ಉಪ್ಪಿನಂಗಡಿ: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಬೇರೆ ಬೇರೆ ಧರ್ಮದ ಯುವಕ– ಯುವತಿಯ ಜೋಡಿಯನ್ನು ಸಂಘ ಪರಿವಾರದ ಸಂಘಟನೆಯೊಂದರ ಕಾರ್ಯಕರ್ತರು ಬಸ್‌ನಿಂದ ಇಳಿಸಿ ತರಾಟೆಗೆ ತೆಗೆದುಕೊಂಡ ಘಟನೆ ಬೆಳ್ತಂಗಡಿ ತಾಲ್ಲೂಕಿನ ಕೊಕ್ಕಡ ಸಮೀಪದ ಕಾಪಿನಬಾಗಿಲು ಎಂಬಲ್ಲಿ ಶುಕ್ರವಾರ ನಡೆದಿದೆ.
ಗದಗ ನರಗುಂದ ಮೂಲದ ಮುಸ್ಲಿಂ ಯುವಕ ಅದೇ ಊರಿನ ಹಿಂದೂ ಯುವತಿ ಜೊತೆಯಾಗಿ ಧರ್ಮಸ್ಥಳಕ್ಕೆ ಬಂದಿದ್ದರು.ಧರ್ಮಸ್ಥಳದಲ್ಲಿ ಖಾಸಗಿ ವಸತಿಗೃಹದಲ್ಲಿ ಕೊಠಡಿ ಬಾಡಿಗೆಗೆ ಪಡೆಯಲು ಮುಂದಾಗಿದ್ದರು. ಆದರೆ ಅಲ್ಲಿ ಅವರಿಗೆ ಬಾಡಿಗೆ ಕೊಠಡಿ ನೀಡಲು ನಿರಾಕರಿಸಿದ್ದರು. ಬಳಿಕ ಅವರಿಬ್ಬರು ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ಬಸ್ಸಿನಲ್ಲಿ ಪ್ರಯಾಣ ಬೆಳೆಸಿದ್ದರು.
ಈ ಬಗ್ಗೆ ಮಾಹಿತಿ ಪಡೆದುಕೊಂಡ ಸಂಘ ಪರಿವಾರದ ಸಂಘಟನೆಯೊಂದರ ಕಾರ್ಯಕರ್ತರು ಕೊಕ್ಕಡ ಸಮೀಪದ ಕಾಪಿನಬಾಗಿಲು ಎಂಬಲ್ಲಿ ಬಸ್ಸನ್ನು ತಡೆದು ಜೋಡಿಯನ್ನು ಇಳಿಸಿ ತರಾಟೆಗೆ ತೆಗೆದುಕೊಂಡಿದ್ದರು. ಯುವಕ– ಯುವತಿಯ ಪೂರ್ವಾಪರ ವಿಚಾರಿಸಿ ಬಳಿಕ ಅವರನ್ನು ನೆಲ್ಯಾಡಿ ಹೊರಠಾಣೆಯ ಪೊಲೀಸರ ವಶಕ್ಕೊಪ್ಪಿಸಿದ್ದರು. ‘ಯುವಕ ಯುವತಿಯನ್ನು ವಿಚಾರಣೆಗೆ ಒಳಪಡಿಸಿ ಅವರನ್ನು ಊರಿಗೆ ಕಳುಹಿಸಿಕೊಟ್ಟಿದ್ದೇವೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನಾವಣೆ, ‘ಸಂಘಟನೆಯ ಕಾರ್ಯಕರ್ತರು ಬಸ್ ಅನ್ನು ತಡೆದು ಯುವಕ ಯುವತಿಯನ್ನು ಇಳಿಸಿದ್ದು ನಿಜ. ಘಟನೆ ಬಗ್ಗೆ ಯಾರೂ ದೂರು ನೀಡಿಲ್ಲ. ಹಾಗಾಗಿ ಯುವಕ ಯುವತಿಯನ್ನು ಊರಿಗೆ ಕಳುಹಿಸಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.