ADVERTISEMENT

ರೈಲ್ವೆ ಇಲಾಖೆಗೆ ಉತ್ತರದಾಯಿತ್ವ ಇಲ್ಲವೇ?

ಸದಾ ವಿಳಂಬ, ಅಸಮರ್ಪಕ ಮಾಹಿತಿ *ಇಲಾಖೆ ವಿರುದ್ಧ ಸಾರ್ವಜನಿಕರು, ವಿದ್ಯಾರ್ಥಿಗಳ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 6 ಮೇ 2019, 8:26 IST
Last Updated 6 ಮೇ 2019, 8:26 IST
   

ಬೆಂಗಳೂರು:ಹಂಪಿ ಎಕ್ಸ್‌ಪ್ರೆಸ್‌ ರೈಲು ವಿಳಂಬದಿಂದಾಗಿ ಸುಮಾರು 500ವಿದ್ಯಾರ್ಥಿಗಳಿಗೆ ನೀಟ್‌ (ರಾಷ್ಟ್ರೀಯ ಅರ್ಹತಾ–ಪ್ರವೇಶ ಪರೀಕ್ಷೆ) ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ಬೆನ್ನಲ್ಲೇ ರೈಲ್ವೆ ಇಲಾಖೆಯ ಕಾರ್ಯವೈಖರಿ ಬಗ್ಗೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಆಕ್ರೋಶ ಹೆಚ್ಚಾಗಿದೆ.

ಸದಾ ವಿಳಂಬವಾಗಿ ಚಲಿಸುವ ರೈಲುಗಳು, ಮಾರ್ಗ ಬದಲಾವಣೆ, ರೈಲುಗಳ ರದ್ದತಿ ಬಗ್ಗೆ ಸರಿಯಾಗಿ ಮಾಹಿತಿ ನೀಡದೇ ಇರುವ ಇಲಾಖೆಯ ವಿರುದ್ಧ ಸಾಮಾಜಿಕ ಜಾಲತಾಣಗಳೂ ಸೇರಿದಂತೆ ವಿವಿಧ ಮಾಧ್ಯಮಗಳ ಮೂಲಕ ಜನ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ನೂರಾರು ವಿದ್ಯಾರ್ಥಿಗಳು ಭಾನುವಾರ ನಡೆದ ನೀಟ್ ಪರೀಕ್ಷೆ ಬರೆಯಲು ಹಂಪಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಗಳೂರಿಗೆ ಬರುತ್ತಿದ್ದರು. ಬೆಳಿಗ್ಗೆ 7ಕ್ಕೆ ತಲುಪಬೇಕಿದ್ದ ರೈಲು ಮಧ್ಯಾಹ್ನ 2 ಗಂಟೆಯಾದರೂ ತಲುಪದಿದ್ದುರಿಂದ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದರಿಂದ ವಂಚಿತರಾಗಬೇಕಾಯಿತು.

ADVERTISEMENT

ಇದೇ ಮೊದಲಲ್ಲ

ರೈಲು ವಿಳಂಬದಿಂದಾಗಿ ಪರೀಕ್ಷೆ ತಪ್ಪಿಹೋಗಿರುವ ಪ್ರಕರಣಗಳು ಈ ಹಿಂದೆಯೂ ನಡೆದಿವೆ. ಹುಬ್ಬಳ್ಳಿಯಿಂದ ಬೆಂಗಳೂರಿಗೆ ತೆರಳುವರಾಣಿ ಚನ್ನಮ್ಮ ಎಕ್ಸ್‌ಪ್ರೆಸ್ ರೈಲು ವಿಳಂಬವಾದದ್ದರಿಂದ ಕಳೆದ ವರ್ಷ (2018) ಆಗಸ್ಟ್‌ 5ರಂದು ಬೆಂಗಳೂರಿನಲ್ಲಿನಡೆದ ‘ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಾನ್‌ಸ್ಟೆಬಲ್ (ಎಪಿಸಿ)’ ಲಿಖಿತ ಪರೀಕ್ಷೆ ಬರೆಯಲು ಅನೇಕರಿಗೆ ಸಾಧ್ಯವಾಗಿರಲಿಲ್ಲ. ಈ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರುಪರೀಕ್ಷೆ ವಂಚಿತ ಉದ್ಯೋಗಕಾಂಕ್ಷಿಗಳಿಗೆ ಮತ್ತೊಂದು ಅವಕಾಶ ಕಲ್ಪಿಸುವುದಾಗಿ ಘೋಷಿಸಿದ್ದರು.

ಆಗಿದ್ದೇನು?:2018 ಆಗಸ್ಟ್‌ 5ರಂದು ಭಾನುವಾರ ಬೆಂಗಳೂರಿನಲ್ಲಿ ಪರೀಕ್ಷೆ ನಿಗದಿಯಾಗಿತ್ತು. ಶನಿವಾರರಾತ್ರಿ 10.40ಕ್ಕೆ ಹುಬ್ಬಳ್ಳಿಯಿಂದ ಹೊರಡಬೇಕಿದ್ದ ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್ ರೈಲು ಮರುದಿನ ಬೆಳಿಗ್ಗೆ ಹೊರಟ ಕಾರಣ, ಪರೀಕ್ಷೆ ಬರೆಯಲು ರಾಜಧಾನಿಗೆ ಹೊರಟಿದ್ದ ಸುಮಾರು 2 ಸಾವಿರ ಅಭ್ಯರ್ಥಿಗಳು ಅವಕಾಶ ಕಳೆದುಕೊಂಡಿದ್ದರು. ಧಾರವಾಡದ ಕಂಬಾರಗಣವಿ ಸಮೀಪ ರಾತ್ರಿ ಗೂಡ್ಸ್ ರೈಲು, ಎಂಜಿನ್ ವಿಫಲವಾಗಿ ಕೆಟ್ಟು ನಿಂತಿತ್ತು. ಹೀಗಾಗಿ, ಆಮಾರ್ಗದಲ್ಲಿ ಸಂಚರಿಸಬೇಕಾಗಿದ್ದ ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್‌ ರೈಲು ಹುಬ್ಬಳ್ಳಿ ನಿಲ್ದಾಣ ತಲುಪಿರಲಿಲ್ಲ. ಈ ರೈಲಿನ ಎಂಜಿನ್ ಅನ್ನು ಗೂಡ್ಸ್ ರೈಲಿಗೆ ಅಳವಡಿಸಿ ಹಿಂದಕ್ಕೆ ಕೊಂಡೊಯ್ಯಲಾಗಿತ್ತು. ಮಾರ್ಗ ಮುಕ್ತವಾದ ನಂತರ ಪ್ರಯಾಣಿಕರ ರೈಲು ಹುಬ್ಬಳ್ಳಿ ತಲುಪಿತ್ತು. ಅಂತಿಮವಾಗಿ ರೈಲು ಭಾನುವಾರ ಬೆಳಿಗ್ಗೆ ಆರು ಗಂಟೆಗೆ ಹುಬ್ಬಳ್ಳಿ ನಿಲ್ದಾಣದಿಂದ ಹೊರಟಿತ್ತು.ರೈಲ್ವೆ ಇಲಾಖೆಯ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಆರೋಪಿಸಿದ ಅಭ್ಯರ್ಥಿಗಳು ಕಂಬಾರಗಣವಿಯಲ್ಲಿ ಪ್ರತಿಭಟನೆ ನಡೆಸಿದ್ದರು.

ಆದರೆ, ಅಭ್ಯರ್ಥಿಗಳ ಪ್ರತಿಭಟನೆಯೇ ವಿಳಂಬಕ್ಕೆ ಕಾರಣ ಎಂದು ದೂರಿತ್ತು ರೈಲ್ವೆ ಇಲಾಖೆ. ‘ಮಳೆಯ ನಡುವೆಯೂ ಸಿಬ್ಬಂದಿ ತುರ್ತಾಗಿ ಕೆಲಸ ಮಾಡಿ, ರಾತ್ರಿ 1 ಗಂಟೆ ಸುಮಾರಿಗೆ ರೈಲು ಹೊರಡಲು ಅಣಿಗೊಳಿಸಿದರು. ಆದರೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದರು. ಅಲ್ಲಿಂದ ರೈಲು ಹೊರಟ ನಂತರವೂ ಸುಮಾರು 12 ಬಾರಿ ರೈಲಿನ ತುರ್ತುಚೈನ್ ಎಳೆದು ತೊಂದರೆ ನೀಡಿದರು. ಅವರು ಸಹಕಾರ ನೀಡಿದ್ದರೆ ಬೆಳಿಗ್ಗೆ ಎಂಟೂವರೆ ಹೊತ್ತಿಗೆ ಬೆಂಗಳೂರು ತಲುಪಿಸುತ್ತಿದ್ದೆವು. ಯಾರ ವಿರುದ್ಧವೂ ಪ್ರಕರಣ ದಾಖಲಿಸುವುದಿಲ್ಲ’ ಎಂದು ಇಲಾಖೆಯ ವಿಭಾಗೀಯ ವ್ಯವಸ್ಥಾಪಕ ರಾಜೇಶ್ ಮೋಹನ್ ಇಲಾಖೆಯನ್ನು ಸಮರ್ಥಿಸಿಕೊಂಡಿದ್ದರು.

ನಿಧಾನವೇ ಪ್ರಧಾನ

ದೇಶದ ಬಹುತೇಕ ರೈಲುಗಳು ವಿಳಂಬವಾಗಿ ಗಮ್ಯ ತಲುಪುವ ವಿಚಾರವನ್ನು ಇಲಾಖೆಯೂ ದೃಢಪಡಿಸಿದೆ. ದಾಖಲೆಗಳ ಪ್ರಕಾರ, 2017–18ರಲ್ಲಿ ದೇಶದ ಶೇ 30ರಷ್ಟು ರೈಲುಗಳು ವಿಳಂಬವಾಗಿ ಸಂಚರಿಸಿವೆ. 2015–16ರಲ್ಲಿ ಶೇ 77.4ರಷ್ಟು ರೈಲುಗಳು ಸಮಯಕ್ಕೆ ಸರಿಯಾಗಿ ಗಮ್ಯ ತಲುಪಿದ್ದರೆ 2016–17ರಲ್ಲಿ ಇದರ ಪ್ರಮಾಶ ಶೇ 76.69ಕ್ಕೆ ಮತ್ತು 2017–18ರಲ್ಲಿ ಶೇ 71.39ಕ್ಕೆ ಇಳಿಕೆಯಾಗಿದೆ. ಒಟ್ಟಾರೆಯಾಗಿ ವಿಳಂಬವಾಗಿ ಸಂಚರಿಸುತ್ತಿರುವ ರೈಲುಗಳ ಪ್ರಮಾಣ ಹೆಚ್ಚಾಗುತ್ತಿದೆ.

ಅಸಮರ್ಪಕ ಮಾಹಿತಿ, ಪ್ರಯಾಣಿಕರಿಗೆ ಫಜೀತಿ

ರೈಲು ವಿಳಂಬ, ಮಾರ್ಗ ಬದಲಾವಣೆಯಂತಹ ವಿಚಾರಗಳಲ್ಲಿ ಇಲಾಖೆಯನ್ನು ಪ್ರಶ್ನಿಸಿದರೆ ಸಿಗುವ ಸಿದ್ಧ ಉತ್ತರ, ‘ಮೊದಲೇ ಮಾಹಿತಿ ನೀಡಲಾಗಿತ್ತು’ ಎಂಬುದು. ಆದರೆ, ಸಂಬಂಧಪಟ್ಟವರಿಗೆ ಯಾರಿಗೂ ಈ ಮಾಹಿತಿ ತಲುಪಿರುವುದಿಲ್ಲ ಎಂಬುದು ಪ್ರಯಾಣಿಕರ ಅಳಲು. ಅನೇಕ ಸಂದರ್ಭಗಳಲ್ಲಿ, ರೈಲು ವಿಳಂಬವಾಗುವುದಿದ್ದರೆ ನಿಲ್ದಾಣಗಳಲ್ಲಿ ಘೋಷಣೆ ಮಾಡಲಾಗುತ್ತದೆ ಅಥವಾ ಎಸ್‌ಎಂಎಸ್‌ ಮೂಲಕ ಸಂದೇಶ ಕಳುಹಿಸಲಾಗುತ್ತದೆ. ಆದರೆ, ಈ ಎಸ್‌ಎಂಎಸ್‌ ಮೊಬೈಲ್‌ ತಲುಪುವಷ್ಟರಲ್ಲಿ ಪ್ರಯಾಣಿಕರೇ ನಿಲ್ದಾಣ ತಲುಪಿರುತ್ತಾರೆ! ಹೀಗಾದರೆ ಪರ್ಯಾಯ ಆಯ್ಕೆ ಮಾಡಿಕೊಳ್ಳಲು ಅಥವಾ ಕ್ರಮ ಕೈಗೊಳ್ಳಲು ಪ್ರಯಾಣಿಕರಿಗೆ ಅವಕಾಶವೇ ಇರುವುದಿಲ್ಲ.

ರೈಲು ರದ್ದು,ಮಾರ್ಗ ಬದಲಾವಣೆ ವಿಚಾರದಲ್ಲೂ ಅಷ್ಟೆ. ಒಂದು ದಿನ ಮೊದಲು ಅಥವಾ ಪ್ರಯಾಣದ ದಿನ ಮಾಹಿತಿ ನೀಡುತ್ತದೆ ಇಲಾಖೆ. ಇದರಿಂದಪ್ರಯಾಣಿಕರು ತೊಂದರೆಗೊಳಗಾಗುವ ಸಾಧ್ಯತೆಯೇ ಹೆಚ್ಚು.

ಉದಾಹರಣೆಗೆ; ರೈಲು ಮಾರ್ಗಗಳ ದುರಸ್ತಿ ಕಾರ್ಯ ಕೈಗೆತ್ತಿಕೊಂಡಿರುವುದರಿಂದ ಬೆಂಗಳೂರಿನಿಂದ ಸಂಚರಿಸುವ 8 ರೈಲುಗಳ ಸಂಚಾರವನ್ನು ಮೇ 4ರಿಂದ 28ರವರೆಗೆ ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಆದರೆ ಈ ಕುರಿತು ಇಲಾಖೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು ಮೇ 3ರಂದು. ಒಂದು ದಿನ ಮುಂಚಿತವಾಗಿ ರದ್ದಾದ ಮಾಹಿತಿ ನೀಡಿದರೆ ಆ ರೈಲುಗಳಲ್ಲಿ ಸಂಚರಿಸಲು ಹತ್ತಾರು ದಿನ ಮೊದಲೇ ಯೋಜನೆ ಮಾಡಿಕೊಂಡವರು, ಟಿಕೆಟ್ ಕಾಯ್ದಿರಿಸಿದವರು ಏನು ಮಾಡಬೇಕು? ‘ವೈಟ್‌ಫೀಲ್ಡ್‌–ಬಾಣಸವಾಡಿ–ವೈಟ್‌ಫೀಲ್ಡ್‌ ರೈಲು’ ಕೂಡ 4ರಿಂದ 31ರವರೆಗೆ ರದ್ದಾಗಿದೆ. ಹಠಾತ್ ಆಗಿ ರೈಲು ರದ್ದಾದ ಮಾಹಿತಿ ನೀಡಿದರೆ ದಿನನಿತ್ಯ ಪ್ರಯಾಣಿಸುವ ನೂರಾರು ಮಂದಿ ಏನು ಮಾಡುವುದು ಎಂಬುದು ಪ್ರಯಾಣಿಕರ ಪ್ರಶ್ನೆ. ಕೆಲವು ದಿನಗಳ ಮೊದಲೇ ಮಾಹಿತಿ ನೀಡಿದ್ದರೆ ಪರ್ಯಾಯ ವ್ಯವಸ್ಥೆಯನ್ನಾದರೂ ಮಾಡಿಕೊಳ್ಳಬಹುದಿತ್ತು ಎಂಬುದು ಪ್ರಯಾಣಿಕರ ಅಭಿಪ್ರಾಯ.

ಮಾಹಿತಿ ಅವ್ಯಸ್ಥೆ

ರೈಲು ನಿಲ್ದಾಣಗಳಲ್ಲಿ ಮಾಹಿತಿ ಒದಗಿಸುವ ವಿಚಾರದಲ್ಲಿಯೂ ಇಲಾಖೆ ನಿರ್ಲಕ್ಷ್ಯ ತೋರುತ್ತಿದೆ ಎಂಬುದು ಪ್ರಯಾಣಿಕರ ಆರೋಪ. ಅನೇಕ ನಿಲ್ದಾಣಗಳ ಪ್ಲಾಟ್‌ಫಾರಂಗಳಲ್ಲಿ ಅಳವಡಿಸಿರುವ ಡಿಜಿಟಲ್ ಫಲಕಗಳು ನಿಷ್ಕ್ರಿಯವಾಗಿವೆ. ಇದರಿಂದಾಗಿ ರೈಲುಗಳ ಸಂಖ್ಯೆ, ಬರಲಿರುವ ಪ್ಲಾಟ್‌ಫಾರ್ಮ್‌ ಬಗ್ಗೆ ಮಾಹಿತಿ ತಿಳಿಯಲು ಪ್ರಯಾಣಿಕರು ದೂರದಲ್ಲಿರುವ ಮಾಹಿತಿ ಕೇಂದ್ರಕ್ಕೆ ಓಡಬೇಕಾಗುತ್ತಿದೆ. ಅನೇಕ ಬಾರಿ ಕೊನೇ ಕ್ಷಣದಲ್ಲಿ, ಅಂದರೆ ರೈಲು ಬರಲು ಇನ್ನೇನು ಕೆಲವೇ ನಿಮಿಷಗಳಿರುವಾಗ ಪ್ಲಾಟ್‌ಫಾರ್ಮ್‌ ಬದಲಾಗಿರುವ ಬಗ್ಗೆ ಘೋಷಣೆ ಮಾಡಲಾಗುತ್ತದೆ. ಇದರಿಂದ ಮಹಿಳೆಯರು, ವೃದ್ಧರು, ಅಂಗವಿಕಲರಿಗೆ ನಿರ್ದಿಷ್ಟ ಪ್ಲಾಟ್‌ಫಾರ್ಮ್‌ಗೆ ತೆರಳುವುದು ಕಷ್ಟವಾಗುತ್ತಿದೆ ಎಂದು ಪ್ರಯಾಣಿಕರು ಅಲವತ್ತುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.