ಬೆಂಗಳೂರು: ವೀರ ಸಾವರ್ಕರ್ ಅವರ ಧೀರತೆಗೆ ಬೆರಗಾಗಿ ಸ್ವತಃ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ‘ಭಾರತದ ವೀರ ಸುಪುತ್ರ’ ಎಂದು ಸಂಬೋಧಿಸಿದ್ದರು ಎಂದು ಬಿಜೆಪಿ ಹೇಳಿದೆ.
‘ಹಿಂದುತ್ವವಾದಿ ವಿ.ಡಿ.ಸಾವರ್ಕರ್ ಅವರು ಬ್ರಿಟಿಷರಿಗೆ ಸಹಾಯ ಮಾಡಿದ್ದರು. ಅಲ್ಲದೆ, ಕ್ಷಮಾದಾನ ಕೋರಿ ಪತ್ರವನ್ನೂ ಬರೆದಿದ್ದರು’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಹೇಳಿದ್ದರು.
ರಾಹುಲ್ ಹೇಳಿಕೆ ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಸ್ವತಃ ಇಂದಿರಾ ಗಾಂಧಿ ಅವರು ಸಾವರ್ಕರ್ ಜನ್ಮಶತಮಾನೋತ್ಸವ ಆಚರಣೆಗೆ ಸಹಕರಿಸಿದ್ದರು. ಸಾವರ್ಕರ್ ಕುರಿತಾಗಿ ಅಂಚೆ ಚೀಟಿ ಬಿಡುಗಡೆ ಮಾಡಿದ್ದರು’ ಎಂದು ತಿಳಿಸಿದೆ.
‘ಸಾವರ್ಕರ್ ಕುರಿತು ಸಾಕ್ಷ್ಯಚಿತ್ರ ನಿರ್ಮಿಸಲು ಇಂದಿರಾ ಗಾಂಧಿ ಆದೇಶ ಹೊರಡಿಸಿದ್ದರು. ಜತೆಗೆ ಸಾವರ್ಕರ್ ಟ್ರಸ್ಟ್‌ಗೆ ₹11 ಸಾವಿರ ದೇಣಿಗೆ ಕೂಡಾ ನೀಡಿದ್ದರು’ ಎಂದು ಬಿಜೆಪಿ ನೆನಪಿಸಿಕೊಂಡಿದೆ.
ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿ ಹೇಳಿಕೆ ಖಂಡಿಸಿ ಟ್ವೀಟ್ ಮಾಡಿರುವ ಬಿಜೆಪಿ, ‘ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಬೆಳೆದ ರಾಜಕೀಯ ನಿರುದ್ಯೋಗಿ ರಾಹುಲ್ ಗಾಂಧಿ ಅವರು ವೀರ ಸಾವರ್ಕರ್ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ. ಕಠಿಣಾತಿ ಕಠಿಣ ಶಿಕ್ಷೆ ಎದುರಿಸಿದ ಸಾವರ್ಕರ್ ವೀರನಲ್ಲ ಎಂದಾದರೆ, ಅಪ್ರಬುದ್ಧ ನಡೆಗಳಿಂದ ನ್ಯಾಯಾಲಯದಿಂದ ಆಗಾಗ್ಗೆ ಛೀಮಾರಿ ಹಾಕಿಸಿಕೊಂಡು ಕ್ಷಮೆ ಕೇಳುವ ರಾಹುಲ್ ಗಾಂಧಿ ಏನು’ ಎಂದು ವಾಗ್ದಾಳಿ ನಡೆಸಿದೆ.
‘ಸಾವರ್ಕರ್ ಅವರಿಗೆ ಅಂಡಮಾನ್ ಜೈಲು, 50 ವರ್ಷ ಜೀವಾವಧಿ ಶಿಕ್ಷೆ, ಹೆಗಲಲ್ಲಿ ಗಾಣ, ಏಕಾಂತ ವಾಸ, ಕಳಪೆ ಆಹಾರ ಪೂರೈಕೆ ಮಾಡಲಾಗಿತ್ತು. ಆದರೆ, ನೆಹರೂ ಅವರಿಗೆ ಪಂಜಾಬಿನ ನಭಾ ಜೈಲಿನಲ್ಲಿ ಕೇವಲ 2 ವರ್ಷ ಶಿಕ್ಷೆ. ಜೈಲಿನೊಳಗೆ ಸಕಲ ವ್ಯವಸ್ಥೆ. 2 ವರ್ಷದ ಶಿಕ್ಷೆ ಕ್ಷಮಾಪಣಾ ಪತ್ರದ ಮೂಲಕ ಕೆಲವೇ ದಿನದಲ್ಲಿ ಜೈಲುವಾಸ ಅಂತ್ಯ. ನೆಹರೂ ಪರಾಕ್ರಮಿಯೇ?’ ಎಂದು ಬಿಜೆಪಿ ಟೀಕಿಸಿದೆ.
‘ನೆಹರೂ ಬ್ರಿಟಿಷರಿಗೆ ಬರೆದ ಕ್ಷಮಾಪಣಾ ಪತ್ರದ ಬಗ್ಗೆ ರಾಹುಲ್ ಗಾಂಧಿ ಮೌನವೇಕೆ? ಕೇವಲ ಎರಡು ವರ್ಷದ ಶಿಕ್ಷೆಯನ್ನೇ ತಡೆದುಕೊಳ್ಳಲಾರದ ಕುಟುಂಬದವರು ಸ್ವಾತಂತ್ರ್ಯದ ಹೆಗ್ಗುರುತು, ಕಠಿಣಾತಿ ಕಠಿಣ ಶಿಕ್ಷೆ ಎದುರಿಸಿದ ಸಾವರ್ಕರ್ ಅವರ ವೀರತ್ವದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ’ ಎಂದು ಬಿಜೆಪಿ ಗುಡುಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.