ಬೆಂಗಳೂರು: ಸುಪ್ರೀಂ ಕೋರ್ಟ್ ನಿರ್ದೇಶನದ ಅನುಸಾರ, ಚಿತ್ರದುರ್ಗ ಮುರುಘ ರಾಜೇಂದ್ರ ಬೃಹನ್ಮಠದ ಧಾರ್ಮಿಕ ಕಾರ್ಯಗಳ ಅನೂಚಾನ ಮುಂದುವರಿಕೆ ಮತ್ತು ಮೇಲುಸ್ತುವಾರಿಗಾಗಿ, ಚಿತ್ರದುರ್ಗ ‘ವನಶ್ರೀ ಸಂಸ್ಥಾನ ಮಠ’ದ (ಯೋಗವನ ಬೆಟ್ಟ) ಪೀಠಾಧಿಪತಿ ಬಸವ ಕುಮಾರ ಸ್ವಾಮೀಜಿ ಅವರನ್ನು ನೇಮಕ ಮಾಡಲಾಗಿದೆ.
ಈಗಾಗಲೇ ನಿವೃತ್ತ ಐಎಎಸ್ ಅಧಿಕಾರಿ ಶಿವಯೋಗಿ ಕಳಸದ ಅವರನ್ನು ಆಡಳಿತಾಧಿಕಾರಿ ಎಂದು ನೇಮಕ ಮಾಡಿದ್ದ ರಾಜ್ಯ ಸರ್ಕಾರ ಇವರ ಜೊತೆಗೆ ಮತ್ತೆ ಮೂವರು ಸದಸ್ಯರ ಹೊಸ ಸಮಿತಿಯನ್ನು ಅಡಕಗೊಳಿಸಿದೆ. ಇವರಲ್ಲಿ ಬಸವ ಕುಮಾರ ಸ್ವಾಮೀಜಿ, ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ನಿವೃತ್ತ ಹೆಚ್ಚುವರಿ ನಿರ್ದೇಶಕ ಎಸ್.ಎನ್.ಚಂದ್ರಶೇಖರ್ ಮತ್ತು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಎಮಿರಿಟಸ್ ಪ್ರೊಫೆಸರ್ ಡಾ.ಪಿ.ಎಸ್.ಶಂಕರ್ ಇದ್ದಾರೆ. ಈ ಸಂಬಂಧ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.
ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಶರಣರು ಪೋಕ್ಸೊ ಪ್ರಕರಣದಲ್ಲಿ ಆರೋಪಿಯಾದ ಕಾರಣ ಅವರ ಬಂಧನದ ನಂತರ ಬಸವಪ್ರಭು ಸ್ವಾಮೀಜಿ ಅವರನ್ನು ಧಾರ್ಮಿಕ ಕಾರ್ಯಗಳ ಮೇಲುಸ್ತುವಾರಿಗಾಗಿ ನೇಮಕ ಮಾಡಲಾಗಿತ್ತು. ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ಸುಪ್ರೀಂ ಕೋರ್ಟ್, ಮಠ ಮತ್ತು ಎಸ್‌ಜೆಎಂ ವಿದ್ಯಾಪೀಠದ ದೈನಂದಿನ ಕಾರ್ಯ ಚಟುವಟಿಕೆಗಳ ನಿಭಾವಣೆಗೆ ಹೊಸ ಸಮಿತಿ ನೇಮಿಸಲು ನಿರ್ದೇಶಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.