ಬೆಂಗಳೂರು: ವಿದ್ಯುತ್ ಉತ್ಪಾದನೆಗೆ ಬಳಸುವ ಕಲ್ಲಿದ್ದಲನ್ನು ಕೇಂದ್ರ ಸರ್ಕಾರ ಆಮದು ಮಾಡಿಕೊಳ್ಳಲು ಮುಂದಾಗಿದ್ದು ಎಸ್ಕಾಂಗಳ ಆರ್ಥಿಕ ಹೊರೆ ಹೆಚ್ಚಿಸಿರುವುದಲ್ಲದೇ, ವಿದ್ಯುತ್ ಗ್ರಾಹಕರಿಗೂ ಸುಡುವ ಬರೆ ಹಾಕಿದೆ.
2022 ಡಿಸೆಂಬರ್ ಮುನ್ನ ಕೇಂದ್ರ ವಿದ್ಯುತ್ ಸಚಿವಾಲಯದ ಸೂಚನೆ, ಅದರ ಅನುಸಾರ ‘ವಿದ್ಯುತ್ ಮೇಲ್ಮನವಿ ನ್ಯಾಯಮಂಡಳಿ’ಯ (ಎಟಿಇ) ತೀರ್ಪು ಆಧರಿಸಿ ಬಂದ ಆದೇಶಗಳು ಎಸ್ಕಾಂಗಳ ಪಾಲಿಗೆ ಹೊರೆಯಾಯಿತು.ಈ ಹೊರೆಯನ್ನು ಗ್ರಾಹಕರಿಗೆ ಹಂಚಬೇಕಾದ ಅನಿವಾರ್ಯ, ಅದರ ಮಧ್ಯೆಯೇ ದರ ಪರಿಷ್ಕರಣೆ, ಬಾಕಿ ಮೊತ್ತದ ಹೊಂದಾಣಿಕೆ ಎಲ್ಲವೂ ಜೂನ್ ತಿಂಗಳ ವಿದ್ಯುತ್ ಬಿಲ್‌ನಲ್ಲಿ ಜೋಡಣೆಯಾಗಿ, ಗ್ರಾಹಕರು ಆಘಾತಕ್ಕೊಳಗಾಗುವಷ್ಟು ಬಿಲ್ ಮೊತ್ತ ಬಂತು. ಕೇಂದ್ರ, ಎಟಿಇ ಹಾಗೂ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಕಾಲಕಾಲಕ್ಕೆ ಕೈಗೊಂಡ ಲಿಖಿತ ನಿರ್ಣಯ, ಆದೇಶಗಳು ವಾಸ್ತವ ಸಂಗತಿಯ ಮೇಲೆ ಬೆಳಕು ಚೆಲ್ಲುತ್ತವೆ.
ಕೇಂದ್ರ ಸರ್ಕಾರ ಆಮದು ಮಾಡಿಕೊಳ್ಳುತ್ತಿರುವ ಕಲ್ಲಿದ್ದಲು ಮೂರು ಪಟ್ಟು ಹೆಚ್ಚು ದುಬಾರಿಯಾಗಿದೆ. ದೇಶಿಯವಾಗಿ ಖರೀದಿಸುವ ಪ್ರತಿ ಮೆಟ್ರಿಕ್ ಟನ್ ಕಲ್ಲಿದ್ದಲು ಅಂದಾಜು ₹5 ಸಾವಿರಕ್ಕೆ ಲಭ್ಯವಿದ್ದರೆ, ಆಮದು ಮಾಡಿಕೊಳ್ಳುವ ಕಲ್ಲಿದ್ದಲು ಅದೇ ಹೊತ್ತಿಗೆ ₹15 ಸಾವಿರದಷ್ಟಿದೆ. ಹಲವು ಬಾರಿ ಈ ದರ ಏರುಪೇರಾಗುತ್ತದೆ. ಇದು ಹೊರೆಯಾಗಿ ಪರಿಣಮಿಸುತ್ತಿದೆ ಎನ್ನುತ್ತವೆ ಇಂಧನ ಇಲಾಖೆಯ ಮೂಲಗಳು.
ಕೇಂದ್ರ ಸರ್ಕಾರ ಪ್ರಸ್ತುತ ಆಮದು ಮಾಡಿಕೊಳ್ಳುತ್ತಿರುವ ಕಲ್ಲಿದ್ದಲಿನಿಂದಾಗಿ ದೇಶದ ಎಲ್ಲ ಸರ್ಕಾರಿ ವಿದ್ಯುತ್ ಸರಬರಾಜು ಕಂಪೆನಿಗಳಿಗೆ ಶೇ 30ರಷ್ಟು ಆರ್ಥಿಕ ಹೊರೆಯಾಗುತ್ತಿದೆ.
ಆಮದು ಮಾಡಿಕೊಳ್ಳುತ್ತಿರುವ ಕಲ್ಲಿದ್ದಲನ್ನು ದೇಶಿಯವಾಗಿ ಉತ್ಪಾದಿಸಲಾದ ಕಲ್ಲಿದ್ದಲು ಜತೆ ಕನಿಷ್ಠ ಶೇ 20ರಷ್ಟು ಮಿಶ್ರಣ ಮಾಡಲೇಬೇಕು ಎಂದು ಕೇಂದ್ರ ವಿದ್ಯುತ್ ಸಚಿವಾಲಯವು ಕರ್ನಾಟಕ ವಿದ್ಯುತ್ ನಿಗಮ ಸೇರಿದಂತೆ ರಾಜ್ಯಗಳಲ್ಲಿನ ಎಲ್ಲ ವಿದ್ಯುತ್ ಉತ್ಪಾದನೆ ಸಂಸ್ಥೆಗಳಿಗೆ ಸೂಚನೆ ನೀಡಿದೆ. ಹೆಚ್ಚುವರಿ ಕಲ್ಲಿದ್ದಲು ಬಳಸಿದಷ್ಟು ಗ್ರಾಹಕರಿಗೂ ಹೊರೆಯಾಗಲಿದ್ದು, ಇಂಧನ ವೆಚ್ಚ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎಂಬುದು ಅಧಿಕಾರಿಗಳು ವಿಶ್ಲೇಷಣೆ.
ಕಲ್ಲಿದ್ದಲು ಖರೀದಿಯ ವೆಚ್ಚವನ್ನು ಎಸ್ಕಾಂಗಳು ಮುಂಚಿತವಾಗಿಯೇ ಕೇಂದ್ರ ಸರ್ಕಾರದ ವಿದ್ಯುತ್ ಇಲಾಖೆಗೆ ಪಾವತಿಸುತ್ತವೆ. ಈ ವೆಚ್ಚವನ್ನು ಗ್ರಾಹಕರಿಂದಲೇ ಕಡ್ಡಾಯವಾಗಿ ವಸೂಲಿ ಮಾಡಬೇಕು ಎನ್ನುವ ನಿಯಮವನ್ನು ಕೇಂದ್ರ ಸರ್ಕಾರ ರೂಪಿಸಿದೆ. ಈ ನಿಯಮಕ್ಕೆ ಬದ್ಧವಾಗಿಯೇ ರಾಜ್ಯದಲ್ಲಿನ ಎಸ್ಕಾಂಗಳು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (ಕೆಇಆರ್‌ಸಿಗೆ) ನಿರ್ದೇಶನದಂತೆ ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆ (ಎಫ್‌ಪಿಪಿಸಿಎ) ಶುಲ್ಕವನ್ನು ಪಡೆಯುತ್ತವೆ.
2015ರಿಂದ ಇಂಧನ ಹೊಂದಾಣಿಕೆ ಶುಲ್ಕ (ಎಫ್‌ಎಸಿ) ವ್ಯವಸ್ಥೆಯೇ ಜಾರಿಯಲ್ಲಿತ್ತು. ಅಂದಿನಿಂದ ಪ್ರತಿ ಮೂರು ತಿಂಗಳಿಗೊಮ್ಮೆ ಮಾತ್ರ ಎಫ್‌ಎಸಿ ಪರಿಷ್ಕರಣೆಯಾಗುತ್ತಿತ್ತು. ಜತೆಗೆ ಇಂಧನದ ವೆಚ್ಚವನ್ನು ಮಾತ್ರ ಪಡೆಯಲಾಗುತ್ತಿತ್ತು.
ಆದರೆ, 2022ರ ಡಿಸೆಂಬರ್ 29ರಂದು ಗೆಜೆಟ್ ಮೂಲಕ ಅಧಿಸೂಚನೆ ಹೊರಡಿಸಿದ ಕೇಂದ್ರ ವಿದ್ಯುತ್ ಸಚಿವಾಲಯ, ಎಫ್‌ಸಿಎ ಅನ್ನು ಎಫ್‌ಪಿಪಿಸಿಎ ಆಗಿ ಬದಲಿಸಿತು. ಜತೆಗೆ, ಇಂಧನದ ವೆಚ್ಚವನ್ನು ಎಸ್ಕಾಂಗಳು ಪ್ರತಿ ತಿಂಗಳು ಗ್ರಾಹಕರಿಂದ ವಸೂಲಿ ಮಾಡಬೇಕು ಎನ್ನುವ ಸ್ಪಷ್ಟ ನಿರ್ದೇಶನ ನೀಡಿತು. ಇಂಧನದ ಜತೆಗೆ ವಿದ್ಯುತ್ ಪ್ರಸರಣ ಸೇರಿದಂತೆ ವಿವಿಧ ವೆಚ್ಚವನ್ನು ಸಹ ಭರಿಸಬೇಕು ಎನ್ನುವ ಸೂಚನೆ ನೀಡಲಾಗಿತ್ತು. ಹೀಗಾಗಿಯೇ, ಹೆಚ್ಚುವರಿ ಹೊರೆಯನ್ನು ಗ್ರಾಹಕರಿಂದ ಎಫ್‌ಪಿಸಿಸಿಎ ವಸೂಲಿ ಮಾಡುವ ಪ್ರಕ್ರಿಯೆಯನ್ನು ಎಸ್ಕಾಂಗಳು ಆರಂಭಿಸಿವೆ ಎಂದು ಇಂಧನ ಇಲಾಖೆ ಅಧಿಕಾರಿಗಳು ವಿವರಿಸುತ್ತಾರೆ.
ಕೇಂದ್ರದ ಸೂಚನೆ ಮೇರೆಗೆ ಎರಡು ತಿಂಗಳು ಕಾಲಾವಕಾಶ ಪಡೆದ ಎಸ್ಕಾಂಗಳು ಮಾರ್ಚ್ ತಿಂಗಳಿಂದ ಪರಿಷ್ಕರಿಸಿದ ಎಫ್‌ಪಿಪಿಸಿಎ ಶುಲ್ಕವನ್ನು ಪ್ರತಿ ತಿಂಗಳು ಗ್ರಾಹಕರಿಂದ ವಸೂಲಿ ಮಾಡುತ್ತಿವೆ. ಇಂಧನ ವೆಚ್ಚದಲ್ಲಿ ವ್ಯತ್ಯಾಸವಾದಂತೆ ಎಫ್‌ಪಿಸಿಎನಲ್ಲೂ ಏರಿಳಿಕೆಯಾಗುತ್ತದೆ. ಕೆಲವು ಬಾರಿ ನೆಗೆಟಿವ್ ಶುಲ್ಕ ಸಹ ಬರಬಹುದು. 2023ರ ಮಾರ್ಚ್‌ನಲ್ಲಿ ಒಂದು ಯೂನಿಟ್‌ಗೆ 59 ಪೈಸೆ, ಏಪ್ರಿಲ್‌ನಲ್ಲಿ 1 ಯೂನಿಟ್‌ಗೆ 90 ಪೈಸೆ ಹಾಗೂ ಮೇ ತಿಂಗಳಲ್ಲಿ 1.60 ಪೈಸೆ ಅನ್ನು ಗ್ರಾಹಕರ ಬಿಲ್‌ಗೆ ಸೇರಿಸಲೇಬೇಕಾಗಿತ್ತು.
ಮಾರ್ಚ್‌ನಿಂದ ಪೂರ್ವಾನ್ವಯವಾಗುವಂತೆ ಜೂನ್ ಬಿಲ್‌ನಲ್ಲಿ ಪ್ರತಿಯೂನಿಟ್‌ಗೆ ಒಟ್ಟು ₹3.09 ಅನ್ನು ಸೇರಿಸಿದ್ದರೆ ಬಿಲ್ ಮೊತ್ತ ಮತ್ತಷ್ಟು ಹೆಚ್ಚಳವಾಗುತ್ತಿತ್ತು. ಇದರ ಬದಲು ಮಾರ್ಚ್‌ನಲ್ಲಿ ವಸೂಲಿ ಮಾಡಬೇಕಾಗಿದ್ದ 59 ಪೈಸೆಯನ್ನಷ್ಟೇ ಸೇರಿಸಲಾಗಿದೆ. ಜುಲೈನಂತರ ಆರು ತಿಂಗಳ ಅವಧಿಯಲ್ಲಿ ಈ ಬಾಕಿಯನ್ನು ಹಂಚಿಕೆ ಮಾಡಿ ಬಿಲ್‌ನಲ್ಲಿ ಸೇರಿಸಲು ಅವಕಾಶ ಕೊಡುವಂತೆ ಎಸ್ಕಾಂಗಳ ಮನವಿಗೆ ಕೆಇಆರ್‌ಸಿ ಒಪ್ಪಿಗೆ ನೀಡಿದೆ. ಕೆಇಆರ್‌ಸಿ ಸೂಚನೆ ಪಾಲಿಸಿದ್ದರೆ ಜೂನ್‌ನಲ್ಲೇ ಬಿಲ್ ಮತ್ತಷ್ಟು ದುಬಾರಿಯಾಗುತ್ತಿತ್ತು ಎಂದು ಅಧಿಕಾರಿಗಳು ವಿವರಿಸುತ್ತಾರೆ.
ದರ ಕಡಿತದ ಅಧಿಕಾರ ನ್ಯಾಯಮಂಡಳಿಗಷ್ಟೆ
ವಿದ್ಯುತ್ ದರ ಕಡಿತಗೊಳಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ದೆಹಲಿಯಲ್ಲಿರುವ ವಿದ್ಯುತ್ ಮೇಲ್ಮನವಿ ನ್ಯಾಯಮಂಡಳಿಗೆ (ಎಟಿಇ) ಈ ಸಂಬಂಧ ಮೇಲ್ಮನವಿ ಸಲ್ಲಿಸಬಹುದು ಎಂದು ತಜ್ಞರು ಹೇಳುತ್ತಾರೆ.
ಪ್ರತಿ ನವೆಂಬರ್‌ನಲ್ಲಿ ವಿದ್ಯುತ್ ದರ ಪರಿಷ್ಕರಣೆಗೆ ಸಂಬಂಧಿಸಿದಂತೆ ಎಲ್ಲ ಎಸ್ಕಾಂಗಳು ಪ್ರಸ್ತಾವಗಳನ್ನು ಸಲ್ಲಿಸುತ್ತವೆ. ನಂತರ, ಗ್ರಾಹಕರು, ಉದ್ಯಮಿಗಳು, ಎಸ್ಕಾಂಗಳು, ದೊಡ್ಡ ಬಳಕೆದಾರರು ಸೇರಿದಂತೆ ವಿವಿಧ ವಲಯದ ಅಭಿಪ್ರಾಯ
ಗಳನ್ನು ಕೆಇಆರ್‌ಸಿ ಪಡೆಯುತ್ತದೆ. ನಂತರ, ಅದು ನೀಡುವ ಆದೇಶವನ್ನು ಎಲ್ಲ ಎಸ್ಕಾಂಗಳು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ.
‘ ಸೆಕ್ಷನ್ 111 ಅಡಿಯಲ್ಲಿ ವಿದ್ಯುತ್ ದರ ಪರಿಷ್ಕರಣೆಯನ್ನು ಪ್ರಶ್ನಿಸಿ ನ್ಯಾಯಮಂಡಳಿಯಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಯಾವುದೇ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ನಲ್ಲೂ ಅರ್ಜಿ ಹಾಕಲು ಅವಕಾಶ ಇಲ್ಲ’ ಎಂದು ಕೆಇಆರ್‌ಸಿ ಸಲಹಾ ಸಮಿತಿಯ ಮಾಜಿ ಸದಸ್ಯ ಎಂ.ಜಿ. ಪ್ರಭಾಕರ್ ಹೇಳುತ್ತಾರೆ.
ಸೌರಶಕ್ತಿ ಸಬ್ಸಿಡಿ ರದ್ದು
ಮನೆಗಳಿಗೆ ಸೌರಶಕ್ತಿ ಸಂಪರ್ಕ ಅಳವಡಿಸುವುದನ್ನು ಬಿಬಿಎಂಪಿ ಸೇರಿದಂತೆ ಸ್ಥಳೀಯ ಸಂಸ್ಥೆಗಳು ಕಡ್ಡಾಯಗೊಳಿಸಿರುವುದರಿಂದ ಗ್ರಾಹಕರಿಗೆ ನೀಡುತ್ತಿದ್ದ ಸಹಾಯಧನ
ವನ್ನು ಕೆಇಆರ್‌ಸಿ ರದ್ದುಪಡಿಸಿದೆ.
ಜತೆಗೆ, ಕೇಂದ್ರ ಸರ್ಕಾರ ಸೌರ ಛಾವಣಿ ಅಳವಡಿಸಲು ಶೇ 30ರಷ್ಟು ಸಹಾಯಧನ ನೀಡುತ್ತದೆ. ಹೀಗಾಗಿ, ಕೆಇಆರ್‌ಸಿ ಈ ಕ್ರಮಕೈಗೊಂಡಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.