ಬೆಂಗಳೂರು: ‘ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಅದನ್ನು ತಡೆಯುವ ಉದ್ದೇಶದಿಂದ ‘ಸೈಬರ್ ಭದ್ರತಾ ನೀತಿ–2024’ ಅನ್ನು ಗುರುವಾರದಿಂದ (ಆಗಸ್ಟ್ 1) ಜಾರಿಗೆ ತರಲಾಗಿದೆ’ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ನೀತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಸೈಬರ್ ಜಾಗೃತಿ ಮೂಡಿಸುವುದು, ಸ್ಟಾರ್ಟ್ ಅಪ್‌ಗಳಿಗೆ ಪ್ರೋತ್ಸಾಹ ನೀಡುವುದು, ಪರಸ್ಪರ ಸಹಕಾರದ ಮೂಲಕ ರಾಜ್ಯದ ಡಿಜಿಟಲ್ ವ್ಯವಸ್ಥೆಯನ್ನು ಸಂರಕ್ಷಿಸುವುದು ಈ ನೀತಿಯ ಮುಖ್ಯ ಉದ್ದೇಶ’ ಎಂದರು.
‘ಹೆಚ್ಚುತ್ತಿರುವ ಸೈಬರ್ ಭದ್ರತೆಯ ಅಗತ್ಯವನ್ನು ಮನಗಂಡು, ಸಾರ್ವಜನಿಕರು ಮತ್ತು ಉದ್ಯಮಿಗಳ ಹಿತ ಕಾಯುವ ಗುರಿಯೊಂದಿಗೆ ಈ ನೀತಿಯನ್ನು ನಿಖರವಾಗಿ ರೂಪಿಸಲಾಗಿದೆ’ ಎಂದೂ ಅವರು ಹೇಳಿದರು.
‘ಎರಡು ಭಾಗಗಳಲ್ಲಿ ಈ ನೀತಿಯನ್ನು ಜಾರಿಗೊಳಿಸಲಾಗುವುದು. ಮೊದಲ ಭಾಗವು ಸಾರ್ವಜನಿಕ, ಶೈಕ್ಷಣಿಕ, ಉದ್ಯಮ, ಸ್ಟಾರ್ಟ್ಅಪ್‌ಗಳು ಮತ್ತು ಸರ್ಕಾರವೂ ಸೇರಿಂದತೆ ಸಮಾಜದ ಎಲ್ಲ ವಿಭಾಗಗಳಲ್ಲಿ ಸೈಬರ್ ಭದ್ರತೆಯ ವಾತಾವರಣವನ್ನು ನಿರ್ಮಿಸುವುದರ ಮೇಲೆ ಕೇಂದ್ರೀಕೃತವಾಗಿದೆ. ಸಿಸ್ಕೊ ಸಂಸ್ಥೆಯ ಸಹಭಾಗಿತ್ವದಲ್ಲಿ ಸುರಕ್ಷಿತ ಡಿಜಿಟಲ್ ಪರಿಸರವನ್ನು ನಿರ್ಮಿಸಲಾಗುವುದು. ಮಹಿಳೆಯರ ಸಬಲೀಕರಣಕ್ಕೆ ವಿಶೇಷ ಒತ್ತು ನೀಡಲಾಗುವುದು. ಅಲ್ಲದೆ, 40 ಸಾವಿರ ಜನರಿಗೆ ತರಬೇತಿ ನೀಡುವ ಮೂಲಕ ಟೆಕ್ ವಲಯದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸಲಾಗುವುದು’ ಎಂದು ಪ್ರಿಯಾಂಕ್ ಹೇಳಿದರು.
‘ನೀತಿಯ ಎರಡನೇ ಭಾಗವು ರಾಜ್ಯದ ಐಟಿ ಸ್ವತ್ತುಗಳ ಸೈಬರ್ ಭದ್ರತೆ ಬಲಪಡಿಸುವುದರ ಮೇಲೆ ಕೇಂದ್ರೀಕೃತವಾಗಿದೆ. ಮೊದಲ ಭಾಗವು ಸಾರ್ವಜನಿಕ ಡೊಮೇನ್‌ನಲ್ಲಿದ್ದರೆ, ಎರಡನೇ ಭಾಗವು ರಾಜ್ಯದ ಐಟಿ ತಂಡಗಳು ಮತ್ತು ಇಲಾಖೆಗಳ ಐಟಿ ಅನುಷ್ಠಾನಗಳಿಗೆ ಆಂತರಿಕವಾಗಿರುತ್ತದೆ’ ಎಂದೂ ಅವರು ತಿಳಿಸಿದರು.
‘ಎಲೆಕ್ಟ್ರಾನಿಕ್ಸ್, ಐಟಿ-ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಇ- ಆಡಳಿತ), ಗೃಹ ಇಲಾಖೆ, ಸರ್ಕಾರಿ ಮತ್ತು ಖಾಸಗಿ ವಲಯಗಳ ಸಂಬಂಧಿಸಿದ ಭಾಗೀದಾರಿಕೆಯಲ್ಲಿ, ಸಮಾಲೋಚಿಸಿ ಈ ನೀತಿಯನ್ನು ರೂಪಿಸಲಾಗಿದೆ’ ಎಂದೂ ಅವರು ವಿವರಿಸಿದರು.
ಎಲೆಕ್ಟ್ರಾನಿಕ್ಸ್, ಐಟಿ– ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಎಂ.ಎಸ್. ಏಕ್‌ರೂಪ್ ಕೌರ್ ಮಾತನಾಡಿ, ‘ಸೈಬರ್ ಕ್ಷೇತ್ರ ಭವಿಷ್ಯದಲ್ಲಿ ಹೆಚ್ಚು ಸಂಕೀರ್ಣವಾಗುವ ನಿರೀಕ್ಷೆಯಿದೆ, ನೆಟ್‌ವರ್ಕ್ ಮತ್ತು ಅದಕ್ಕೆ ಸಂಪರ್ಕಗೊಂಡಿರುವ ಸಾಧನಗಳಲ್ಲಿ ಹಲವು ಪಟ್ಟು ಹೆಚ್ಚಳವಾಗಲಿದೆ. ಆದ್ದರಿಂದ, ಸೈಬರ್ ಭದ್ರತಾ ನೀತಿಯ ಅವಶ್ಯವಿದೆ, ನಾವು ರೂಪಿಸಿರುವ ನೀತಿಯು ರಾಷ್ಟ್ರೀಯ ಸೈಬರ್ ಭದ್ರತಾ ನೀತಿಗೆ ಅನುಗುಣವಾಗಿದೆ’ ಎಂದರು. ನೀತಿಯ ಕುರಿತು ಹೆಚ್ಚಿನ ಮಾಹಿತಿಗೆ https://itbtst.karnataka.gov.in ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.