20 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಲು ಕೋರಿ ಸಕ್ಷಮ ಪ್ರಾಧಿಕಾರ ಸಲ್ಲಿಸಿದ್ದ ಅರ್ಜಿಯನ್ನು ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ.
ಈ ಸಂಬಂಧ ಸಕ್ಷಮ ಪ್ರಾಧಿಕಾರದ ಅಧಿಕಾರಿಯು 91ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ಗೆ (ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿನ ಹೂಡಿಕೆದಾರರ ಹಿತಾಸಕ್ತಿ ರಕ್ಷಣಾ ಕಾಯ್ದೆ ಅಡಿ ಸ್ಥಾಪನೆಗೊಂಡಿರುವ ವಿಶೇಷ ನ್ಯಾಯಾಲಯ) ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧೀಶ ಶ್ರೀಧರ ಗೋಪಾಲಕೃಷ್ಣ ಭಟ್ ವಿಚಾರಣೆ ನಡೆಸಿದರು.
ವಾದ–ಪ್ರತಿವಾದ ಆಲಿಸಿದ ನ್ಯಾಯಾಧೀಶರು ಬೇಗ್ ಆಸ್ತಿಯ ಜಪ್ತಿಗೆ ಸರ್ಕಾರ ಹೊರಡಿಸಿದ್ದ ಮಧ್ಯಂತರ ಆದೇಶವನ್ನು ರದ್ದುಪಡಿಸಿ, ‘ಬೇಗ್ ಷೇರು ಪಾಲುದಾರರಾಗಿ ಅಥವಾ ನಿರ್ದೇಶಕರಾಗಿ ಸಂಸ್ಥೆಯ ವ್ಯವಹಾರಗಳ ಮೇಲೆ ನೇರವಾದ ಅಥವಾ ಪರೋಕ್ಷವಾದ ಯಾವುದೇ ನಿಯಂತ್ರಣ ಹೊಂದಿರಲಿಲ್ಲ. ಐಎಂಎ ಸಮೂಹವು ಅವರ ಸಲಹೆ, ನಿರ್ದೇಶನ ಅಥವಾ ಸೂಚನೆಯಂತೆ ಕಾರ್ಯ ನಿರ್ವಹಿಸಿಲ್ಲ. ಆದ್ದರಿಂದ, ಅವರನ್ನು ಸಂಸ್ಥೆಯ ಪ್ರಚಾರಕರಾಗಿ ಪರಿಗಣಿಸಲು ಸಾಧ್ಯವಿಲ್ಲ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ಬೇಗ್ ಸಂಸ್ಥೆಯೊಂದಿಗೆ ವ್ಯಾಪಾರದ ಸಂಬಂಧ ಹೊಂದಿದ್ದರು, ಶಿವಾಜಿನಗರದ ಶಾಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಂಸ್ಥೆಯಿಂದ ಪತ್ರ ಕಳುಹಿಸಿದ್ದರು ಎಂಬುದೇನೊ ನಿಜ. ಐಎಂಎ ಜೊತೆಗೆ ಅವರು ಹೊಂದಿದ್ದ ನಿಕಟ ಸಂಬಂಧವು ಆ ಸಂಸ್ಥೆಯ ಬಗ್ಗೆ ಜನರಲ್ಲಿ ವಿಶ್ವಾಸವನ್ನೂ ಹೆಚ್ಚಿಸಿರಬಹುದು. ಆದರೆ, ಇಷ್ಟು ಮಾತ್ರಕ್ಕೆ ಅವರು ಸಂಸ್ಥೆಯ ಪ್ರಚಾರಕರಾಗಿದ್ದರು ಎಂಬ ತೀರ್ಮಾನಕ್ಕೆ ಬರಲಾಗದು‘ ಎಂದು ನ್ಯಾಯಾಧೀಶರು ಅರ್ಜಿ ವಜಾಕ್ಕೆ ಕಾರಣ ನೀಡಿದ್ದಾರೆ.
ಐಎಂಎ ಸಮೂಹವು ಹೂಡಿಕೆದಾರರಿಗೆ ಸುಮಾರು ₹ 500 ಕೋಟಿ ವಂಚನೆ ಮಾಡಿದ ಪ್ರಕರಣದಲ್ಲಿ ರೋಷನ್ ಬೇಗ್ ಆರೋಪಿಯಾಗಿದ್ದಾರೆ. ಪ್ರಕರಣ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿ ಸದ್ಯ ಜಾಮೀನು ಮೇಲೆ ಬಿಡುಗಡೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.