ಬೆಂಗಳೂರು: ‘ಸಾಮಾಜಿಕ ನ್ಯಾಯದ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಳ ಮೀಸಲಾತಿ ಪರವಾಗಿ ನಿರ್ಣಯ ತೆಗೆದುಕೊಂಡಿದ್ದೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಒಳ ಮೀಸಲಾತಿ ಜಾರಿಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ತೆಗೆದುಕೊಂಡ ಕಾರಣಕ್ಕೆ ತಮ್ಮನ್ನು ಅಭಿನಂದಿಸಿದ ಮಾದಿಗ ಸಮುದಾಯದ ಮುಖಂಡರು ಮತ್ತು ಒಳಮೀಸಲಾತಿ ಹೋರಾಟದ ನಾಯಕರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಸಾಮಾಜಿಕ ನ್ಯಾಯ ಹಾಗೆಯೇ ಬರುವುದಿಲ್ಲ. ಇಂತಹ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ’ ಎಂದರು.
‘ಮಾದಿಗ ಸಮುದಾಯ ಒಳ ಮೀಸಲಾತಿಗಾಗಿ ದಶಕಗಳಿಂದ ಹೋರಾಟ ನಡೆಸಿದೆ. ಸುಪ್ರೀಂಕೋರ್ಟ್ ಕೂಡ ಈಗ ತೀರ್ಪು ನೀಡಿದೆ. ನಾವು ಜಾರಿ ಮಾಡಲೇಬೇಕಿದೆ. 101 ಪರಿಶಿಷ್ಟ ಜಾತಿಗಳಿವೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮುಖ್ಯ. ಎಲ್ಲರನ್ನೂ ಸಮಾಧಾನ ಮಾಡಲು ಸಾಧ್ಯ ಇಲ್ಲದಿದ್ದರೂ ಶೇ 90ರಷ್ಟು ಸಮುದಾಯಗಳಿಗೆ ಸಮಾಧಾನ ಆಗುವ ತೀರ್ಮಾನವನ್ನು ನಮ್ಮ ಸರ್ಕಾರ ಮಾಡಲಿದೆ’ ಎಂದರು.
‘ಗೃಹ ಸಚಿವ ಜಿ. ಪರಮೇಶ್ವರ ಅವರ ನಿವಾಸದಲ್ಲಿ ನಡೆದ ದಲಿತ ಶಾಸಕರ ಸಭೆಯಲ್ಲಿ, ಒಳ ಮೀಸಲಾತಿಗೆ ಯಾವುದೇ ವಿರೋಧ ಇಲ್ಲ ಎನ್ನುವ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಹೀಗಾಗಿ ಎಲ್ಲರೂ ಒಳಮೀಸಲಾತಿ ಪರವಾಗಿದ್ದಾರೆ. ತೆಲಂಗಾಣ ಸರ್ಕಾರ ಈಗಾಗಲೇ ಒಳ ಮೀಸಲಾತಿ ಜಾರಿಗೆ ಆಯೋಗ ರಚಿಸಿದೆ. ಅಲ್ಲಿನ ಮುಖ್ಯಮಂತ್ರಿ ಜೊತೆಗೂ ಇತ್ತೀಚೆಗೆ ಮೈಸೂರಿನಲ್ಲಿ ಈ ಬಗ್ಗೆ ಚರ್ಚೆ ಮಾಡಿದ್ದೇನೆ. ಹರಿಯಾಣದಲ್ಲೂ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಆಗಿದೆ. ಆದರೆ ಆದೇಶ ಆಗಿಲ್ಲ’ ಎಂದರು.
‘ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಎಚ್.ಸಿ. ಮಹದೇವಪ್ಪ ಅವರು ಒಳಮೀಸಲಾತಿ ವಿಚಾರ ಪ್ರಸ್ತಾಪಿಸಿದರು. ಪ್ರಿಯಾಂಕ್ ಖರ್ಗೆ, ಆರ್.ಬಿ. ತಿಮ್ಮಾಪುರ, ಕೆ.ಎಚ್. ಮುನಿಯಪ್ಪ ಸೇರಿದಂತೆ ಎಲ್ಲರೂ ಒಳ ಮೀಸಲಾತಿಗೆ ಒಪ್ಪಿಗೆ ಸೂಚಿಸಿದರು. ಯಾರೂ ವಿರೋಧ ವ್ಯಕ್ತಪಡಿಸಲಿಲ್ಲ. ಆದರೆ, ಪರಿಶೀಲನಾರ್ಹ ದತ್ತಾಂಶ ಅಗತ್ಯವಿದೆ ಎನ್ನುವ ಸಂಗತಿ ಚರ್ಚೆಗೆ ಬಂತು. ಹೀಗಾಗಿ, ಈ ಬಗ್ಗೆ ಪರಾಮರ್ಶೆಗೆ ಆಯೋಗ ರಚಿಸಲು ನಿರ್ಧರಿಸಿದ್ದೇವೆ. ಆಯೋಗ ನಿಗದಿತ ಅವಧಿಯ ಒಳಗೆ ವರದಿ ನೀಡುವ ನಿರೀಕ್ಷೆ ಇದೆ. ವರದಿ ಬಂದ ತಕ್ಷಣ ಒಳ ಮೀಸಲಾತಿ ಜಾರಿ ಮಾಡಲಾಗುವುದು’ ಎಂದರು.
ಮಾದಿಗ ಸಮುದಾಯದ ಭಾಗ್ಯದ ಬಾಗಿಲು ಮುಖ್ಯಮಂತ್ರಿ ಸಿದ್ದರಾಮಯ್ಯ ತೆರೆದಿದ್ದಾರೆ. ಇಡೀ ಸಮುದಾಯ ಅವರ ಬೆನ್ನಿಗೆ ನಿಲ್ಲಲಿದೆ.ಎಚ್. ಆಂಜನೇಯ ಮಾಜಿ ಸಚಿವ
ಒಳ ಮೀಸಲಾತಿ ಹೋರಾಟಕ್ಕೆ ಅ. 28 ಚರಿತ್ರಾರ್ಹ ದಿನ. ಬಿಜೆಪಿಯವರಾಗಲಿ ಉಳಿದ ಯಾರೇ ಆಗಲಿ ಈ ಗಟ್ಟಿತನ ತೋರಿಸುತ್ತಿರಲಿಲ್ಲ. ಸಿದ್ದರಾಮಯ್ಯನವರು ಇದ್ದ ಕಾರಣಕ್ಕೆ ಇದು ಸಾಧ್ಯವಾಗಿದೆಆರ್.ಬಿ. ತಿಮ್ಮಾಪುರ ಅಬಕಾರಿ ಸಚಿವ
ನಮ್ಮ ಸಿದ್ದರಾಮಯ್ಯ ಅವರು ಸಾಹು ಮಹಾರಾಜ್ ಮತ್ತು ನಾಲ್ವಡಿ ಅರಸರ ಪರಂಪರೆಯವರು. ಹೀಗಾಗಿಯೇ ಒಳ ಮೀಸಲಾತಿ ಜಾರಿ ಮಾಡುವ ನಿರ್ಣಯ ಕೈಗೊಳ್ಳಲು ಸಾಧ್ಯವಾಗಿದೆಎಲ್. ಹನುಮಂತಯ್ಯ ರಾಜ್ಯಸಭೆ ಮಾಜಿ ಸದಸ್ಯ
‘ಒಳ ಮೀಸಲಾತಿ ಆದಷ್ಟು ಶೀಘ್ರ ಜಾರಿಗೆ ತರಬೇಕು’ ‘ಒಳ ಮೀಸಲಾತಿ ಆದಷ್ಟು ಶೀಘ್ರ ಜಾರಿಗೆ ತರಬೇಕು. ಈ ಬಗ್ಗೆ ಪರಾಮರ್ಶಿಸಲು ರಚಿಸಲಾಗುವ ಆಯೋಗಕ್ಕೆ ವರದಿ ನೀಡಲು ಮೂರು ತಿಂಗಳಿಗಿಂತ ಹೆಚ್ಚು ಕಾಲಾವಕಾಶ ನೀಡಬಾರದು’ ಎಂದು ಮಾಜಿ ಸಚಿವರಾದ ಎಚ್. ಆಂಜನೇಯ ಶಿವಣ್ಣ ಮಾಜಿ ಸಂಸದರಾದ ಬಿ.ಎನ್. ಚಂದ್ರಪ್ಪ ಎಲ್. ಹನುಮಂತಯ್ಯ ನೇತೃತ್ವದ ನಿಯೋಗ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಸದಾಶಿವನಗರದಲ್ಲಿರುವ ಮನೆಯಲ್ಲಿ ಭೇಟಿ ಮಾಡಿ ಮನವಿ ಮಾಡಿತು. ಆಗ ಪ್ರತಿಕ್ರಿಯಿಸಿದ ಶಿವಕುಮಾರ್ ‘ಚುನಾವಣಾ ಪ್ರಣಾಳಿಕೆಯಲ್ಲಿಯೇ ‘ಒಳ ಮೀಸಲಾತಿ ಜಾರಿ ಭರವಸೆ ನೀಡಿದ್ದೆವು. ಚಿತ್ರದುರ್ಗದ ಸಮಾವೇಶದಲ್ಲೂ ಮಾತು ಕೊಟ್ಟಿದ್ದೆವು. ಅದಕ್ಕೆ ನಾವು ಬದ್ಧರಾಗಿದ್ದೇವೆ. ಒಳ ಮೀಸಲಾತಿ ವಿಚಾರದಲ್ಲಿ ಪರಿಶೀಲನಾರ್ಹ ದತ್ತಾಂಶವನ್ನು ಪರಿಗಣಿಸಬೇಕು ಮತ್ತು ಎಲ್ಲ ವರ್ಗಕ್ಕೂ ನ್ಯಾಯ ಸಿಗಬೇಕು ಎಂಬ ಉದ್ದೇಶದಿಂದ ಆಯೋಗ ರಚಿಸಲು ತೀರ್ಮಾನಿಸಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.