ಸಿಂಧನೂರು (ರಾಯಚೂರು ಜಿಲ್ಲೆ): ಪೌರತ್ವ (ತಿದ್ದುಪಡಿ) ಕಾಯ್ದೆ ಜಾರಿಯಾಗಿರುವುದರಿಂದ ತಾಲ್ಲೂಕಿನ ಬಾಂಗ್ಲಾ ಪುನರ್ವಸತಿ ಕ್ಯಾಂಪ್‍ಗಳಲ್ಲಿ ಸಂಭ್ರಮ ಮನೆ ಮಾಡಿದೆ.
1971ರಲ್ಲಿ ಬಾಂಗ್ಲಾ ದೇಶ ವಿಭಜನೆಯಾದ ಸಮಯದಲ್ಲಿ ವಲಸೆ ಬಂದಿರುವ ನಿರಾಶ್ರಿತರಿಗೆ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ದೇಶದೆಲ್ಲೆಡೆ ಸ್ಥಳಾವಕಾಶ ಮಾಡಿಕೊಟ್ಟಿದ್ದರು.ಒಡಿಶಾ, ರಾಜಸ್ಥಾನ, ಬಿಹಾರ, ಅಸ್ಸಾಂ, ತ್ರಿಪುರಾ, ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ ಸೇರಿ ಒಟ್ಟು 18 ರಾಜ್ಯಗಳಲ್ಲಿ ಪುನರ್ವಸತಿ ಕ್ಯಾಂಪ್‌ಗಳಿವೆ.
ಆರಂಭದಲ್ಲಿಯೇ ಭಾರತದ ಪೌರತ್ವ ನೀಡಲಾಗಿತ್ತು. ಆದರೆ 2003 ರಲ್ಲಿ ತಿದ್ದುಪಡಿಯಾದ ಪೌರತ್ವದ ಕಾಯ್ದೆಯಲ್ಲಿ ಕುಟುಂಬದ ಗಂಡ, ಹೆಂಡತಿ ಇಬ್ಬರೂ ಪೌರತ್ವ ಪಡೆದಿದ್ದರೆ ಮಾತ್ರ ಅವರ ಮಕ್ಕಳಿಗೆ ಪೌರತ್ವ ಲಭ್ಯ ಎನ್ನುವ ನಿಯಮ ಜಾರಿಯಾಯಿತು. ಇದರಿಂದ ತೊಂದರೆ ಅನುಭವಿಸುವಂತಾಗಿತ್ತು.
ಚುನಾವಣಾ ಗುರುತಿನ ಚೀಟಿ, ಆಹಾರ ಪಡಿತರ ಪಡೆಯಲು ಮತ್ತು ಮಕ್ಕಳನ್ನು ಶಾಲೆಗೆ ದಾಖಲಿಸುವುದು ಸಹ ಕಷ್ಟವಾಗಿತ್ತು. ಹಲವು ಹಕ್ಕುಗಳಿಂದ ವಂಚಿತರಾಗಿ ಬದುಕುತ್ತಿದ್ದರು. ಅವರಿಗೆ ಈಗ ಪೌರತ್ವ ಭಾಗ್ಯ ಸಿಗಲಿದೆ.
‘ಈ ಕಾಯ್ದೆಯಿಂದ ಸ್ವಾತಂತ್ರ್ಯ ಸಿಕ್ಕಂತಾಗಿದೆ’ ಎಂದು ಅಖಿಲ ಭಾರತ ಬಂಗಾಲಿ ನಿರಾಶ್ರಿತರ ಸಮನ್ವಯ ಸಮಿತಿಯ ರಾಷ್ಟೀಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಸೇನ್ ರಫ್ತಾನ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.