ADVERTISEMENT

ಜನಸಂಖ್ಯೆ ಆಧಾರದಲ್ಲಿ ಮುಸ್ಲಿಮರ ಮೀಸಲಾತಿ ಹೆಚ್ಚಿಸಿ: ತನ್ವೀರ್‌ ಸೇಠ್‌ ಒತ್ತಾಯ

‘ಜನಸಂಖ್ಯೆಗೆ ಅನುಗುಣವಾಗಿ ಮುಸ್ಲಿಮರ ಮೀಸಲಾತಿ ಹೆಚ್ಚಿಸಬೇಕು. ಅಲ್ಲಿಯವರೆಗೂ ಸಮುದಾಯದ ಹೋರಾಟ ಮುಂದುವರಿಯಲಿದೆ’ ಎಂದು ಶಾಸಕ ತನ್ವೀರ್ ಸೇಠ್‌ ಹೇಳಿದರು.

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 10:32 IST
Last Updated 19 ನವೆಂಬರ್ 2024, 10:32 IST
<div class="paragraphs"><p>ಶಾಸಕ ತನ್ವೀರ್ ಸೇಠ್‌</p></div>

ಶಾಸಕ ತನ್ವೀರ್ ಸೇಠ್‌

   

ಮೈಸೂರು: ‘ಜನಸಂಖ್ಯೆಗೆ ಅನುಗುಣವಾಗಿ ಮುಸ್ಲಿಮರ ಮೀಸಲಾತಿ ಹೆಚ್ಚಿಸಬೇಕು. ಅಲ್ಲಿಯವರೆಗೂ ಸಮುದಾಯದ ಹೋರಾಟ ಮುಂದುವರಿಯಲಿದೆ’ ಎಂದು ಶಾಸಕ ತನ್ವೀರ್ ಸೇಠ್‌ ಹೇಳಿದರು.

ಮೈಸೂರು ನಗರದ ಜಗನ್ಮೋಹನ ಅರಮನೆಯಲ್ಲಿ ‘ರಾಜ್ಯ ಸರ್ಕಾರಿ ಮುಸ್ಲಿಂ ನೌಕಕರ ಕ್ಷೇಮಾಭಿವೃದ್ಧಿ ಸಂಘ’ವು ಮಂಗಳವಾರ ಆಯೋಜಿಸಿದ್ದ, ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಹಾಗೂ ಕರ್ನಾಟಕ ರಾಜ್ಯೋತ್ಸವದಲ್ಲಿ ಮಾತನಾಡಿ, ‘ಹಿಂದಿನ ಬಿಜೆಪಿ ಸರ್ಕಾರ ನ್ಯಾಯ, ರಕ್ಷಣೆ ಒದಗಿಸಿಲ್ಲವೆಂದು ಸಮುದಾಯದ ಶೇ 95ರಷ್ಟು ಮಂದಿ ಒಂದೇ ಪಕ್ಷಕ್ಕೆ ಮತ ಚಲಾಯಿಸಿದ್ದಾರೆ. ಬೇಡಿಕೆಗಳನ್ನು ಈಡೇರಿಸಲು ಆಗುವುದಿಲ್ಲವೆಂದರೆ ನೇರವಾಗಿ ಹೇಳಬಿಡಲಿ’ ಎಂದರು.

ADVERTISEMENT

‘ಮುಸ್ಲಿಮರಿಗಿದ್ದ ಶೇ 4ರಷ್ಟು 2 ‘ಬಿ’ ಮೀಸಲಾತಿಯನ್ನು ಹಿಂದಿನ ಬಿಜೆಪಿ ಸರ್ಕಾರವು ರದ್ದುಪಡಿಸಿದಾಗ, ಸುಪ್ರೀಂ ಕೋರ್ಟ್‌ ಮುಂದಿನ ಆದೇಶದವರೆಗೂ ಮೀಸಲಾತಿಯಲ್ಲಿ ಯಾವುದೇ ಬದಲಾವಣೆ ಮಾಡದಂತೆ ತೀರ್ಪು ನೀಡಿದೆ. ಅಂತಿಮ ತೀರ್ಪು ನ್ಯಾಯಾಲಯದಿಂದ ಬಂದಾಗ ಯಾರೂ ಮೀಸಲಾತಿ ಬದಲಾಯಿಸಲು ಕೈ ಹಾಕುವುದಿಲ್ಲ. ಹೀಗಾಗಿ ವ್ಯಾಜ್ಯ ಮುಂದುವರಿಸಿದ್ದೇವೆ’ ಎಂದರು.

‘ಓದುವ ವಿದ್ಯಾರ್ಥಿಗಳಿಗೆ ಯಾವುದೇ ಸೌಲಭ್ಯ ಕಡಿಮೆಯಾಗಬಾರದು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ 15.9 ಲಕ್ಷ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿತ್ತು. ಕೇಂದ್ರವು ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾರ್ಥಿವೇತನದ ತನ್ನ ಪಾಲನ್ನು ಕೊಡುತ್ತಿಲ್ಲ. ಗ್ಯಾರಂಟಿ ಯೋಜನೆ ಮಾದರಿಯಲ್ಲೇ ಶಿಕ್ಷಣ, ಉದ್ಯೋಗ ಹಾಗೂ ವಸತಿಗೆ ಆದ್ಯತೆ ನೀಡಬೇಕು’ ಎಂದು ಕೋರಿದರು.

‘ಸರ್ಕಾರದ ಕಾಮಗಾರಿಗಳ ಗುತ್ತಿಗೆಯಲ್ಲಿ ದಲಿತರಿಗೆ ಮೀಸಲಾತಿ ನೀಡಿದಂತೆ, ಅಲ್ಪಸಂಖ್ಯಾತರಿಗೂ ಕೊಡಬೇಕು. ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಯೋಜನೆಗಳ ಉದ್ದೇಶದಲ್ಲಿ ಸ್ಪಷ್ಟತೆ ಇಲ್ಲವಾಗಿದೆ. ಭೂಮಿಯೇ ಇಲ್ಲದವರಿಗೆ ‘ಗಂಗಾ ಕಲ್ಯಾಣ’ ಯೋಜನೆಯ ಉಪಯೋಗವಾದರೂ ಏನು? ಮುಸ್ಲಿಮರ ಶೇ 50ರಷ್ಟು ಜನರು ಗ್ರಾಮೀಣ ಭಾಗದಲ್ಲಿಯೇ ಇದ್ದಾರೆ. ಶೇ 3ಕ್ಕಿಂತಲೂ ಕಡಿಮೆ ಜನರಿಗೆ ಭೂಮಿ ಇದೆ. ಬದುಕು ಕಟ್ಟಿಕೊಳ್ಳುವುದೇ ಕಷ್ಟವಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.