ADVERTISEMENT

ವೃದ್ಧಾಪ್ಯ ವೇತನ ಹೆಚ್ಚಳಕ್ಕೆ ಕ್ರಮ: ಸಿಎಂ ಸಿದ್ದರಾಮಯ್ಯ

ಹಿರಿಯ ನಾಗರಿಕರ ದಿನಾಚರಣೆ ಸಮಾರಂಭದಲ್ಲಿ ಸಿದ್ದರಾಮಯ್ಯ ಭರವಸೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2024, 15:28 IST
Last Updated 1 ಅಕ್ಟೋಬರ್ 2024, 15:28 IST
<div class="paragraphs"><p>ಸಮಾರಂಭದಲ್ಲಿ&nbsp;ಎಂ.ಯು. ಪಾರ್ವತಿ,&nbsp;ಬಸವೇಶ್ವರ ವಿದ್ಯಾಸಂಸ್ಥೆಯ ಪ್ರತಿನಿಧಿ,&nbsp;ನೀಲಗುಂದ ಬಸವನಗೌಡ,&nbsp;ಅಶ್ವಿನಿ ರಂಜನ್,&nbsp;ಪಿ. ಗೋಪಾಲಕೃಷ್ಣ,&nbsp;ಜಿತೇಂದ್ರ ಮಜೀಥಿಯಾ ಹಾಗೂ&nbsp;ಎ.ಕೆ. ರಾಮೇಶ್ವರ ಅವರಿಗೆ ‘ಹಿರಿಯ ನಾಗರಿಕರ ರಾಜ್ಯ ಪ್ರಶಸ್ತಿ’ಯನ್ನು ಸಿದ್ದರಾಮಯ್ಯ ಪ್ರದಾನ ಮಾಡಿದರು.&nbsp;</p></div>

ಸಮಾರಂಭದಲ್ಲಿ ಎಂ.ಯು. ಪಾರ್ವತಿ, ಬಸವೇಶ್ವರ ವಿದ್ಯಾಸಂಸ್ಥೆಯ ಪ್ರತಿನಿಧಿ, ನೀಲಗುಂದ ಬಸವನಗೌಡ, ಅಶ್ವಿನಿ ರಂಜನ್, ಪಿ. ಗೋಪಾಲಕೃಷ್ಣ, ಜಿತೇಂದ್ರ ಮಜೀಥಿಯಾ ಹಾಗೂ ಎ.ಕೆ. ರಾಮೇಶ್ವರ ಅವರಿಗೆ ‘ಹಿರಿಯ ನಾಗರಿಕರ ರಾಜ್ಯ ಪ್ರಶಸ್ತಿ’ಯನ್ನು ಸಿದ್ದರಾಮಯ್ಯ ಪ್ರದಾನ ಮಾಡಿದರು. 

   

ಬೆಂಗಳೂರು: ‘ರಾಜ್ಯದಲ್ಲಿ 50 ಲಕ್ಷಕ್ಕೂ ಹೆಚ್ಚು ಹಿರಿಯ ನಾಗರಿಕರಿಗೆ ಮಾಸಾಶನ (ವೃದ್ಧಾಪ್ಯ ವೇತನ) ನೀಡಲಾಗುತ್ತಿದೆ. ಅವರ ಮಾಸಾಶನ ಹೆಚ್ಚಳದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 

ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಸಮಾರಂಭದಲ್ಲಿ ಹಿರಿಯ ನಾಗರಿಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ADVERTISEMENT

ವೇದಿಕೆಯಲ್ಲಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಮಾಸಾಶನ ಹೆಚ್ಚಿಸಬೇಕೆಂಬ ಹಿರಿಯ ನಾಗರಿಕರ ಬೇಡಿಕೆಯನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಸಿದ್ದರಾಮಯ್ಯ, ‘ಇತ್ತೀಚಿನ ವರ್ಷಗಳಲ್ಲಿ ವೃದ್ಧಾಶ್ರಮ ಸೇರುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ವೃದ್ಧಾಶ್ರಮಕ್ಕೆ ಬಂದವರು ಸಂತೋಷದಿಂದ, ಆರೋಗ್ಯದಿಂದ ಇರುವಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ವೃದ್ಧಾಪ್ಯ ವೇತನ ಹೆಚ್ಚಳದ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ವಹಿಸಲಾಗುವುದು’ ಎಂದು ಭರವಸೆ ನೀಡಿದರು.

ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿ, ‘ರಾಜ್ಯದಲ್ಲಿ ಸದ್ಯ 57.91 ಲಕ್ಷ ಹಿರಿಯ ನಾಗರಿಕರಿದ್ದಾರೆ. ಹಿರಿಯ ನಾಗರಿಕರಿಗೆ ಆರೋಗ್ಯ ವಿಮೆ ಒದಗಿಸುವ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಲಾಗಿದೆ. ಆರೋಗ್ಯ ವಿಮೆ ಯೋಜನೆ ಜಾರಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ರಾಜ್ಯದಲ್ಲಿ 63 ವೃದ್ಧಾಶ್ರಮಗಳಿದ್ದು, ಸದ್ಯ 1,575 ಮಂದಿ ಅಲ್ಲಿ ಆಶ್ರಯ ಪಡೆದಿದ್ದಾರೆ. ಇನ್ನೂ 19 ವೃದ್ಧಾಶ್ರಮಗಳನ್ನು ತೆರೆಯುವ ಪ್ರಕ್ರಿಯೆ ಜಾರಿಯಲ್ಲಿದೆ’ ಎಂದು ಹೇಳಿದರು. 

ಇಲಾಖೆ ವತಿಯಿಂದ 129 ತ್ರಿಚಕ್ರ ವಾಹನ ಹಾಗೂ 35 ಗಾಲಿ ಕುರ್ಚಿಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. ಈ ಬಾರಿ ಇನ್ನಷ್ಟು ಮಂದಿಗೆ ತ್ರಿಚಕ್ರ ವಾಹನ ವಿತರಿಸಲು ಅನುದಾನ ಒದಗಿಸುವಂತೆ  ಅವರು ಮನವಿ ಮಾಡಿದರು. 

ಪುಷ್ಠಿ ಯೋಜನೆಯಡಿ ಬಿಡುಗಡೆ ಮಾಡಲಾದ ಪೌಷ್ಟಿಕ ಆಹಾರ ಕಿಟ್‌ಗಳನ್ನು ವಿತರಿಸಲಾಯಿತು. ಮನೋವೈದ್ಯ ಡಾ.ಸಿ.ಆರ್. ಚಂದ್ರಶೇಖರ್ ಅವರು ವಿಶೇಷ ಉಪನ್ಯಾಸ ನೀಡಿದರು.

ಸಾಧಕರಿಗೆ ಪ್ರಶಸ್ತಿ ಪ್ರದಾನ 

ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ‘ಹಿರಿಯ ನಾಗರಿಕರ ರಾಜ್ಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಸಾಹಿತ್ಯ ಕ್ಷೇತ್ರದಿಂದ ಕಲಬುರಗಿಯ ಎ.ಕೆ. ರಾಮೇಶ್ವರ ಸಮಾಜಸೇವೆ ಕ್ಷೇತ್ರದಿಂದ ಹುಬ್ಬಳ್ಳಿಯ ಜಿತೇಂದ್ರ ಮಜೀಥಿಯಾ ಕ್ರೀಡಾ ಕ್ಷೇತ್ರದಿಂದ ಬೆಂಗಳೂರಿನ ಪಿ. ಗೋಪಾಲಕೃಷ್ಣ ಶಿಕ್ಷಣ ಕ್ಷೇತ್ರದಿಂದ ಮೈಸೂರಿನ ಅಶ್ವಿನಿ ರಂಜನ್ ಕಲಾ ಕ್ಷೇತ್ರದಿಂದ ದಾವಣಗೆರೆಯ ನೀಲಗುಂದ ಬಸವನಗೌಡ ಸಂಸ್ಥೆ ವಿಭಾಗದಲ್ಲಿ ಚಿತ್ರದುರ್ಗದ ಬಸವೇಶ್ವರ ವಿದ್ಯಾಸಂಸ್ಥೆ ಹಾಗೂ ಸಮಾಜಸೇವೆ ಕ್ಷೇತ್ರದಿಂದ ಕೊಡಗಿನ ಎಂ.ಯು. ಪಾರ್ವತಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹುಬ್ಬಳ್ಳಿಯ ರಜಿಯಾಬೇಗಂ ಅಕೂಟಬಾಗಿ ಕೊಪ್ಪಳದ ತಾಜುದ್ದೀನ ದಳಪತಿ ಹಾಗೂ ಬೆಳಗಾವಿಯ ಗುರುದೇವಿ ಹುಲೆಪ್ಪನವರ ಮಠ ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.