ಬೆಂಗಳೂರು: ಕಬ್ಬಿಣ, ಸಿಮೆಂಟ್, ಸ್ಯಾನಿಟರಿ, ಬಣ್ಣ, ಎಲೆಕ್ಟ್ರಿಕಲ್, ಅಲ್ಯುಮಿನಿಯಂ ಸೇರಿ ಎಲ್ಲ ವಸ್ತುಗಳ ಬೆಲೆ ನಿರ್ಮಾಣ ಕ್ಷೇತ್ರವೇ ಬೆರಗಾಗುವಷ್ಟು ಗಗನಮುಖಿಯಾಗಿದೆ. ಇದು ಸ್ವಂತ ಮನೆ ಕಟ್ಟಿಕೊಳ್ಳುವ ಜನರ ಕನಸಿಗೆ ನುಚ್ಚುನೂರು ಮಾಡಿದ್ದರೆ, ಸರ್ಕಾರಿ ಕಾಮಗಾರಿಗಳ ಮೇಲೂ ಪರಿಣಾಮ ಬೀರಿದೆ.
ಜಿಎಸ್‌ಟಿ ಮತ್ತು ಇಂಧನ ದರ ಏರಿಕೆಯಿಂದ ನಿರ್ಮಾಣ ಪರಿಕರಗಳ ಬೆಲೆಯೂ ಏರುಗತಿಯಲ್ಲೇ ಮುಂದುವರಿದಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಕಳೆದ ನವೆಂಬರ್ ವೇಳೆಗೆ ಶೇ 40ರಿಂದ ಶೇ 50ರಷ್ಟು ಹೆಚ್ಚಳವಾಗಿದ್ದ ದರ, ಈಗ ಮತ್ತೆ ಶೇ 15ರಿಂದ ಶೇ 20ರಷ್ಟು ಹೆಚ್ಚಾಗಿದೆ. ಸಾಧಾರಣ ದರ್ಜೆಯ 10 ಚದರ (ಒಂದು ಸಾವಿರ ಚದರ ಅಡಿ) ಮನೆ ನಿರ್ಮಾಣಕ್ಕೆ ಒಂದು ವರ್ಷದ ಹಿಂದೆ ₹15 ಲಕ್ಷ ಇದ್ದ ನಿರ್ಮಾಣ ವೆಚ್ಚ 2021ರ ನವೆಂಬರ್ ವೇಳೆಗೆ ₹20 ಲಕ್ಷ ದಾಟಿತ್ತು. ಈಗ ₹25 ಲಕ್ಷ ಮೀರಿದೆ. ಒಳಾಂಗಣಕ್ಕೆ ಬಳಸುವ ವಸ್ತುಗಳ (ಟೈಲ್ಸ್, ಸ್ಯಾನಿಟರಿ ಸಲಕರಣೆ, ಬಣ್ಣ, ಎಲೆಕ್ಟ್ರಿಕಲ್ ವಸ್ತುಗಳು ಇತ್ಯಾದಿ) ಬೆಲೆಯೂ ಏರಿದೆ. ಅವುಗಳ ಗುಣಮಟ್ಟಕ್ಕೆ ತಕ್ಕಂತೆ ವೆಚ್ಚ ಇನ್ನಷ್ಟು ಹೆಚ್ಚಾಗುತ್ತಿದೆ.
ಒಂದು ತಿಂಗಳ ಹಿಂದೆ ಟನ್‌ಗೆ ₹68 ಸಾವಿರದಿಂದ ₹78 ಸಾವಿರ ಇದ್ದ ಕಬ್ಬಿಣದ ಬೆಲೆ ಈಗ ₹90 ಸಾವಿರದಿಂದ ₹99 ಸಾವಿರ ತನಕ ಏರಿಕೆಯಾಗಿದೆ. ಸಿಮೆಂಟ್ ದರವೂ ಚೀಲಕ್ಕೆ ₹50 ಜಾಸ್ತಿಯಾಗಿದೆ.
ಕಬ್ಬಿಣ ಮತ್ತು ಸಿಮೆಂಟ್ ದರ ಏರಿಕೆ ಮನೆ ನಿರ್ಮಾಣ ಕೆಲಸ ಆರಂಭಿಸಿರುವವರ ಲೆಕ್ಕಾಚಾರವನ್ನೇ ತಲೆಕೆಳಗು ಮಾಡಿದೆ. ಕೂಡಿಟ್ಟ ಹಣ, ಬ್ಯಾಂಕ್ ಸಾಲ, ಕೈ ಸಾಲ ಎಲ್ಲವನ್ನೂ ಸೇರಿಸಿ ಯೋಜನೆ ರೂಪಿಸಿದ್ದದರೂ ಕಾಮಗಾರಿ ಪೂರ್ಣವಾಗದೇ ಸ್ಥಗಿತಗೊಳಿಸುವಂತಾಗಿದೆ.
‘₹80 ಲಕ್ಷದಲ್ಲಿ ಮನೆ ನಿರ್ಮಾಣ ಪೂರ್ಣಗೊಳಿಸಲು ಯೋಜನೆ ರೂಪಿಸಿಕೊಂಡಿದ್ದೆವು. ಕಬ್ಬಿಣ, ಸಿಮೆಂಟ್ ದರ ಏರಿಕೆಯಿಂದಾಗಿ ಇನ್ನೂ ಶೇ 30ರಷ್ಟು ಕಾಮಗಾರಿ ಬಾಕಿ ಉಳಿಯುವ ಸಾಧ್ಯತೆ ಇದೆ’ ಎಂದು ಚನ್ನರಾಯಪಟ್ಟಣದಲ್ಲಿ ಮನೆ ನಿರ್ಮಾಣ ಮಾಡುತ್ತಿರುವ ಎನ್.ಆರ್. ಸಂತೋಷ್ ಹೇಳಿದರು.
‘ಅಪಾರ್ಟ್‌ಮೆಂಟ್ ಸಮುಚ್ಚಯಗಳ ನಿರ್ಮಾಣ ವೆಚ್ಚ ಶೇ 30ರಷ್ಟು ಹೆಚ್ಚಳವಾಗಿದೆ. ಮನೆ ಖರೀದಿಸುವ ಗ್ರಾಹಕರೊಂದಿಗೆ ನಾಲ್ಕೈದು ವರ್ಷಗಳ ಹಿಂದೆಯೇ ಒಪ್ಪಂದ ಮಾಡಿಕೊಳ್ಳಲಾಗಿದೆ. ಚದರ ಅಡಿಗೆ ₹2700 ಇದ್ದ ನಿರ್ಮಾಣ ವೆಚ್ಚ ಈಗ ₹ 3,500 ತನಕ ಹೆಚ್ಚಾಗಿದೆ. ಇಡೀ ಉದ್ಯಮ ಈಗ ಅಡಕತ್ತರಿಯಲ್ಲಿ ಸಿಲುಕಿದೆ’ ಎಂದು ರಿಯಲ್ ಎಸ್ಟೇಟ್ ಉದ್ಯಮಿಗಳು ಅಳಲು ತೋಡಿಕೊಳ್ಳುತ್ತಾರೆ.
ನಿರ್ಮಾಣ ಸಾಮಗ್ರಿಗಳ ಬೆಲೆ ಏರಿಕೆ ಆದಂತೆ ಅದಕ್ಕೆ ಜಿಎಸ್‌ಟಿ ದರ ಕೂಡ ಸೇರಿಕೊಂಡು ನಿರ್ಮಾಣ ವೆಚ್ಚ ದುಬಾರಿಯಾಗುತ್ತಿದೆ. ಉದಾಹರಣೆಗೆ ಒಂದು ಟನ್ ಕಬ್ಬಿಣಕ್ಕೆ ₹44 ಸಾವಿರ ಇದ್ದಾಗ ಶೇ 18ರಷ್ಟು ಅಂದರೆ ₹7,920 ಜಿಎಸ್‌ಟಿ ಸೇರ್ಪಡೆಯಾಗುತ್ತಿತ್ತು. ಸದ್ಯ ಅಷ್ಟೇ ಕಬ್ಬಿಣಕ್ಕೆ ₹90 ಸಾವಿರ ಇದ್ದು, ಅದಕ್ಕೆ ₹16,200 ಜಿಎಸ್‌ಟಿ ಸೇರಿಕೊಳ್ಳುತ್ತಿದೆ.
‘ಈ ಹೊರೆಯನ್ನು ಅನಿವಾರ್ಯವಾಗಿ ನಾವು ಗ್ರಾಹಕರ ಮೇಲೆಯೇ ಹಾಕಬೇಕಾಗುತ್ತದೆ. ಜಿಎಸ್‌ಟಿ ಹೊರೆಯನ್ನಾದರೂ ಸರ್ಕಾರ ಕಡಿಮೆ ಮಾಡಬೇಕು’ ಎಂದು ಕ್ರೆಡಾಯ್ ಬೆಂಗಳೂರು ಘಟಕದ ಭಾಸ್ಕರ್ ಟಿ.ನಾಗೇಂದ್ರಪ್ಪ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.