ADVERTISEMENT

ಲಿಬಿಯಾ ಪ್ರವೇಶ ನಿರ್ಬಂಧ ತೆರವು: ಆರತಿ ಕೃಷ್ಣ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2024, 14:32 IST
Last Updated 15 ನವೆಂಬರ್ 2024, 14:32 IST
ಆರತಿ ಕೃಷ್ಣ
ಆರತಿ ಕೃಷ್ಣ   

ಬೆಂಗಳೂರು: ಆಫ್ರಿಕಾ ಖಂಡದ ಲಿಬಿಯಾದಲ್ಲಿ ಆಂತರಿಕ ಸಂಘರ್ಷ ನಿಂತಿರುವ ಬೆನ್ನಲ್ಲೇ, ಲಿಬಿಯಾಗೆ ಹೋಗುವವರ ಮೇಲಿದ್ದ ನಿರ್ಬಂಧವನ್ನು ಭಾರತ ಸರ್ಕಾರ ರದ್ದುಪಡಿಸಿದೆ ಎಂದು ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಆರತಿ ಕೃಷ್ಣ ತಿಳಿಸಿದ್ದಾರೆ.

ವೀಸಾ ಹೊಂದಿರುವವರು ಇನ್ನುಮುಂದೆ ಆ ದೇಶಕ್ಕೆ ಹೋಗಲು ಯಾವುದೇ ನಿರ್ಬಂಧವಿಲ್ಲ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

2011ರಲ್ಲಿ ಆಂತರಿಕ ರಾಜಕೀಯ ಸಂಘರ್ಷದಿಂದ 18 ಸಾವಿರಕ್ಕೂ ಹೆಚ್ಚು ಭಾರತೀಯರನ್ನು ವಾಪಸ್‌ ಕರೆತರಲಾಗಿತ್ತು. 2014ರಲ್ಲಿ ಐಎಸ್‌ ಉಗ್ರರು ಮತ್ತು ಸರ್ಕಾರದ ನಡುವಿನ ಕಾಳಗದಿಂದ ಇನ್ನೂ ನಾಲ್ಕು ಸಾವಿರ ಭಾರತಿಯರನ್ನು ವಾಪಸ್‌ ಕರೆ ತರಲಾಗಿತ್ತು. 2016ರಲ್ಲಿ ಸರ್ಕಾರ ಮತ್ತು ಉಗ್ರರ ಕಾಳಗದಲ್ಲಿ ಭಾರತ ಮೂಲದ ದಾದಿಯೊಬ್ಬರು ಮೃತಪಟ್ಟ ಕಾರಣ ಲಿಬಿಯಾ ಪ್ರವಾಸಕ್ಕೆ ಭಾರತ ಸರ್ಕಾರ ನಿರ್ಬಂಧ ವಿಧಿಸಿತ್ತು. ಇದೀಗ ಪರಿಸ್ಥಿತಿ ತಿಳಿಯಾಗಿದ್ದು, ಉದ್ಯೋಗ ನಿಮಿತ್ತ ಅಲ್ಲಿ ನೆಲಸುವುದಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ವಿವರಿಸಿದರು.

ADVERTISEMENT

ಅಲ್ಲಿನ ತೈಲ ಮತ್ತು ಅನಿಲ ಕ್ಷೇತ್ರದಲ್ಲಿ ಭಾರತೀಯರೇ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಭಾರತೀಯರು ವಾಪಸ್‌ ಬಂದ ಕಾರಣ ಆ ಜಾಗವನ್ನು ಪಾಕಿಸ್ತಾನಿಗಳು ಮತ್ತು ಬಾಂಗ್ಲಾದೇಶಿಯರು ತುಂಬುತ್ತಿದ್ದಾರೆ. ಲಿಬಿಯಾದವರಿಗೆ ಭಾರತೀಯರ ಮೇಲೆ ವಿಶ್ವಾಸ ಹೆಚ್ಚು. ಇದಲ್ಲದೇ ನರ್ಸಿಂಗ್‌, ವೈದ್ಯಕೀಯ, ಸಿಮೆಂಟ್‌, ಉಕ್ಕು ಮತ್ತು ಬೋಧನಾ ಕ್ಷೇತ್ರದಲ್ಲೂ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಭಾರತದ ವಿದೇಶಾಂಗ ವ್ಯವಹಾರಗಳ ಇಲಾಖೆ ಜತೆ ಮಾತುಕತೆ ನಡೆಸಿ ಲಿಬಿಯಾ ಪ್ರವೇಶಕ್ಕಿದ್ದ ನಿರ್ಬಂಧ ತೆಗೆಸುವಲ್ಲಿ ಆರತಿ ಕೃಷ್ಣ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಲಿಬಿಯಾ ಭಾರತೀಯ ಸಂಘದ ಅಧ್ಯಕ್ಷ ರಾಜಾರಾಂ ತಿಳಿಸಿದರು.

ಪೆಟ್ರೋಲಿಯಂ ಮತ್ತು ಅನಿಲ ಕ್ಷೇತ್ರದಲ್ಲಿ ಭಾರತೀಯರಿಗೆ ಉತ್ತಮ ಉದ್ಯೋಗಾವಕಾಶಗಳಿವೆ. ಅಲ್ಲಿ ಡಾಲರ್‌ ರೂಪದಲ್ಲಿ ಭಾರತೀಯರಿಗೆ ವೇತನ ಪಾವತಿಸಲಾಗುತ್ತದೆ. ಇದರ ಅವಕಾಶವನ್ನು ಕನ್ನಡಿಗರೂ ಸೇರಿ ಎಲ್ಲ ಭಾರತೀಯರು ಬಳಸಿಕೊಳ್ಳಬೇಕು ಎಂದೂ ಅವರು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.