ADVERTISEMENT

ಸಿಗದ ಪ್ರೋತ್ಸಾಹ ಧನ: ಹೈನುಗಾರಿಕೆಗೆ ಹಿನ್ನಡೆ

ಒಂದೆಡೆ ಬರಗಾಲ, ಇನ್ನೊಂದೆಡೆ ರಾಜ್ಯ ಸರ್ಕಾರದಿಂದ ಸಿಗದ ಸ್ಪಂದನೆ

ಬಸವರಾಜ ಹವಾಲ್ದಾರ
Published 21 ಮೇ 2024, 23:30 IST
Last Updated 21 ಮೇ 2024, 23:30 IST
<div class="paragraphs"><p>ಧಾರವಾಡ ಕೆಎಂಎಫ್‌ದಲ್ಲಿ ಕಾರ್ಯನಿರತ ಸಿಬ್ಬಂದಿ</p></div>

ಧಾರವಾಡ ಕೆಎಂಎಫ್‌ದಲ್ಲಿ ಕಾರ್ಯನಿರತ ಸಿಬ್ಬಂದಿ

   

ಬಾಗಲಕೋಟೆ: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ ವ್ಯಾಪ್ತಿಯ ಒಕ್ಕೂಟಗಳಿಗೆ ಪೂರೈಕೆ ಮಾಡಿದ ಹಾಲು ಉತ್ಪಾದಕರಿಗೆ ₹703 ಕೋಟಿ ಪ್ರೋತ್ಸಾಹ ಧನವನ್ನು (ಪ್ರಮುಖ ಒಕ್ಕೂಟಗಳಿಗೆ ₹618 ಕೋಟಿ) ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿದೆ. ಬರದಿಂದ ಈಗಾಗಲೇ ಸಂಕಷ್ಟದ ಸುಳಿಯಲ್ಲಿ ಸಿಲುಕಿರುವ ರೈತರಿಗೆ ಬಾಕಿ ಹಣ ಸಿಗದಿರುವುದು ಇನ್ನಷ್ಟು ಆತಂಕ ಮೂಡಿಸಿದೆ.

ಒಕ್ಕೂಟಗಳಿಗೆ ರೈತರು ಪೂರೈಸುವ ಪ್ರತಿ ಲೀಟರ್ ಹಾಲಿಗೆ ರಾಜ್ಯ ಸರ್ಕಾರ ₹5 ‍ಪ್ರೋತ್ಸಾಹ ಧನ ನೀಡುತ್ತದೆ. ಎರಡು ಅಥವಾ ಮೂರು ತಿಂಗಳಿಗೊಮ್ಮೆ ಪ್ರೋತ್ಸಾಹ ಧನ ಬಿಡುಗಡೆ ಆಗುತ್ತಿತ್ತು. ಈ ಸಲ 8 ತಿಂಗಳಾದರೂ ಬಿಡುಗಡೆ ಆಗಿಲ್ಲ.

ADVERTISEMENT

ರಾಜ್ಯದಲ್ಲಿ ನಿತ್ಯ 26 ಲಕ್ಷಕ್ಕೂ ಹೆಚ್ಚು ರೈತರ 16 ಒಕ್ಕೂಟಗಳ ಮೂಲಕ 85 ಲಕ್ಷ ಲೀಟರ್‌ ಹಾಲು ಸಂಗ್ರಹವಾಗುತ್ತದೆ. ಪ್ರತಿ ಲೀಟರ್‌ಗೆ ₹5 ರಂತೆ, ನಿತ್ಯ ₹4.25 ಕೋಟಿ ಪ್ರೋತ್ಸಾಹ ಧನ ರೈತರಿಗೆ ಸಿಗಬೇಕು. ಪರಿಶಿಷ್ಟ ಜಾತಿ ಮತ್ತು  ಪಂಗಡದ ಹಾಲು

ಉತ್ಪಾದಕರಿಗೆ ಫೆಬ್ರುವರಿವರೆಗೆ ಹಣ ಪಾವತಿಯಾಗಿದೆ. ಉಳಿದವರಿಗೆ ಸೆಪ್ಟೆಂಬರ್‌ ತಿಂಗಳಿನಿಂದ ಬಾಕಿ ಇದೆ.

ರಾಜ್ಯದಲ್ಲಿ ಬರ ತೀವ್ರವಾಗಿದ್ದು, ರೈತರಿಗೆ ಬೆಳೆ ಬೆಳೆಯಲು ಆಗಿಲ್ಲ. ನದಿ, ಕೆರೆ, ಕುಂಟೆ, ಕೊಳವೆಬಾವಿ ಮತ್ತು ಜಲಮೂಲಗಳು ಬತ್ತಿದ್ದು, ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ಬಹುತೇಕ ಕಡೆ ರೈತರು ದಿಕ್ಕು ತೋಚದ
ಸ್ಥಿತಿಯಲ್ಲಿದ್ದಾರೆ. ಉಪ ಉತ್ಪನ್ನದ ರೂಪದಲ್ಲಿ ರೈತರು ಒಂದೆರಡು ಎಮ್ಮೆ, ಆಕಳು ಸಾಕಿಕೊಂಡು ಬದುಕು ಕಟ್ಟಿ
ಕೊಂಡಿದ್ದಾರೆ. ಅಂಥವು ಲಕ್ಷಾಂತರ ಕುಟುಂಬಗಳಿವೆ. ಆ ಕುಟುಂಬಗಳಿಗೆ ಪ್ರೋತ್ಸಾಹ ಧನ ಸಿಗದ ಕಾರಣ ಅತಂತ್ರ ಪರಿಸ್ಥಿತಿ ನಿರ್ಮಾಣಗೊಂಡಿದೆ. ಆರ್ಥಿಕ ಸಮಸ್ಯೆ ತಾರಕಕ್ಕೇರಿದೆ. ಬರ ಕಾರಣ ಮೇವು ಸಿಗುತ್ತಿಲ್ಲ. ಜೊತೆಗೆ ಇಂಡಿ (ಪೌಷ್ಟಿಕ ಆಹಾರ), ಮೇವಿನ ಬೆಲೆ ಹೆಚ್ಚಾಗಿದೆ. ಇದಕ್ಕೆ ಪೂರಕವಾಗಿ ಹಾಲು ಉತ್ಪಾದನೆಯ ವೆಚ್ಚವೂ ದುಪ್ಪಟ್ಟಾಗಿದೆ.

‘ಹಾಲು ಒಕ್ಕೂಟ ನೀಡುವ ದರದಿಂದ ಹೈನುಗಾರಿಕೆ ಮಾಡಲು ಆಗದು. ರಾಜ್ಯ ಸರ್ಕಾರದ ಪ್ರೋತ್ಸಾಹ
ಧನದಿಂದ ಹೈನುಗಾರಿಕೆ ಮುಂದುವರಿಸಿದ್ದೆವು. ಈಗ ಪ್ರೋತ್ಸಾಹ ಧನ ಸಿಗದ ಕಾರಣ ತೊಂದರೆಯಾಗಿದೆ. ಮೇವಿಲ್ಲದ ಕಾಲದಲ್ಲಿ ಎಮ್ಮೆ, ಹಸು ಸಾಕುವುದು ಕಷ್ಟವಾಗಿದೆ. ನಮ್ಮ ಪರಿಸ್ಥಿತಿ ಅರ್ಥ ಮಾಡಿಕೊಂಡು, ಸರ್ಕಾರ ನೆರವಿಗೆ ಮುಂದಾಗಬೇಕು’ ಎಂದು ಬಾಗಲಕೋಟೆ ರೈತ ಕೆ. ಪ್ರಕಾಶ ಅಳಲು ತೋಡಿಕೊಂಡರು.

‘ಪ್ರತಿ ಬಾರಿ ಮೂರು ತಿಂಗಳಿಗೊಮ್ಮೆ ಪ್ರೋತ್ಸಾಹ ಧನ ಬರುತ್ತಿತ್ತು. ಸರ್ಕಾರವೇ ರೈತರ ಖಾತೆಗಳಿಗೆ ನೇರವಾಗಿ ಜಮಾ ಮಾಡುತ್ತಿ ತ್ತು. ಈ ಬಾರಿ ಸೆಪ್ಟೆಂಬರ್ ತಿಂಗಳಿನಿಂದ ಬಂದಿಲ್ಲ. ಸರ್ಕಾರ ಶೀಘ್ರವೇ ಬಿಡುಗಡೆ ಮಾಡಲಿದೆ’ ಎಂದು ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಪೀರಾ ನಾಯಕ ತಿಳಿಸಿದರು.

ಜಾನುವಾರುಗಳ ಮಾರಾಟಕ್ಕೂ ಹಿನ್ನಡೆ

ಬಾಗಲಕೋಟೆ: ಬರ ಇರುವುದರಿಂದ ರೈತರ ಬಳಿ ಮೇವಿಲ್ಲ. ಎಮ್ಮೆ, ಹಸು ಸೇರಿ ಜಾನುವಾರುಗಳ ಮಾರಾಟಕ್ಕೆ ರೈತರು ಮುಂದಾದರೂ ಖರೀದಿದಾರರಿಲ್ಲ. ಎಮ್ಮೆ, ಹಸುಗಳ ಸಾಕಣೆ ವೆಚ್ಚ ಹೆಚ್ಚಾಗಿದೆ. ಹಣ ನೀಡಿದರೂ ಮೇವು ಸಿಗುತ್ತಿಲ್ಲ. ಅವುಗಳ ಸಾಕಣೆಯಿಂದ ಲಾಭವೂ ಆಗುತ್ತಿಲ್ಲ. ಕೃಷಿಯ ಜತೆಗೆ ಹೈನುಗಾರಿಕೆಯೂ ನಷ್ಟದ ಹೊರೆಯನ್ನು ಹೆಚ್ಚಿಸುತ್ತಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು.

ಪ್ರೋತ್ಸಾಹ ಧನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಕೆಎಂಎಫ್‌ ಮೂಲಕ ಸರ್ಕಾರಕ್ಕೆ ಕೋರಲಾಗಿದೆ.ಮುಖ್ಯಮಂತ್ರಿಯವರನ್ನು ಭೇಟಿಯಾಗಿ, ಮನವಿಪತ್ರ ಸಲ್ಲಿಸಲಾಗಿದೆ
–ಸುಚರಿತ್ ಶೆಟ್ಟಿ., ಅಧ್ಯಕ್ಷ, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ
ಕೂಡಲೇ ಹಣ ಬಿಡುಗಡೆ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಬಿಡುಗಡೆ ಮಾಡದಿದ್ದರೆ, ಹೋರಾಟ ಮಾಡಲಾಗುವುದು
ಕೆಂಪೂಗೌಡ, ಜಿಲ್ಲಾ ಅಧ್ಯಕ್ಷ ರೈತ ಸಂಘ, ಮಂಡ್ಯ
ಪಶು ಆಹಾರದ ದರ ಹೆಚ್ಚಳವಾಗಿದೆ. ಪ್ರೋತ್ಸಾಹಧನವನ್ನೂ ಬಿಡುಗಡೆ ಮಾಡಿಲ್ಲ. ಇದೆಲ್ಲವೂ ಹೀಗೆಯೇ ಮುಂದುವರಿದರೆ, ಮುಂದಿನ ದಿನಗಳಲ್ಲಿ ಹೈನುಗಾರಿಕೆ ನಡೆಸುವುದೇ ಕಷ್ಟವಾಗಲಿದೆ.
–ನಾಗಾನಂದ, ರೈತ, ಪಿರಿಯಾಪಟ್ಟಣ

ಧಾರವಾಡ ಹಾಲು ಒಕ್ಕೂಟದಲ್ಲಿ ಹಾಲು ಸಂಗ್ರಹಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.