ADVERTISEMENT

ನಂದಿನಿ | ಕ್ರಿಕೆಟ್ ಪ್ರಾಯೋಜಕತ್ವಕ್ಕೆ ಹಣವಿದೆ, ಪ್ರೋತ್ಸಾಹಧನಕ್ಕೆ ಇಲ್ಲವೇ: ಅಶೋಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಮೇ 2024, 6:47 IST
Last Updated 22 ಮೇ 2024, 6:47 IST
<div class="paragraphs"><p>ಸಚಿವ ಆರ್. ಅಶೋಕ ಮತ್ತು ಸಿದ್ದರಾಮಯ್ಯ</p></div>

ಸಚಿವ ಆರ್. ಅಶೋಕ ಮತ್ತು ಸಿದ್ದರಾಮಯ್ಯ

   

ಬೆಂಗಳೂರು: ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿರುವ ಹೈನುಗಾರರ ₹703 ಕೋಟಿ ಪ್ರೋತ್ಸಾಹಧನವನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಆಗ್ರಹಿಸಿದ್ದಾರೆ.

ಹಾಲು ಉತ್ಪಾದಕರ ಪ್ರೋತ್ಸಾಹಧನಕ್ಕೆ ಸಂಬಂಧಿಸಿ ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿರುವ ವಿಶೇಷ ವರದಿಯನ್ನು ಉಲ್ಲೇಖಿಸಿ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ರೈತ ವಿರೋಧಿ ಕಾಂಗ್ರೆಸ್‌ ಸರ್ಕಾರವು ರಾಜ್ಯದ ವಿವಿಧ ಹಾಲು ಒಕ್ಕೂಟಗಳಿಗೆ ಹಾಲು ಸರಬರಾಜು ಮಾಡುವ 26 ಲಕ್ಷಕ್ಕೂ ಹೆಚ್ಚು ರೈತರಿಗೆ ಸಲ್ಲಬೇಕಾದ ₹703 ಕೋಟಿ ಪ್ರೋತ್ಸಾಹಧನವನ್ನು ಕಳೆದ 8 ತಿಂಗಳಿನಿಂದ ಬಾಕಿ ಉಳಿಸಿಕೊಂಡಿದೆ’ ಎಂದು ಕಿಡಿಕಾರಿದ್ದಾರೆ.

ADVERTISEMENT

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ‘ನಂದಿನಿ’ ಹೆಸರಲ್ಲಿ ರಾಜಕೀಯ ಮಾಡಿ, ಈಗ ಅಮೃತದಂತಹ ಹಾಲು ಕೊಡುವ ರೈತರ ಬಾಳಲ್ಲಿ ವಿಷ ಹಿಂಡುವ ಪಾಪದ ಕೆಲಸ ಮಾಡುತ್ತಿದ್ದೀರಲ್ಲ, ಇದೇನಾ ನೀವು ನಮ್ಮ ‘ನಂದಿನಿ’ ಬ್ರ್ಯಾಂಡ್ ಉಳಿಸುವ ಪರಿ’ ಎಂದು ಪ್ರಶ್ನಿಸಿದ್ದಾರೆ.

‘ಸಿದ್ದರಾಮಯ್ಯ ಅವರೇ, ನಂದಿನಿ ಸಂಸ್ಥೆಯ ಕೋಟ್ಯಂತರ ರೂಪಾಯಿ ಹಣ ಬಳಸಿಕೊಂಡು ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ಪ್ರಾಯೋಜಕತ್ವ ಪಡೆಯಲು ನಿಮ್ಮ ಬಳಿ ಹಣವಿದೆ. ಆದರೆ, ನಂದಿನಿ ಬ್ರ್ಯಾಂಡ್ ಅನ್ನು ಕಟ್ಟಿ, ಬೆಳೆಸಿ, ಪೋಷಿಸುತ್ತಿರುವ ಹೈನುಗಾರರಿಗೆ ಸಮಯಕ್ಕೆ ಸರಿಯಾಗಿ ಪ್ರೋತ್ಸಾಹಧನ ನೀಡಲು ಮಾತ್ರ ಹಣವಿಲ್ಲ. ನಾಡಿನ ರೈತರ ಶಾಪ ನಿಮಗೆ ತಟ್ಟದೇ ಇರುವುದಿಲ್ಲ’ ಎಂದು ವಾಗ್ದಾಳಿ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.