ಬಳ್ಳಾರಿ: ‘ವಿಜಯನಗರ ಕ್ಷೇತ್ರಕ್ಕೆ ಸೇರಿರುವ ಹೊಸಪೇಟೆಯಿಂದ ಕೇವಲ 30 ಕಿ.ಮೀ ದೂರದಲ್ಲಿರುವ ಸಂಡೂರನ್ನು ಅಲ್ಲಿಗೇ ಸೇರಿಸದೇ, 60 ಕಿ.ಮೀ ದೂರದಲ್ಲಿರುವ ಬಳ್ಳಾರಿಯಲ್ಲೇ ಉಳಿಸಬೇಕು ಎಂಬುದು ಸರಿಯಾದ ನಿಲುವಲ್ಲ...’
–ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲೆಯನ್ನು ರಚಿಸಬೇಕೆಂದು ಈ ಭಾಗದ ಸ್ವಾಮೀಜಿ ಮತ್ತು ರಾಜಕಾರಣಿಗಳು ಬುಧವಾರ ಮಾಡಿದ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಷಯವನ್ನು ಮುಂದಿನ ಸಚಿವ ಸಂಪುಟ ಸಭೆಗೆ ಮಂಡಿಸುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಿ ಬರೆದ ಟಿಪ್ಪಣಿಗೆ ಸಂಡೂರಿನ ಜನ ಹೀಗೆ ವಿರೋಧ ವ್ಯಕ್ತಪಡಿಸಿದ್ದಾರೆ.
‘ಸಾರ್ವಜನಿಕ ಮತ್ತು ಆಡಳಿತದ ಹಿತದೃಷ್ಟಿಯಿಂದ, ಜಿಲ್ಲೆಯ 11 ತಾಲ್ಲೂಕುಗಳ ಪೈಕಿ, ಬಳ್ಳಾರಿ, ಕುರುಗೋಡು, ಸಿರುಗುಪ್ಪ, ಸಂಡೂರು ಮತ್ತು ಕೂಡ್ಲಿಗಿಯನ್ನು ಮೂಲ ಬಳ್ಳಾರಿ ಜಿಲ್ಲೆಯಲ್ಲಿ ಉಳಿಸಬೇಕು’ ಎಂದು ಮುಖ್ಯಮಂತ್ರಿ ಅಭಿಪ್ರಾಯವು ಗುರುವಾರ ಸಂಜೆಯಿಂದಲೇ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ದಾರಿ ಮಾಡಿತ್ತು.
‘ಹೊಸಪೇಟೆ, ಕಂಪ್ಲಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹಡಗಲಿ ಮತ್ತು ಹರಪನಹಳ್ಳಿಯನ್ನು ಸೇರಿಸಿ, ಹೊಸಪೇಟೆ ಪಟ್ಟಣವನ್ನು ಕೇಂದ್ರವಾಗಿರಿಸಿಕೊಂಡು ವಿಜಯನಗರ ಜಿಲ್ಲೆಯನ್ನು ರಚಿಸುವುದು ತುಂಬ ಅಗತ್ಯವಿದೆ’ ಎಂದು ಯಡಿಯೂರಪ್ಪ ಪ್ರತಿಪಾದಿಸಿದ್ದಾರೆ.
ಆ ಬಗ್ಗೆ ಸಂಡೂರಿನ ಜನಕ್ಕೆ ಯಾವ ವಿರೋಧವೂ ಇಲ್ಲ. ‘ಸಂಡೂರನ್ನು ಬಳ್ಳಾರಿಯಲ್ಲೇ ಉಳಿಸಬೇಕು’ ಎಂದಿರುವುದಕ್ಕೆ ಮಾತ್ರ ತೀವ್ರ ವಿರೋಧ ವ್ಯಕ್ತವಾಗಿದೆ.
‘ಸಂಡೂರನ್ನು ಭವಿಷ್ಯದ ವಿಜಯನಗರ ಜಿಲ್ಲೆಗೆ ಸೇರಿಸಿದರೆ ತಾಲ್ಲೂಕಿನ ಜನರ ದೈನಂದಿನ ಕೆಲಸಗಳಿಗೆ ಅನುಕೂಲವಾಗುತ್ತದೆ. ಸಮಯ,ಹಣ ಉಳಿಯುತ್ತದೆ. ಈ ದಿಸೆಯಲ್ಲಿ ಸಂಡೂರಿನ ಶಾಸಕರು, ಸರ್ವ ಸಂಘಟನೆಗಳು ಮುಖ್ಯಮಂತ್ರಿಯನ್ನು ಒತ್ತಾಯಿಸಬೇಕು’ ಎಂದು ಸಂಡೂರಿನ ಜನಸಂಗ್ರಾಮ ಪರಿಷತ್ತಿನ ಕಾರ್ಯದರ್ಶಿ ಶ್ರೀಶೈಲ ಆಲ್ದಳ್ಳಿ ಅಭಿಪ್ರಾಯಪಟ್ಟಿದ್ದಾರೆ.
‘ಬೇರೆ ತಾಲ್ಲೂಕುಗಳಿಗೆ ಹೋಲಿಸಿದರೆ ಬಳ್ಳಾರಿಗೆ ಸಂಡೂರೇ ಹತ್ತಿರದಲ್ಲಿದೆ. ಈ ಅಂಶವನ್ನೂ ಗಮನಿಸಬೇಕು. ಸಿರುಗುಪ್ಪ ಮತ್ತು ಕುರುಗೋಡು ಹೊರತುಪಡಿಸಿ ಎಲ್ಲ ತಾಲ್ಲೂಕುಗಳೂ ಬಳ್ಳಾರಿಯಿಂದ ದೂರದಲ್ಲೇ ಇವೆ’ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.