ADVERTISEMENT

‘ವಿಷ’ ಸೇವಿಸದ ಸ್ವತಂತ್ರ ಧೋರಣೆಯ ಮಿತಭಾಷಿ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2018, 19:58 IST
Last Updated 10 ಡಿಸೆಂಬರ್ 2018, 19:58 IST
URJIT
URJIT   

ಬೆಂಗಳೂರು: ಭಾರತೀಯ ರಿಸರ್ವ್‌ ಬ್ಯಾಂಕ್‌ನಲ್ಲಿನ ಸರ್ಕಾರ ಹೇಳಿದಂತೆ ಕೇಳುವ ವ್ಯಕ್ತಿ ಎಂದೇ ಆರಂಭದಲ್ಲಿ ಪರಿಗಣಿಸಲಾಗಿದ್ದ ಉರ್ಜಿತ್‌ ಪಟೇಲ್‌ ಅವರು, ಅಲ್ಪಾವಧಿಯಲ್ಲಿಯೇ ಇಂತಹ ಟೀಕಾ ಸ್ವರೂಪದ ನೆರಳಿನಿಂದ ಹೊರ ಬಂದು ತಮಗೆ ತಮ್ಮದೇ ಆದ ಸ್ವತಂತ್ರ ಮನೋಭಾವ ಇದೆ ಎನ್ನುವುದನ್ನು ಸಾಬೀತುಪಡಿಸಿದ್ದರು.

ಕೇಂದ್ರೀಯ ಬ್ಯಾಂಕ್‌ನ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯದ ವಿಷಯದಲ್ಲಿ ಸರ್ಕಾರದ ಜತೆ ರಾಜಿ ಮಾಡಿಕೊಳ್ಳುವ ಸಾಧ್ಯತೆ ಇಲ್ಲವೇ ಇಲ್ಲ ಎಂದು ಅವರು ತಮ್ಮ ಜಿಗುಟು ನಿಲುವನ್ನು ಸ್ಪಷ್ಟಪಡಿಸಿದ್ದರು.

ರಘುರಾಂ ರಾಜನ್‌ ಅವರ ಅಧಿಕಾರಾವಧಿಯನ್ನು ಎರಡನೆ ಅವಧಿಗೆ ವಿಸ್ತರಿಸದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ, ಇವರನ್ನೇ ರಾಜನ್‌ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಿತ್ತು.

ADVERTISEMENT

ತಮಗೆ ಅನಿಸಿದ್ದನ್ನು ನೇರವಾಗಿ ಹೇಳುತ್ತಿದ್ದ ರಘುರಾಂ ರಾಜನ್‌ ಅವರಿಗೆ ಹೋಲಿಸಿದರೆ ಉರ್ಜಿತ್‌ ಅವರದ್ದು ಸಂಪೂರ್ಣ ಪ್ರತ್ಯೇಕ ವ್ಯಕ್ತಿತ್ವ. ಮಿತಭಾಷಿ, ಯಾರ ಸಂಪರ್ಕಕ್ಕೂ ಸಿಗುವುದಿಲ್ಲ, ಯಾರ ಮಾತಿಗೂ ಜಗ್ಗುವುದಿಲ್ಲ ಎನ್ನುವ ಟೀಕೆಗಳಿಗೂ ಗುರಿಯಾಗಿದ್ದರು.

ರಾಜನ್‌ ಅವರು ಆರಂಭಿಸಿದ್ದ ದೇಶಿ ಬ್ಯಾಂಕಿಂಗ್‌ ಕ್ಷೇತ್ರವನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಉರ್ಜಿತ್‌ ಅವರು ಭಾರಿ ಸರ್ಜರಿಯನ್ನೇ ಮಾಡಿದ್ದರು.

‘ಉರ್ಜಿತ್‌ ಅವರ ಈ ರಾಜೀನಾಮೆಯು ಪ್ರತಿಭಟನೆಯ ಸಂಕೇತವಾಗಿದ್ದು, ಇದಕ್ಕೆ ಕಾರಣವಾದ ಸಂಗತಿಗಳನ್ನು ಸರ್ಕಾರ ಅರ್ಥೈಸಿಕೊಳ್ಳಬೇಕಾಗಿದೆ’ ಎಂದು ರಘುರಾಂ ರಾಜನ್‌ ಪ್ರತಿಕ್ರಿಯಿಸಿದ್ದಾರೆ.

ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಮೌನ ಸಮ್ಮತಿ ನೀಡುವ ಮೂಲಕ ಸಮರ್ಥಿಸಿಕೊಂಡ ಆರೋಪಕ್ಕೆ ಗುರಿಯಾಗಿದ್ದ ಉರ್ಜಿತ್‌, ಸಾಲ ಮರುಪಾವತಿ ಮತ್ತು ಬ್ಯಾಂಕ್‌ಗಳ ಹಣಕಾಸು ಪರಿಸ್ಥಿತಿ ಸರಿಪಡಿಸಲು ದಿಟ್ಟ ಕ್ರಮಗಳನ್ನು ಕೈಗೊಂಡು ತಮ್ಮ ವಿರುದ್ಧದ ಟೀಕೆಗಳಿಂದ ಹೊರ ಬರಲು ಪ್ರಯತ್ನಿಸಿದ್ದರು.

‘ದೇಶಿ ಅರ್ಥ ವ್ಯವಸ್ಥೆಯನ್ನು ಸಮುದ್ರಮಂಥನದಂತೆ ಕಡೆಯಲಾಗುತ್ತಿದೆ. ಈ ಪ್ರಕ್ರಿಯೆ ಪೂರ್ಣಗೊಂಡು ದೇಶದ ಸುಸ್ಥಿರ ಸುರಕ್ಷತೆಯ ಅಮೃತ ಹೊರಬರುವವರೆಗೆ ಯಾರಾದರೂ ವಿಷ ಸೇವಿಸಬೇಕಾಗಿದೆ. ನೀಲಕಂಠನು ವಿಷ ಸೇವಿಸಿದಂತೆ ನಾವು ಕೂಡ (ಆರ್‌ಬಿಐ) ವಿಷ ಸೇವಿಸಲು ಸಿದ್ಧರಿದ್ದೇವೆ’ ಎಂದು ಹೇಳಿದ್ದ ಉರ್ಜಿತ್‌, ಸರ್ಕಾರದ ಜತೆಗಿನ ಸಂಘರ್ಷದಲ್ಲಿ ರಾಜೀನಾಮೆ ಪತ್ರ ಬಿಸಾಕಿ ವಿಷ ಸೇವಿಸದಿರುವ ದೃಢ ನಿರ್ಧಾರಕ್ಕೆ ಬಂದಂತೆ ಕಂಡು ಬಂದಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ.

1990ರ ನಂತರ ವೈಯಕ್ತಿಕ ಕಾರಣ ನೀಡಿ ಗವರ್ನರ್‌ ಹುದ್ದೆ ತೊರೆದ ಮೊದಲ ವ್ಯಕ್ತಿ ಇವರಾಗಿದ್ದಾರೆ.

ನೈರೋಬಿಯಲ್ಲಿನ ಉದ್ಯಮ ಕುಟುಂಬದಿಂದ ಬಂದಿರುವ ಉರ್ಜಿತ್‌, ಲಂಡನ್‌ ಸ್ಕೂಲ್‌ ಆಫ್ ಇಕನಾಮಿಕ್ಸ್‌ ಮತ್ತು ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದಾರೆ. 2013ರವರೆಗೂ ಇವರು ಕೆನ್ಯಾದ ರಾಷ್ಟ್ರೀಯತೆ ಹೊಂದಿದ್ದರು. ಆರ್‌ಬಿಐ ಡೆಪ್ಯುಟಿ ಗವರ್ನರ್‌ ಹುದ್ದೆಗೆ ನೇಮಕಗೊಳ್ಳುವ ಮುನ್ನ ಭಾರತದ ಪೌರತ್ವ ಪಡೆದುಕೊಂಡಿದ್ದರು.

‘ಎಚ್ಚರದಿಂದ ಇರುತ್ತೇವೆ’

‘ಗೂಬೆಯು ಬುದ್ಧಿವಂತಿಕೆಯ ಸಂಕೇತ ಎಂದು ಪರಿಗಣಿಸಲಾಗುತ್ತ ಬರಲಾಗಿದೆ. ಅದೇ ಬಗೆಯಲ್ಲಿ ಆರ್‌ಬಿಐ ಕೆಲಸ ಮಾಡುತ್ತಿದೆ. ಇತರರು ನಿದ್ದೆ ಮಾಡುವಾಗ ನಾವು (ಕೇಂದ್ರೀಯ ಬ್ಯಾಂಕ್‌) ಎಚ್ಚರದಿಂದ ಇರುತ್ತೇವೆ’ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಂತೆಯೇ ಪಟೇಲ್‌ ನಡೆದುಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.