ADVERTISEMENT

ಸಿವಿಲ್ ಪ್ರಕ್ರಿಯಾ ಸಂಹಿತೆ ಕಾಯ್ದೆ ಜಾರಿ: ಬಡವರಿಗೆ 6 ತಿಂಗಳಲ್ಲಿ ನ್ಯಾಯದಾನ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2024, 23:46 IST
Last Updated 4 ಮಾರ್ಚ್ 2024, 23:46 IST
ಎಚ್.ಕೆ.ಪಾಟೀಲ
ಎಚ್.ಕೆ.ಪಾಟೀಲ   

ಬೆಂಗಳೂರು: ಬಡವರು, ಸಣ್ಣ, ಅತಿ ಸಣ್ಣ ರೈತರು, ದುರ್ಬಲ ವರ್ಗದವರು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಸೇರಿದ ಸಿವಿಲ್ ವ್ಯಾಜ್ಯಗಳನ್ನು ಆದ್ಯತೆ ಮೇಲೆ ಕೈಗೆತ್ತಿಕೊಂಡು ಆರು ತಿಂಗಳಲ್ಲಿ ಇತ್ಯರ್ಥಗೊಳಿಸುವ ಸಿವಿಲ್ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ಕಾಯ್ದೆ ಸೋಮವಾರದಿಂದ ಜಾರಿ ಆಗಿದೆ.

ಕೆಳ ಹಂತದ ನ್ಯಾಯಾಲಯಗಳಿಂದ ಹಿಡಿದು ಹೈಕೋರ್ಟ್‌ವರೆಗಿನ ಎಲ್ಲ ನ್ಯಾಯಾಲಯಗಳಿಗೂ ಈ ಕಾಯ್ದೆ ಅನ್ವಯವಾಗುತ್ತದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಎಚ್‌.ಕೆ.ಪಾಟೀಲ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಈ ವರ್ಗಕ್ಕೆ ಸೇರಿದವರ ಸಾವಿರಾರು ಪ್ರಕರಣಗಳು 5ರಿಂದ 10 ವರ್ಷಗಳಿಗೂ ಹೆಚ್ಚು ಸಮಯದಿಂದ ಇತ್ಯರ್ಥ ಆಗದೇ ಉಳಿದಿವೆ. ಸಕಾಲದಲ್ಲಿ ನ್ಯಾಯದಾನ ಮಾಡದೇ ತಡ ಮಾಡುವುದು ದ್ರೋಹ ಬಗೆಯುವುದಕ್ಕೆ ಸಮ. ಈ ಹಿನ್ನೆಲೆಯಲ್ಲಿ ಕಾನೂನು ತಜ್ಞರು, ವಕೀಲರು ಮತ್ತು ಸಂಬಂಧಿಸಿದ ಇತರ ತಜ್ಞರ ಜತೆ ಸಮಾಲೋಚನೆ ನಡೆಸಿ 2023 ರ ಜುಲೈನಲ್ಲಿ ಮಸೂದೆಗೆ ತಿದ್ದುಪಡಿ ತರಲಾಯಿತು. ಎರಡೂ ಸದನಗಳಲ್ಲಿ ಒಪ್ಪಿಗೆ ಪಡೆದ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕದೇ ಅದನ್ನು ರಾಷ್ಟ್ರಪತಿಯವರಿಗೆ ಕಳಿಸಿದರು. ರಾಷ್ಟ್ರಪತಿಯವರು ಫೆಬ್ರುವರಿಯಲ್ಲಿ ಅಂಕಿತ ಹಾಕಿದ್ದು, ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಲಾಗಿದೆ ಎಂದರು.

ADVERTISEMENT

ಕಾಯ್ದೆಯ ಅನುಷ್ಠಾನಕ್ಕೆ ಅಗತ್ಯವಿರುವ ಮಾರ್ಗಸೂಚಿಯೊಂದನ್ನು ಹೊರಡಿಸಲಾಗಿದೆ. ನ್ಯಾಯಾಲಯಗಳು ಪ್ರತಿನಿತ್ಯ ಪ್ರಕರಣಗಳನ್ನು ಕೈಗೆತ್ತಿಕೊಳ್ಳುವ ಸಂದರ್ಭದಲ್ಲಿ ಈ ವರ್ಗದವರಿಗೆ ಆದ್ಯತೆ ನೀಡಬೇಕಾಗುತ್ತದೆ ಎಂದು ಹೇಳಿದರು.

ಹೊಸ ವ್ಯವಸ್ಥೆಯಿಂದ ಸ್ವಲ್ಪಮಟ್ಟಿಗೆ ನ್ಯಾಯಾಲಯಗಳ ಮೇಲೆ ಒತ್ತಡ ಆಗಬಹುದು. ತ್ವರಿತ ನ್ಯಾಯದಾನದ ವಿಚಾರದಲ್ಲಿ ಈ ಹೊಸ ಕ್ರಮ ಅಗತ್ಯವಿತ್ತು. ಸಿವಿಲ್‌ ಪ್ರಕರಣಲ್ಲಿ ಸರ್ಕಾರಕ್ಕೆ ಸಂಬಂಧಿಸಿದ್ದು ಶೇ 30 ರಿಂದ ಶೇ 40 ರಷ್ಟಿದ್ದರೆ, ಕೈಗಾರಿಕೆಗಳು ಮತ್ತು ರಿಯಲ್‌ಎಸ್ಟೇಟ್‌ಗೆ ಸಂಬಂಧಿಸಿರುವುದು ಶೇ 25 ರಷ್ಟು ಪ್ರಕರಣಗಳಿವೆ ಎಂದರು.

ಈ ಸೌಲಭ್ಯಕ್ಕೆ ಯಾರು ಅರ್ಹರು:

  • ಎರಡು ಹೆಕ್ಟೇರ್‌ ಒಣಬೇಸಾಯದ ಭೂಮಿ ಹೊಂದಿರುವವರು

  • ಒಂದು ಮತ್ತು ನಾಲ್ಕನೇ ಒಂದು ಹೆಕ್ಟೇರ್‌ ಮಳೆಯಾಶ್ರಿತ ಅರ್ಧ ಭೂಮಿ ಹೊಂದಿರುವವರು

  • ಒಂದು ನೀರಾವರಿ ಬೆಳೆ ಬೆಳೆಯಲು ಅಥವಾ ತೋಟದ ಬೆಳೆಗಳನ್ನು ಬೆಳೆಯಲು ಅಥವಾ ದ್ರಾಕ್ಷಿ ಅಥವಾ ತೆಂಗು ಅಥವಾ ಅಡಿಕೆ ಅಥವಾ ಕಬ್ಬು ಬೆಳೆಯಲು ಅಥವಾ ನೀರಾವರಿ ಮೂಲಕ ರೇಷ್ಮೆ ಬೆಳೆಯಲು ಅರ್ಧ ಹೆಕ್ಟೇರ್‌ ಭೂಮಿ ಇರುವವರು

  • ದೀರ್ಘಕಾಲಿಕ ನೀರಾವರಿ ಸೌಲಭ್ಯಗಳನ್ನು ಹೊಂದಿರುವ ಅಥವಾ ವರ್ಷದಲ್ಲಿ ಒಂದಕ್ಕಿಂತ ಹೆಚ್ಚುವರಿ ನೀರಾವರಿ ಬೆಳೆಗಳನ್ನು ಬೆಳೆಯುವ ಸೌಲಭ್ಯಗಳಿರುವ ಕಾಲು ಹೆಕ್ಟೇರ್‌ ಭೂಮಿ ಹೊಂದಿರುವವರು. (ತೋಟದ ಬೆಳೆಗಳು ಎಂದರೆ ಏಲಕ್ಕಿ ಕಾಫಿ ರಬ್ಬರ್ ಮತ್ತು ಚಹಾ)

  • ಆರ್ಥಿಕ ದುರ್ಬಲ ವರ್ಗಕ್ಕೆ ಸೇರಿದ ವ್ಯಕ್ತಿ ಎಂದರೆ ಎಲ್ಲ ಮೂಲಗಳಿಂದ ವಾರ್ಷಿಕ ಆದಾಯ ₹3 ಲಕ್ಷ ಮೀರದ ವ್ಯಕ್ತಿಯಾಗಿರಬೇಕು

ಐಹೊಳೆ 8 ದೇವಸ್ಥಾನಗಳ ಸಂರಕ್ಷಣೆ ಹೊಣೆ ಧರ್ಮಸ್ಥಳ ಟ್ರಸ್ಟ್‌ಗೆ
ಐಹೊಳೆಯ 8 ದೇವಸ್ಥಾನಗಳ ದುರಸ್ತಿ ಮತ್ತು ಸಂರಕ್ಷಣೆ ಜವಾಬ್ದಾರಿಯನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್‌ಗೆ ವಹಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವರೂ ಆಗಿರುವ ಎಚ್‌.ಕೆ.ಪಾಟೀಲ ತಿಳಿಸಿದರು. ಚಾಲುಕ್ಯರ ಕಾಲದ ಈ ದೇವಸ್ಥಾನಗಳನ್ನು ಸ್ಥಳೀಯರು ಹಸು ಎಮ್ಮೆಗಳನ್ನು ಕಟ್ಟಿಕೊಳ್ಳಲು ಬಳಸುತ್ತಿದ್ದರು. ಇನ್ನೂ ಕೆಲವು ದೇವಸ್ಥಾನಗಳಲ್ಲಿ ಕುಟುಂಬಗಳು ವಾಸವಿದ್ದವರು. ಅವರಿಗೆ ಪರ್ಯಾಯ ವಸತಿ ವ್ಯವಸ್ಥೆ ಮಾಡಲಾಗುತ್ತಿದೆ. ವಸತಿ ನಿರ್ಮಾಣಕ್ಕಾಗಿ ಭೂಮಿ ಖರೀದಿಸಲು ₹3.30 ಕೋಟಿ ನೀಡಲಾಗುವುದು ಎಂದು ಅವರು ತಿಳಿಸಿದರು. ಐಹೊಳೆಯಲ್ಲಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲು ಕೆಎಸ್‌ಟಿಡಿಸಿ ವತಿಯಿಂದ ತ್ರೀಸ್ಟಾರ್‌ ಹೊಟೇಲ್‌ ನಿರ್ಮಿಸಲಾಗುವುದು. ಇದಕ್ಕಾಗಿ ಭೂಮಿ ನೀಡಲಾಗಿದೆ ಎಂದು ಪಾಟೀಲ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.