ADVERTISEMENT

ರಾಜ್ಯದಲ್ಲಿ ಬಾಲಕರ ಮೇಲೆ ಹೆಚ್ಚಿದ ಲೈಂಗಿಕ ದೌರ್ಜನ್ಯ; ಬೆಂಗಳೂರಿನಲ್ಲೇ ಅಧಿಕ

ರಾಜ್ಯ ಅಪರಾಧ ದಾಖಲಾತಿ ವಿಭಾಗದಿಂದ ಮಾಹಿತಿ

ಎಂ.ಮಹೇಶ
Published 17 ಅಕ್ಟೋಬರ್ 2024, 0:04 IST
Last Updated 17 ಅಕ್ಟೋಬರ್ 2024, 0:04 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಮೈಸೂರು: ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ 334 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ.

2021ರಲ್ಲಿ 88, 2022ರಲ್ಲಿ 102 ಹಾಗೂ 2023ರಲ್ಲಿ 144 ಪ್ರಕರಣಗಳು ವರದಿಯಾಗಿವೆ. ವರ್ಷದಿಂದ ವರ್ಷಕ್ಕೆ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಜಾಸ್ತಿಯಾಗುತ್ತಲೇ ಇರುವುದಕ್ಕೆ ಅಧಿಕೃತ ಅಂಕಿ–ಅಂಶಗಳೇ ಸಾಕ್ಷ್ಯಗಳಾಗಿವೆ.

ADVERTISEMENT

ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಇಲ್ಲಿನ ಒಡನಾಡಿ ಸೇವಾ ಸಂಸ್ಥೆ ಸಲ್ಲಿಸಿದ್ದ ಅರ್ಜಿಗೆ ರಾಜ್ಯ ಅಪರಾಧ ದಾಖಲಾತಿ ವಿಭಾಗದ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಸಹಾಯಕ ಆಡಳಿತಾಧಿಕಾರಿ ಎಂ.ರೇಖಾ ಮಾಹಿತಿ ಒದಗಿಸಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳ ಪೊಲೀಸ್ ಠಾಣೆಗಳಲ್ಲಿ ದಾಖಲಾದ ದೂರುಗಳನ್ನು ಆಧರಿಸಿ ಮಾಹಿತಿ ಕ್ರೋಡೀಕರಿಸಲಾಗಿದೆ. ಪೊಲೀಸ್ ಐಟಿ–ತಂತ್ರಾಂಶದಲ್ಲಿ ಲಭ್ಯವಿರುವ ಅಂಕಿ–ಅಂಶಗಳನ್ನು ಜಿಲ್ಲಾವಾರು ಒದಗಿಸಲಾಗಿದೆ. ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಅಂದರೆ 42 ಪ್ರಕರಣಗಳು ದಾಖಲಾಗಿವೆ. ನಂತರದ ಸ್ಥಾನದಲ್ಲಿ ಮೈಸೂರು ಜಿಲ್ಲೆ ಇದ್ದು, ಇಲ್ಲಿ 29 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಬೆಳಗಾವಿ ಜಿಲ್ಲೆ ಹಾಗೂ ಹಾಸನ ಜಿಲ್ಲೆಯಲ್ಲಿ ತಲಾ 20 ಪ್ರಕರಣಗಳು ವರದಿಯಾಗಿವೆ. ಉಡುಪಿ ಜಿಲ್ಲೆಯಲ್ಲಿ 17 ಪ್ರಕರಣಗಳು ದಾಖಲಾಗಿವೆ. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಕರಾವಳಿ ಪ್ರದೇಶಗಳಿಗೆ ಹೋಲಿಸಿದರೆ ದಕ್ಷಿಣ ಕರ್ನಾಟಕದಲ್ಲೇ ಇಂತಹ ಪ್ರಕರಣಗಳು ಜಾಸ್ತಿ ನಡೆದಿರುವುದು ಅಂಕಿ–ಅಂಶಗಳಿಂದ ದೃಢಪಟ್ಟಿದೆ. ಯಾದಗಿರಿ ಮತ್ತು ಬಳ್ಳಾರಿಯಲ್ಲಿ ಅತಿ ಕಡಿಮೆ ಅಂದರೆ ತಲಾ ಇಬ್ಬರು ಬಾಲಕರು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಾಹಿತಿ ದೊರೆತಿದೆ.‌

ಕೆಲವು ಪ್ರಕರಣ:

ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಶಾಲೆಯೊಂದರ ಹಾಸ್ಟೆಲ್‌ನಲ್ಲಿ ಶಿಕ್ಷಕ ಬಾಲಕನೊಬ್ಬನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ಇದೇ ವರ್ಷದ ಏ‍ಪ್ರಿಲ್‌ನಲ್ಲಿ ದಾಖಲಾಗಿತ್ತು. ಆ ಬಾಲಕನಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ₹1 ಲಕ್ಷ ಪರಿಹಾರ ನೀಡಲಾಗಿತ್ತು. ಆರೋಪಿಯನ್ನು ಬಂಧಿಸಲಾಗಿತ್ತು. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಿ ಪರಿಹಾರ ಒದಗಿಸಲಾಗಿತ್ತು. ‘ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂತ್ರಸ್ತನಾದ ಬಾಲಕನಿಗೆ ಪರಿಹಾರ ನೀಡಿದ ಪ್ರಕರಣ ಇದೇ ಮೊದಲನೆಯದು’ ಎಂದು ಆಗ ಅಧಿಕಾರಿಗಳು ತಿಳಿಸಿದ್ದರು.

2023ರಲ್ಲಿ ದಾವಣಗೆರೆಯಲ್ಲಿ ಟ್ಯೂಷನ್‌ಗೆ ತೆರಳಿದ್ದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಶಿಕ್ಷಕನನ್ನು ಬಂಧಿಸಲಾಗಿತ್ತು. ಅದೇ ವರ್ಷ, ಕಲಬುರಗಿ ಜಿಲ್ಲೆ ಚಿಂಚೋಳಿ ತಾಲ್ಲೂಕಿನ ತಾಂಡಾವೊಂದರಲ್ಲಿ 5 ವರ್ಷದ ಬಾಲಕನ ಮೇಲೆ 21 ವರ್ಷದ ಯುವಕ ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಕರಣ ವರದಿಯಾಗಿತ್ತು.

ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಅಪರಾಧಿ ಹರೀಶ ಭುಜಂಗ ಮೋರೆಗೆ ಕಾರವಾರದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ 2022ರ ನವೆಂಬರ್‌ನಲ್ಲಿ ತೀರ್ಪು ನೀಡಿತ್ತು. ₹ 1 ಲಕ್ಷ ದಂಡ ಪಾವತಿಸುವಂತೆ ಮತ್ತು ಸಂತ್ರಸ್ತ ಬಾಲಕನಿಗೆ ₹ 3 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿತ್ತು.

ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ವೀರದೇವನಪುರದಲ್ಲಿ ಐವರು ಅಪ್ರಾಪ್ತರು, 9 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಅದನ್ನೇ ವಿಡಿಯೊ ಮಾಡಿ ಹರಿಬಿಟ್ಟಿದ್ದ ಘಟನೆಯೂ ವರದಿಯಾಗಿತ್ತು.

ಗಂಭೀರವಾಗಿ ಪರಿಗಣಿಸುತ್ತಿಲ್ಲ:

‘ಬಾಲಕರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ. ಇದರ ಗಂಭೀರತೆ ಸರ್ಕಾರಕ್ಕೆ ಮನವರಿಕೆಯಾಗಿಲ್ಲ. ಬಾಲಕರ ಮೇಲೆ ನಡೆದ ಆ ಕ್ರೌರ್ಯದ ನಂತರದ ಸ್ಥಿತಿಗತಿ ಏನಾಗುತ್ತದೆ ಎಂಬುದನ್ನೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಹೇಗೆ ನಿರ್ವಹಿಸಬೇಕು ಎಂಬುದು ಪೋಷಕರಿಗೆ ಗೊತ್ತಿರುವುದಿಲ್ಲ’ ಎಂದು ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕ ಎಂ.ಎಲ್. ಪರಶುರಾಮ್‌ ಆತಂಕ ವ್ಯಕ್ತಪಡಿಸಿದರು.

‘ಯಾವ ರೀತಿಯ ಮಕ್ಕಳ ಮೇಲೆ ಹೀಗಾಗುತ್ತಿದೆ, ಯಾರಿಂದ ಹೆಚ್ಚಾಗಿದೆ ಎಂಬ ದಾಖಲೆಯೂ ಸರ್ಕಾರದ ಬಳಿ ಇಲ್ಲ. ಹೀಗಾದವರಲ್ಲಿ ‘ಓಡಿಹೋಗುವ ಗುಣ’ ಬೆಳೆಯುತ್ತದೆ. ಅದನ್ನು ತಡೆಯುವ ಕೆಲಸ ಆಗಬೇಕು. ಪ್ರಸ್ತುತ ಸಂತ್ರಸ್ತರ ಬಾಲಕರ ಪರಿಸ್ಥಿತಿ ಅತಂತ್ರವಾಗುತ್ತಿದೆ. ಸಮಾಜದಲ್ಲಿ ಅವರು ಅವಮಾನಕ್ಕೆ ಒಳಗಾಗುತ್ತಿದ್ದಾರೆ’ ಎಂದು ಹೇಳಿದರು.

ನಿರ್ಲಕ್ಷಿಸಬಾರದು:

‘ಬಾಲಕರೂ ಜೀವಗಳೇ. ಅವರ ಮೇಲಿನ ಲೈಂಗಿಕ ದೌರ್ಜನ್ಯವನ್ನು ಸರ್ಕಾರ ನಿರ್ಲಕ್ಷಿಸುತ್ತಾ ಬರುತ್ತಿದೆ. ಅವರು ಹೇಗೋ ಬದುಕುತ್ತಾರೆ ಎಂದು ಭಾವಿಸಬಾರದು. ಕ್ರೌರ್ಯಕ್ಕೆ ಒಳಗಾದ ಅವರು ಅಸಹಜ ಲೈಂಗಿಕ ಸ್ಥಿತಿಯನ್ನು ತಲುಪಬಹುದು. ಆ ದಾಳಿಯು ಉಸಿರಿರುವರೆಗೂ ಕಾಡುವಂಥದು. ಆ ಸೇಡನ್ನು ಬೇರೆಯವರ ಮೇಲೆ ತೀರಿಸಿಕೊಳ್ಳಲು ಯತ್ನಿಸಬಹುದು. ಇದು ಆರೋಗ್ಯಕರ ಸಮಾಜಕ್ಕೆ ಒಳ್ಳೆಯದಲ್ಲ’ ಎಂದು ಹೇಳಿದರು ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ.

ಅತ್ಯಾಚಾರಿಗಳನ್ನು ಗಮನಿಸಿದಾಗ ಅವರಿಗೆ ಒಳ್ಳೆಯ ಬಾಲ್ಯ ಸಿಗದಿರುವುದೇ ಕಾರಣ ಎಂಬುದು ಹಲವು ಪ್ರಕರಣಗಳಲ್ಲಿ ಅಧ್ಯಯನದ ಮೂಲಕ ನಮಗೆ ತಿಳಿದುಬಂದಿದೆ
ಸ್ಟ್ಯಾನ್ಲಿ, ಒಡನಾಡಿ ಸೇವಾ ಸಂಸ್ಥೆ ಮೈಸೂರು
ಇಂತಹ ಪ್ರಕರಣಗಳ ತಡೆಗೆ ಕ್ರಮ ಕೈಗೊಳ್ಳಲು ಅಧ್ಯಯನಕ್ಕಾಗಿ ಸರ್ಕಾರ ಪರಿಣತರ ಸಮಿತಿ ರಚಿಸಬೇಕು. ಎಲ್ಲರಿಗೂ ಒಳ್ಳೆಯ ಬಾಲ್ಯ ದೊರೆಯುವಂತೆ ನೋಡಿಕೊಳ್ಳಬೇಕು
ಎಂ.ಎಲ್. ಪರುಶುರಾಮ್‌, ನಿರ್ದೇಶಕ ಒಡನಾಡಿ ಸೇವಾ ಸಂಸ್ಥೆ ಮೈಸೂರು

ಬೆಂಗಳೂರಿನಲ್ಲಿ ಹೆಚ್ಚು ಪ್ರಕರಣ

ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಅಂದರೆ 42 ಪ್ರಕರಣಗಳು ದಾಖಲಾಗಿವೆ. ನಂತರದ ಸ್ಥಾನದಲ್ಲಿ ಮೈಸೂರು ಜಿಲ್ಲೆ ಇದ್ದು, ಇಲ್ಲಿ 29 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಬೆಳಗಾವಿ ಜಿಲ್ಲೆ ಹಾಗೂ ಹಾಸನ ಜಿಲ್ಲೆಯಲ್ಲಿ ತಲಾ 20 ಪ್ರಕರಣಗಳು ವರದಿಯಾಗಿವೆ. ಉಡುಪಿ ಜಿಲ್ಲೆಯಲ್ಲಿ 17 ಪ್ರಕರಣಗಳು ದಾಖಲಾಗಿವೆ. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಕರಾವಳಿ ಪ್ರದೇಶಗಳಿಗೆ ಹೋಲಿಸಿದರೆ ದಕ್ಷಿಣ ಕರ್ನಾಟಕದಲ್ಲೇ ಇಂತಹ ಪ್ರಕರಣಗಳು ಜಾಸ್ತಿ ನಡೆದಿರುವುದು ಅಂಕಿ–ಅಂಶಗಳಿಂದ ದೃಢಪಟ್ಟಿದೆ. ಯಾದಗಿರಿ ಮತ್ತು ಬಳ್ಳಾರಿಯಲ್ಲಿ ಅತಿ ಕಡಿಮೆ ಅಂದರೆ ತಲಾ ಇಬ್ಬರು ಬಾಲಕರು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಾಹಿತಿ ದೊರೆತಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.