ಭರಮಸಾಗರ(ಚಿತ್ರದುರ್ಗ ಜಿಲ್ಲೆ): ರೋಗನಿರೋಧಕ ಶಕ್ತಿಯನ್ನು ಹೊಂದಿರುವ ಕತ್ತೆ ಹಾಲಿಗೆ ಈಗ ಎಲ್ಲಿಲ್ಲದ ಬೇಡಿಕೆ.
ಪಟ್ಟಣದಲ್ಲಿ ಕೆಲ ದಿನಗಳಿಂದ ಬೆಳ್ಳಂಬೆಳಿಗ್ಗೆ ಕತ್ತೆ ಹಾಲಿನ ಮಾರಾಟ ಜೋರಾಗಿಯೇ ನಡೆಯುತ್ತಿದೆ. ಮಕ್ಕಳಿಗೆ ₹ 50, ದೊಡ್ಡವರಿಗೆ ₹ 100 ಯಾರಿಗೆ ಬೇಕು ಕತ್ತೆಹಾಲು ಎಂದು ಕೂಗುತ್ತಾ ಇಲ್ಲಿನ ಬಡಾವಣೆಯ ಮಕ್ಕಳಿಗೆ ಹಾಲು ನೀಡುತ್ತಿದ್ದಾರೆ ತಮಿಳುನಾಡಿನ ಕುಮಾರ್ ಮತ್ತು ಅವರ ಕುಟುಂಬ.
ಕೆಮ್ಮು, ಜ್ವರ, ಕಫ, ಶೀತ ಸೇರಿ ಹಲವು ರೋಗಗಳಿಗೆ ಇದು ರಾಮಬಾಣವಂತೆ ಕೆಲಸ ಮಾಡುತ್ತದೆ ಎಂದು ತಿಳಿದಿರುವ ಜನ, ಕತ್ತೆ ಬಂದರೆ ಸಾಕು ಜನರು ತಮ್ಮ ಮಕ್ಕಳಿಗೆ ಕತ್ತೆ ಹಾಲನ್ನು ಕುಡಿಸಿ ತಾವು ಕೂಡ ಒಂದು ಸಿಪ್ ತೆಗೆದುಕೊಳ್ಳುತ್ತಾರೆ. ಕುಮಾರ್ ತಂಡ ಸುಮಾರು ಹನ್ನೆರಡು ಕತ್ತೆಗಳೊಂದಿಗೆ ಪ್ರತಿದಿನ ಬೆಳಿಗ್ಗೆ ಮನೆ ಮುಂದೆ ಹಾಲನ್ನು ಕರೆದು ಕೊಡುತ್ತಾರೆ.
‘ಕತ್ತೆ ಹಾಲನ್ನು ಬಿಸಿ ಮಾಡದೆ ನೀರು ಸೇರಿಸದೆ ಬೆಳಿಗ್ಗೆ ಖಾಲಿ ಹೊಟ್ಟೆಗೆ ಕುಡಿದರೆ ಒಳ್ಳೆಯದು. ಆದ್ದರಿಂದ ಬೆಳಿಗ್ಗೆ ಆರು ಗಂಟೆಯಾಗುತ್ತಲೇ ತಮ್ಮ ಕೆಲಸವನ್ನು ಆರಂಭಿಸುತ್ತೇವೆ’ ಎಂದು ಕುಮಾರ್ ಹೇಳುತ್ತಾರೆ.
ಒಂದು ಕತ್ತೆಯಿಂದ 250 ರಿಂದ 300 ಮಿ.ಲೀಟರ್‌ನಷ್ಟು ಮಾತ್ರ ಹಾಲು ಕರೆಯಲು ಸಾಧ್ಯ. ದಿನಕ್ಕೆ 500 ರಿಂದ 600 ಆದಾಯ ಸಿಗುತ್ತದೆ. ಕತ್ತೆಗಳ ಸಂಖ್ಯೆ ಕಡಿಮೆಯಾಗಿರುವುದರಿಂದ ದೂರದೂರಿನಿಂದ ಬರುವ ಕತ್ತೆಗಳ ಹಾಲಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಅವರು ಹೇಳುತ್ತಾರೆ.
ಕತ್ತೆ ಹಾಲಿನಲ್ಲಿ ವಿಶೇಷ ಪೌಷ್ಠಿಕಾಂಶ ಇದೆ. ಕ್ಯಾನ್ಸ್‌ರ್ ನಿರೋಧಕವಾಗಿದೆ. ಹೃದಯ ಸಂಬಂಧಿ, ಅಕಾಲಿಕ ಕಾಯಿಲೆಗಳಿಗೆ ಈ ಹಾಲು ಉತ್ತಮ ಎಂದು ವಿಜ್ಞಾನಿಗಳು ಹೇಳಿದ್ದಾರೆ ಎಂದು ಜಾನುವಾರು ತಜ್ಞ ಡಾ.ದಿವಾಕರ್ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.