ಬೆಂಗಳೂರು: ದೇಶದ 73ನೇ ಸ್ವಾತಂತ್ರ್ಯೋತ್ಸವವಾದ ಇಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಜಿಲ್ಲಾಧಿಕಾರಿಗಳು ಧ್ಜಜಾರೋಹಣ ನೆರವೇರಿಸಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿಬಿಜೆಪಿಯ ನೂತನ ಸರ್ಕಾರ ರಚನೆಯಾಗಿದ್ದರೂ, ಮಂತ್ರಿ ಮಂಡಲ ರಚನೆಯಾಗಿಲ್ಲ.ಜಿಲ್ಲಾ ಉಸ್ತುವಾರಿ ಸಚಿವರ ನೇಮಕವೂ ಆಗಿಲ್ಲ. ಹೀಗಾಗಿ ಆಯಾ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳು, ತಾಲೂಕು ಕೇಂದ್ರಗಳಲ್ಲಿ ತಹಸಿಲ್ದಾರ್‌ರು ಧ್ಜಜಾರೋಹಣ ಮಾಡಬೇಕಾಗಿ ಸರ್ಕಾರ ಆದೇಶ ಹೊರಡಿಸಿತ್ತು. ಅದರಂತೆ ಇಂದು ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಜಿಲ್ಲಾಧಿಕಾರಿಗಳೇ ಧ್ಜಜಾರೋಹಣ ನೆರವೇರಿಸಿದರು.
ಈ ಮಧ್ಯೆ ರಾಜಧಾನಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಧ್ಜಜಾರೋಹಣ ನೆರವೇರಿಸಿದರು.
ಬೆಳಗಾವಿ: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಕೆ.ವಿ. ರಾಜೇಂದ್ರ, ಎಸ್ಪಿ ಲಕ್ಷ್ಮಣ ನಿಂಬರಗಿ, ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್ ಕುಮಾರ್, ಡಿಸಿಪಿ ಸೀಮಾ ಲಾಟ್ಕರ್ ಭಾಗಿಯಾಗಿದ್ದರು.
ಚಿಕ್ಕಮಗಳೂರು: ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು ಧ್ವಜಾರೋಹಣ ನೆರವೇರಿಸಿದರು.
ರಾಮನಗರ: ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಧಿಕಾರಿ ಕೆ. ರಾಜೇಂದ್ರ ಧ್ವಜಾರೋಹಣ ನೆರವೇರಿಸಿದರು. ಬಳಿಕ ಪಥ ಸಂಚಲನ ನಡೆಯಿತು
ಬೀದರ್: ಜಿಲ್ಲಾ ಆಡಳಿತದ ವತಿಯಿಂದ ಇಲ್ಲಿನ ಪೊಲೀಸ್ ಕವಾಯತು ಮೈದಾನದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವ ಧ್ವಜಾರೋರಣ ನೆರವೇರಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್, ಜಿ.ಪಂ.ಸಿಇಒ ಮಹಾಂತೇಶ ಬೀಳಗಿ,ಸಂಸದ ಭಗವಂತ ಖೂಬಾ, ಶಾಸಕರಾದ ಬಂಡೆಪ್ಪ ಕಾಶೆಂಪೂರ, ರಹೀಂ ಖಾನ್, ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಗೀತಾ ಚಿದ್ರಿ ಭಾಗವಹಿಸಿದ್ದರು.
ಕಲಬುರ್ಗಿ: ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ಅವರು ನಗರದ ಡಿಎಆರ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದರು. ಧ್ವಜಾರೋಹಣ ಬಳಿಕ ಪೊಲೀಸ್, ಕೆಎಸ್ಆರ್ ಪಿ, ಗೃಹ ರಕ್ಷಕ ದಳ, ಸೇಂಟ್ ಜೋಸೆಫ್ ಶಾಲೆ, ಸರ್ಕಾರಿ ಬಾಲಕರ ವಸತಿ ಮಕ್ಕಳು ಸೇರಿದಂತೆ ಒಟ್ಟು 17 ತಂಡಗಳು ಪಥಸಂಚಲನದಲ್ಲಿ ಭಾಗವಹಿಸಿದ್ದವು.ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪಿ.ರಾಜಾ, ಎಸ್ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಇದ್ದರು.
ವಿಜಯಪುರ: ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ 73ನೇ ಸ್ವಾತಂತ್ರ್ಯ ದಿನೋತ್ಸವದ ಧ್ವಜಾರೋಹಣವನ್ನು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ನೆರವೇರಿಸಿದರು.ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಎಂ.ಬಿ.ಪಾಟೀಲ, ಬಸನಗೌಡ ಪಾಟೀಲ ಯತ್ನಾಳ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕ್ಕಂ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಕಾಸ ಕಿಶೋರ ಸುರಳಕರ್ ಪಾಲ್ಗೊಂಡಿದ್ದರು. 25ಕ್ಕೂ ಹೆಚ್ಚು ತಂಡಗಳು ಆಕರ್ಷಕ ಪಥಸಂಚನ ನಡೆಸಿದವು. ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಪ್ರವಾಹ ಹಿನ್ನೆಲೆಯಲ್ಲಿ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜಿಲ್ಲಾಡಳಿತ ರದ್ದುಪಡಿಸಿದೆ.
ಕಾರವಾರ: ನಗರದ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಗುರುವಾರ 73ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ನೆರವೇರಿಸಿದರು. ಆದರೆ, ಧ್ವಜವು ಕಟ್ಟಿದ ದಾರದಿಂದ ಬಿಡಿಸಿಕೊಳ್ಳದ ಕಾರಣ ವೇದಿಕೆಯಲ್ಲಿದ್ದ ಅಧಿಕಾರಿಗಳು ತಬ್ಬಿಬ್ಬಾದರು. ಧ್ವಜಕ್ಕೆ ಕಟ್ಟಿದ ದಾರವು ಮಳೆಯಿಂದಾಗಿ ಬಿಗುವಾಗಿದ್ದರಿಂದ ಧ್ವಜ ಬಿಡಿಸಿಕೊಳ್ಳಲಿಲ್ಲ. ಹೀಗಾಗಿ ಕಟ್ಟಿದ್ದ ಧ್ವಜವನ್ನು ಕೆಳಗಿಳಿಸಿಕೊಂಡು ಬಿಡಿಸಿ, ಮತ್ತೆ ಮೇಲಕ್ಕೆ ಏರಿಸಲಾಯಿತು. ಎರಡು ಬಾರಿ ರಾಷ್ಟ್ರಗೀತೆಯನ್ನು ಹಾಡಲಾಯಿತು.
ಮಂಡ್ಯ: ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಧ್ವಜಾರೋಹಣ ನಡೆಸಿ ಗೌರವ ವಂದನೆ ಸ್ವೀಕರಿಸಿದರು.
ಯಾದಗಿರಿ: 73 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಧಿಕಾರಿ ಕುರ್ಮಾ ರಾವ್ ಧ್ವಜಾರೋಹಣ ನೆರವೇರಿಸಿದರು. ಶಾಸಕ ವೆಂಕಟರೆಡ್ಡಿ ಮುದ್ನಾಳ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ್, ಉಪಾಧ್ಯಕ್ಷೆ ಗಿರಿಜಮ್ಮ ಸದಾಶಿವಪ್ಪ ರೊಟ್ನಡಗಿ, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಭೀಮವ್ವ ಮಲ್ಲೇಶಪ್ಪ ಅಚೋಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ, ಜಿಲ್ಲಾ ಪಂಚಾಯತಿ ಸಿಒಇ ಕವಿತಾ ಮನ್ನಿಕೇರಿ ಇದ್ದರು.
ತುಮಕೂರು:ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಅವರು 73 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಧ್ವಜಾರೋಹಣ ನೆರವೇರಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಶುಭಾ ಕಲ್ಯಾಣ್ ಇದ್ದರು.
ಚಿತ್ರದುರ್ಗ: ಇಲ್ಲಿನ ಮುರುಘ ರಾಜೇಂದ್ರ ಕ್ರೀಡಾಂಗಣದಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಕಳೆಗಟ್ಟಿದೆ. ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಅವರು ಧ್ವಜಾರೋಹಣ ನೆರವೇರಿಸಿದರು. ಸಂಸದ ಎ. ನಾರಾಯಣಸ್ವಾಮಿ, ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಇದ್ದಾರೆ.
ಬಳ್ಳಾರಿ: ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಧ್ಜಜಾರೋಹಣ ನೆರವೇರಿಸಿದರು.ಸ್ವಾತಂತ್ರ್ಯ ಹೋರಾಟದಲ್ಲಿ ಬಳ್ಳಾರಿ ಜಿಲ್ಲೆಯ ಪಾತ್ರ ಅನನ್ಯವಾದುದು ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.ಜಿಲ್ಲೆಯ ವಿವಿಧೆಡೆಯ ಹೋರಾಟಗಾರರು ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹೆಚ್ಚಿಸಿದ್ದರು ಎಂದರು.
ದಾವಣಗೆರೆ: ಜಿಲ್ಲಾಧಿಕಾರಿ .ಜಿ.ಎನ್. ಶಿವಮೂರ್ತಿಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿದರು.ಇಂದಿನ ಮಕ್ಕಳಿಗೆ ಇತಿಹಾಸವನ್ನು ತಿಳಿಸಿ ಕೊಡುವ ಕೆಲಸ ನಾವು ಮಾಡುತ್ತಿಲ್ಲ. ಇತಿಹಾಸ ಮರೆತರೆ ದೇಶ ಮರೆತಂತೆ ಎಂದು ಅವರು ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಎಸ್.ಎ. ರವೀಂದ್ರನಾಥ್, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರೂ ಇದ್ದರು.
ರಾಯಚೂರು: ನಗರದ ಡಿಎಆರ್ ಮೈದಾನದಲ್ಲಿ ಜಿಲ್ಲಾಧಿಕಾರಿ ಶರತ್ ಬಿ. ಅವರು ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿದರು. ನಂತರ ವಿವಿಧ ಪದಾತಿದಳಗಳ ಪರಿವೀಕ್ಷಣೆ ಮಾಡಿದರು.
ಹಾಸನ:ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಅಕ್ರಂ ಪಾಷ ತ್ರಿವರ್ಣ ಧ್ವಜಾರೋಹಣ ಮಾಡಿದರು. ನಂತರ ತೆರೆದ ವಾಹನದಲ್ಲಿ ಸಾಗುತ್ತಾ ಪೊಲೀಸ್, ಎನ್.ಸಿ.ಸಿ., ಗೃಹ ರಕ್ಷಕ ದಳ ಹಾಗೂ ವಿವಿಧ ಶಾಲೆಗಳ ತಂಡಗಳಿಂದ ಗೌರವ ವಂದನೆ ಸ್ವೀಕರಿಸಿದರು. ವಿವಿಧ ಶಾಲಾ, ಕಾಲೇಜು ತಂಡಗಳು ಆಕರ್ಷಕ ಕವಾಯತು ನಡೆಸುವ ಮೂಲಕ ಗಮನ ಸೆಳೆದರು. ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯ ದಿನದ ಮಹತ್ವ ಸಾರುವ ರೂಪಕ ಪ್ರದರ್ಶಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು.
ಶಾಸಕ ಪ್ರೀತಂ ಜೆ.ಗೌಡ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ, ಪೊಲೀಸ್ ವರಿಷ್ಠಾಧಿಕಾರಿ .ಎ.ಎನ್. ಪ್ರಕಾಶ್ ಗೌಡ, ಹೆಚ್ಚುವರಿ ಜಿಲ್ಲಾಧಿಕಾರಿ ವೈಶಾಲಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.