ಬೆಂಗಳೂರು: ‘ಗೇಮ್ ಚೇಂಜರ್ಸ್’ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ‘ನೇಮ್ ಚೇಂಜರ್ಸ್’ ಆಗಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ದೆಹಲಿಯಲ್ಲಿ ನಡೆಯಲಿರುವ ಜಿ–20 ಶೃಂಗಸಭೆಯಲ್ಲಿ ಭಾಗವಹಿಸುವ ನಾಯಕರಿಗೆ ‘ಪ್ರೆಸಿಡೆಂಟ್ ಆಫ್ ಇಂಡಿಯಾ’ ಬದಲು ’ಪ್ರೆಸಿಡೆಂಟ್ ಆಫ್ ಭಾರತ್’ ಎನ್ನುವ ಹೆಸರಿನಲ್ಲಿ ರಾಷ್ಟ್ರಪತಿಗಳು ನೀಡಿರುವ ಔತಣಕೂಟದ ಆಹ್ವಾನ ಪತ್ರಿಕೆ ಈಗ ವಿವಾದಕ್ಕೆ ಕಾರಣವಾಗಿದ್ದು, ಕೇಂದ್ರ ಸರ್ಕಾರದ ಈ ನಡೆಗೆ ವಿರೋಧ ಪಕ್ಷಗಳ ‘ಇಂಡಿಯಾ’ ಒಕ್ಕೂಟದ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹೆಸರುಗಳ ಬದಲಾವಣೆ ವಿಚಾರ ಪ್ರಸ್ತಾಪಿಸಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ‘2014ರ ಮೊದಲು ಅಮೆರಿಕ, ಬ್ರಿಟನ್, ರಷ್ಯಾಗಳಂತಹ ಮುಂದುವರೆದ ದೇಶಗಳೊಂದಿಗೆ ಭಾರತದ ಸ್ಪರ್ಧೆ ಇತ್ತು. ಈಗ ಗುಜರಾತ್ ಮಾಡೆಲ್, ಯುಪಿ ಮಾಡೆಲ್ ಹೆಸರಲ್ಲಿ ಜಾತಿ ಜನಾಂಗಗಳ ನಡುವೆ ದ್ವೇಷ ಬಿತ್ತಿ ‘ಮಣಿಪುರ ಮಾಡೆಲ್’ ಸೃಷ್ಟಿಸಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಯಕಶ್ಚಿತ್ ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾಗಳೊಂದಿಗೆ ಭಾರತವನ್ನು ತುಲನೆ ಮಾಡಿಕೊಂಡು ಬೆನ್ನುತಟ್ಟಿಕೊಳ್ಳುವ ಪರಿಸ್ಥಿತಿಗೆ ತಂದಿಟ್ಟಿರುವ ಬಿಜೆಪಿಯಿಂದ ಹೆಸರುಗಳ ಬದಲಾವಣೆಗಳನ್ನಲ್ಲದೆ ಬೇರೆ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.
ಸಮರ್ಥ ಆಡಳಿತಗಾರರು ಭಾರತದಲ್ಲಿ ಬದಲಾವಣೆ ತರುತ್ತಾರೆಯೇ ಹೊರತು ಭಾರತದ ಹೆಸರಿನ ಬದಲಾವಣೆಯನ್ನಲ್ಲ ಎಂದು ಪ್ರಿಯಾಂಕ್ ಕಿಡಿಕಾರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.