ಮಂಡ್ಯ: ಐತಿಹಾಸಿಕ ಕೆಆರ್‌ಎಸ್ ಜಲಾಶಯದ ಗೇಟ್ ಆಧುನೀಕರಣ ಕಾಮಗಾರಿ ಕಳೆದೆರಡು ವರ್ಷಗಳಿಂದ ಕುಂಟುತ್ತಾ ಸಾಗುತ್ತಿದೆ. ಜೂನ್ ವೇಳೆಗೆ ಪೂರ್ಣಗೊಳ್ಳಬೇಕಾಗಿದ್ದ ಕಾಮಗಾರಿ ಶೀಘ್ರ ಮುಗಿಯುವ ಲಕ್ಷಣ ಕಾಣುತ್ತಿಲ್ಲ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವರ್ಷದೊಳಗೆ 2ನೇ ಬಾರಿಗೆ ಕೆಆರ್‌ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸುತ್ತಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ಬಾಗಿನ ಅರ್ಪಿಸುವ ವೇಳೆ ಈ ಕುರಿತು ಮಾತನಾಡಿದ್ದ ಮುಖ್ಯಮಂತ್ರಿಗಳು ಸಮರೋಪಾದಿಯಲ್ಲಿ ಗೇಟ್ ಅಳವಡಿಸಲು ಸೂಚನೆ ನೀಡಿದ್ದರು. ಆದರೆ, ನಿಗದಿತ ಅವಧಿ ಮುಗಿದರೂ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಈ ಬಾರಿ ಮುಖ್ಯಮಂತ್ರಿಗಳು ಕಾರಣ ಕೇಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
1932ರಲ್ಲಿ ಜಲಾಶಯ ನಿರ್ಮಾಣಗೊಂಡ ನಂತರ ಗೇಟ್‌ಗಳ ಆಧುನೀಕರಣ ಕಾಮಗಾರಿ ನಡೆದಿರಲಿಲ್ಲ. ಹಳೆಯ ಗೇಟ್‌ಗಳ ದುರಸ್ತಿ ಮಾಡುತ್ತಾ ಬರಲಾಗಿತ್ತು. ಹಳೆಯದಾಗಿದ್ದ ಗೇಟ್‌ಗಳಲ್ಲಿ ನೀರಿನ ಸೋರಿಕೆ ಹೆಚ್ಚಾಗಿದ್ದು ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಹರಿದು ಹೋಗುತ್ತಿತ್ತು. 2020ರಲ್ಲಿ ಗೇಟ್‌ಗಳ ಆಧುನೀಕರಣ ಕಾಮಗಾರಿಗೆ ₹ 58 ಕೋಟಿ ಹಣ ಬಿಡುಗಡೆ ಮಾಡಲಾಗಿತ್ತು.
ಕೆಆರ್‌ಎಸ್ ಜಲಾಶಯದಲ್ಲಿ ಒಟ್ಟು 171 ಗೇಟ್‌ಗಳಿವೆ. ಜಲಾಶಯದ 103 ಅಡಿ ಮಟ್ಟದಲ್ಲಿರುವ 48 ಗೇಟ್, 106 ಅಡಿಯ ಮಟ್ಟದಲ್ಲಿರುವ 40 ಗೇಟ್, 114 ಅಡಿ ಮಟ್ಟದಲ್ಲಿರುವ 48 ಗೇಟ್‌ಗಳ ಕಾಮಗಾರಿ ಆರಂಭವಾಗಿತ್ತು. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಅತೀ ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಕಾವೇರಿ ನೀರಾವರಿ ನಿಗಮಕ್ಕೆ ಸೂಚಿಸಲಾಗಿತ್ತು.
ಬೇಸಿಗೆ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಆಸಕ್ತಿ ತೋರಿಸಿಲ್ಲ. ಸದ್ಯ ಜಲಾಶಯ ತುಂಬಿರುವ ಕಾರಣ ಕಾಮಗಾರಿ ಸ್ಥಗಿತಗೊಂಡಿದೆ. ಜಲಾಶಯ ಭರ್ತಿಯಾಗಿರುವ ಕಾರಣದಿಂದಲೇ ಕಾಮಗಾರಿ ತಡವಾಗುತ್ತಿದೆ ಎಂದು ನಿಗಮದ ಎಂಜಿನಿಯರ್‌ಗಳು ನೆಪ ಹೇಳುತ್ತಿರುವುದು ಅವರ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
2008ರಲ್ಲೇ ಯೋಜನೆ: ಬಸವರಾಜ ಬೊಮ್ಮಾಯಿ ಅವರು ಜಲಸಂಪನ್ಮೂಲ ಸಚಿವರಾಗಿದ್ದ ವೇಳೆಯಲ್ಲೇ ಗೇಟ್‌ಗಳ ಆಧುನೀಕರಣ ಯೋಜನೆ ರೂಪಿಸಲಾಗಿತ್ತು. ಹಳೆಯ ಗೇಟ್‌ಗಳ ಅವಧಿ 35 ವರ್ಷ ಮಾತ್ರ, ಆದರೆ ಜಲಾಶಯ ನಿರ್ಮಿಸಿ 75 ವರ್ಷವಾದರೂ ಬದಲಾವಣೆ ಮಾಡದಿರುವುದಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು.
ಬೊಮ್ಮಾಯಿ ಅವರ ಆಸಕ್ತಿಯಿಂದಲೇ ಗೇಟ್ ಆಧುನೀಕರಣ ಕಾಮಗಾರಿಗೆ ಯೋಜನೆ ರೂಪಿಸಲಾಗಿತ್ತು. ಆದರೆ, ಸರ್ಕಾರಗಳು ಬದಲಾದ ಹಿನ್ನೆಲೆಯಲ್ಲಿ 2020ರವರೆಗೂ ಕಾಮಗಾರಿ ಆರಂಭವಾಗಿರಲಿಲ್ಲ. ಕಾಮಗಾರಿ ಆರಂಭವಾದ ನಂತರ ಈಚೆಗೆ ಕೇಂದ್ರ ಜಲಶಕ್ತಿ ಮತ್ತು ಬುಡಕಟ್ಟು ಕಲ್ಯಾಣ ಸಚಿವ ಬಿಶ್ವೇಶ್ವರ ಟುಡು, ರಾಜ್ಯ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಸಂಸದೆ ಸುಮಲತಾ, ಕೆಆರ್‌ಎಸ್ ಜಲಾಶಯ ಬಿರುಕುಬಿಟ್ಟಿದೆ ಎಂಬ ಹೇಳಿಕೆ ನೀಡಿ ಗೊಂದಲ ಸೃಷ್ಟಿಸಿದ್ದರು, ಅದಕ್ಕೆ ಅವರು ಯಾವುದೇ ವೈಜ್ಞಾನಿಕ ಕಾರಣ ನೀಡಿರಲಿಲ್ಲ. ಜಲಾಶಯ ಬಿರುಕು ಬಿಟ್ಟಿಲ್ಲ ಎಂದು ನಿಗಮದ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದರು.
‘ಈ ವರ್ಷ ಬೇಗ ಮಳೆಗಾಲ ಆರಂಭವಾದ ಕಾರಣ ಗೇಟ್ ಅಳವಡಿಕೆ ಕಾರ್ಯ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಜಲಾಶಯ ಭರ್ತಿಯಾಗಿರುವ ಕಾರಣ ಕಾಮಗಾರಿ ಸದ್ಯ ನಡೆಯುತ್ತಿಲ್ಲ. ನೀರು ಕಡಿಮೆಯಾದ ನಂತರವಷ್ಟೇ ಕಾಮಗಾರಿ ಮುಂದುವರಿಸಲಾಗುವುದು’ ಎಂದು ನಿಗಮದ ಅಧೀಕ್ಷಕ ಎಂಜಿನಿಯರ್ ಎಚ್.ಆನಂದ್ ತಿಳಿಸಿದರು.
ಸ್ವಯಂಚಾಲಿತ ಗೇಟ್ ಈಗಿಲ್ಲ
ಜಲಾಶಯ ನಿರ್ಮಾಣ ಕಾಲದಲ್ಲಿ ಮುಖ್ಯ ಎಂಜಿನಿಯರ್ ಆಗಿದ್ದ ಸರ್.ಎಂ.ವಿಶ್ವೇಶ್ವರಯ್ಯ ಅವರು ಆ ಕಾಲಕ್ಕೆ ಅತ್ಯಾಧುನಿಕ ತಂತ್ರಜ್ಞಾನದಿಂದ ಗೇಟ್ ರೂಪಿಸಿದ್ದರು. ದೇಶದಲ್ಲಿ ಮೊದಲ ಬಾರಿಗೆ ಸ್ವಯಂಚಾಲಿತ ಗೇಟ್‌ಗಳನ್ನು ಅಳವಡಿಸಿದ್ದರು. ನೀರು ಹೆಚ್ಚಾದಂತೆಲ್ಲಾ ಗೇಟ್‌ಗಳು ತಂತಾನೇ ತೆರೆದುಕೊಳ್ಳುವ ವ್ಯವಸ್ಥೆ ರೂಪಿಸಲಾಗಿತ್ತು. ಆದರೆ ನಿರ್ವಹಣೆ ಕೊರತೆಯಿಂದಾಗಿ ಅವುಗಳನ್ನು ಬಲುಬೇಗನೆ ಬಂದ್ ಮಾಡಲಾಯಿತು.
‘ಸದ್ಯ ನೀರು ಬಿಡುಗಡೆ ವಿಚಾರ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದ ಮೇಲೆ ಅವಲಂಬಿತವಾಗಿರುವ ಕಾರಣ ಸ್ವಯಂಚಾಲಿತ ಗೇಟ್‌ಗಳ ಅವಶ್ಯಕತೆ ಇಲ್ಲ’ ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದ್ದರು.
ಗೇಟ್‌ಗಳ ಚಿತ್ರಣ
* 171 ಒಟ್ಟು ಗೇಟ್
* 12ನೇ ಅಡಿ– 8 ಗೇಟ್
* 50ನೇ ಅಡಿ– 10 ಗೇಟ್
* 80ನೇ ಅಡಿ– 16 ಗೇಟ್
* 103ನೇ ಅಡಿ– 40 ಗೇಟ್
* 106ನೇ ಅಡಿ– 40 ಗೇಟ್
* 114ನೇ ಅಡಿ– 48 ಗೇಟ್
ತಾಂತ್ರಿಕ ಕಾರಣಕ್ಕೆ ಕೆಲ ಗೇಟ್‌ಗಳನ್ನು ಮುಚ್ಚಲಾಗಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.