ಬೆಂಗಳೂರು: ‘ಭಾರತದಲ್ಲಿ ಬೇರೆ ಬೇರೆ ಧರ್ಮದವರು ನೆಲೆಸಿದ್ದಾರೆ. ಆದ್ದರಿಂದ ಇದು ಹಿಂದೂ ದೇಶವಲ್ಲ. ನಾವೆಲ್ಲ ಭಾರತೀಯರೇ ಹೊರತು, ಹಿಂದೂಗಳಲ್ಲ’ ಎಂದು ಸಾಹಿತಿ ಕಮಲಾ ಹಂಪನಾ ಹೇಳಿದರು.
ಕನ್ನಡ ಜನಶಕ್ತಿ ಕೇಂದ್ರ ಹಾಗೂ ಕಲಬುರಗಿಯ ಸಬರದ ಬಸಪ್ಪ ಸ್ಮಾರಕ ಪ್ರತಿಷ್ಠಾನ ಜಂಟಿಯಾಗಿ ನಗರದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಸವರಾಜ ಸಬರದ ಅವರ 12 ಪುಸ್ತಕಗಳು ಬಿಡುಗಡೆಯಾದವು.
‘ದೇಶದಲ್ಲಿ ಇಸ್ಲಾಂ, ಕ್ರಿಶ್ಚಿಯನ್, ಸಿಖ್, ಬೌದ್ಧ, ಜೈನ ಸೇರಿ ವಿವಿಧ ಧರ್ಮದವರು ನೆಲೆಸಿದ್ದು, ಇವರಾರೂ ಹಿಂದೂಗಳಲ್ಲ. ದೇವಸ್ಥಾನಗಳಲ್ಲಿರುವ ಶೇ 3ರಷ್ಟು ಮಂದಿ ಮಾತ್ರ ಹಿಂದೂಗಳು. ಅವರು ಹಿಂದೂ ದೇಶ ಎಂದು ಕರೆದುಕೊಂಡರೆ ಏನು ಅರ್ಥ? ಇದನ್ನು ಒಪ್ಪಲು ಸಾಧ್ಯವಿಲ್ಲ. ಹಾಗಾಗಿ, ಪ್ರಮಾಣಪತ್ರಗಳಲ್ಲಿ ಹಿಂದೂ ಧರ್ಮ ಎಂದು ನಮೂದಿಸದೆ, ಭಾರತೀಯರು ಎಂದು ಬರೆಸಬೇಕು’ ಎಂದು ಕಮಲಾ ಹಂಪನಾ ತಿಳಿಸಿದರು.
‘ಅಮೃತವು ಅತಿಯಾದರೆ ವಿಷವಾಗುತ್ತದೆ. ಧರ್ಮದ ಬಗೆಗಿನ ಪ್ರೀತಿ, ಪ್ರೇಮ ಹಾಗೂ ಅಭಿಮಾನ ಒಂದು ಪರಿಧಿಯಲ್ಲಿ ಇರಬೇಕು. ಅದನ್ನು ದಾಟಿದರೆ ಉಗ್ರವಾದಿಗಳಾಗುತ್ತಾರೆ. 2003ರಲ್ಲಿ ಮೂಡಬಿದ್ರೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೂ ಧಾರ್ಮಿಕ ಉಗ್ರತೆ ಬಗ್ಗೆ ಮಾತನಾಡಿದ್ದೆ. ನಮ್ಮ ಧರ್ಮವೇ ಶ್ರೇಷ್ಠ ಎಂದು ತೋರಿಸಲು ಹೋಗುವವರು ರಾಷ್ಟ್ರದ ಉಗ್ರವಾದಿಗಳು’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ‘ನಾಡಗೀತೆ ಕಂಠಪಾಠ ಆಗದೆ, ಅದರಲ್ಲಿನ ‘ಸರ್ವಜನಾಂಗದ ಶಾಂತಿಯ ತೋಟ’ ಸಾಲುಗಳನ್ನು ನಿಜವಾಗಿಸಬೇಕು. ‘ತೋಟ’ ಎನ್ನುವ ಕಲ್ಪನೆಯೇ ವಿಶೇಷವಾದದ್ದಾಗಿದೆ. ಅಲ್ಲಿ ಹಸಿರು, ಹೂವು, ಫಲ ಇರುತ್ತದೆ. ಅದನ್ನು ನಾಶ ಮಾಡಬಾರದು. ರಾಜ್ಯದಲ್ಲಿರುವ ಪ್ರಾದೇಶಿಕ, ಸಾಂಸ್ಕೃತಿಕ ಪರಕೀಯತೆಯನ್ನು ಹೋಗಲಾಡಿಸಬೇಕು. ಆಗ ಪ್ರಜಾಪ್ರಭುತ್ವ ಗಟ್ಟಿಯಾಗಲಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.