ಬೆಂಗಳೂರು: ಸ್ವಾತಂತ್ರ್ಯ ಹಾಗೂ ಸಂವಿಧಾನ ರೂಪಿಸಿದ ಆಶಯಗಳಿಗೆ ವಿರುದ್ಧವಾಗಿ ದೇಶ ಸಾಗುತ್ತಿದೆ. ಜನರು ಭ್ರಮೆಗಳನ್ನೇ ವಾಸ್ತವವೆಂದು ನಂಬಿಕೊಂಡು ಸಂಭ್ರಮಿಸುತ್ತಿದ್ದಾರೆ ಎಂದು ರಾಜಕೀಯ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ್ ಹೇಳಿದರು.
‘ಜಾಗೃತ ಕರ್ನಾಟಕ’ ಬುಧವಾರ ಹಮ್ಮಿಕೊಂಡಿದ್ದ ‘2014ರ ನಂತರದ ಭಾರತದ ಭ್ರಮೆ ಮತ್ತು ವಾಸ್ತವ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರದ ಹೇಳಿಕೆ–ಘೋಷಣೆಗಳಿಗೂ ವಾಸ್ತವದಲ್ಲಿ ಅನುಸರಿಸುವ ವಿಧಾನಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಗುಪ್ತ ಕಾರ್ಯಸೂಚಿಗಳನ್ನು ಜನರಿಗೆ ಗೊತ್ತೇ ಆಗದಂತೆ ಅನುಷ್ಠಾನಗೊಳಿಸಲಾಗುತ್ತಿದೆ. ಅವರ ಘೋಷಣೆಗಳನ್ನು ಇತರೆ ದೇಶಗಳಿಗೂ ನಿಜವೆಂದು ನಂಬಿಸುವ ಚಾಕಚಕ್ಯತೆ ಬಿಜೆಪಿಗಿದೆ. ಜಿ–20 ಶೃಂಗದ ವೇಳೆ ‘ವಸುದೇವ ಕುಟುಂಬಕಂ’ ಘೋಷಣೆ ಮಾಡಲಾಗಿತ್ತು. ಅಂದರೆ ಬಿಜೆಪಿ ಹಾಗೂ ಕೇಂದ್ರ ಸರ್ಕಾರ ವಿಶ್ವವನ್ನೇ ಒಂದು ಕುಟುಂಬವೆಂದು ಕಾಣುತ್ತಿವೆ ಎನ್ನುವ ಭ್ರಮೆಯನ್ನು ತೇಲಿಬಿಡಲಾಗಿತ್ತು. ವಾಸ್ತವದಲ್ಲಿ ಸಮಾಜದ ಜಾತಿ, ಧರ್ಮಗಳ ಮಧ್ಯೆ ಗೋಡೆಕಟ್ಟುವ ಕೆಲಸ ನಿರಂತರವಾಗಿ ಇದೇ ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದರು.
ದೇಶದಲ್ಲಿ ಎಷ್ಟು ನಿರುದ್ಯೋಗಿಗಳಿದ್ದಾರೆ. ಕೋವಿಡ್ ಸಮಯದಲ್ಲಿ ಎಷ್ಟು ಜನರು ಪ್ರಾಣ ಕಳೆದುಕೊಂಡರು ಎಂಬಂತಹ ಪ್ರಶ್ನೆಗಳಿಗೆ ಉತ್ತರ ನೀಡದ ಪ್ರಧಾನಿಗಳು ತಮ್ಮ ರಾಜಕೀಯ ವಿರೋಧಿಗಳು 99 ಬಾರಿ ತಮ್ಮನ್ನು ನಿಂದಿಸಿದ್ದರು ಎಂದು ಹೇಳುತ್ತಾರೆ. ಸಂಸತ್‌ನಲ್ಲಿ 10 ನಿಮಿಷ ಚರ್ಚಿಸದೇ ಕೃಷಿಯಂತಹ ಮಸೂದೆ ಅಂಗೀಕರಿಸುತ್ತಾರೆ. ಪಂಜಾಬ್‌ನಲ್ಲಿ ರಾಜಕೀಯ ಲಾಭ ಮಾಡಿಕೊಳ್ಳಲು ಕಾರಣ ನೀಡದೇ ಕಾಯ್ದೆ ವಾಪಸ್ ಪಡೆಯುತ್ತಾರೆ. ಯಾರಾದರೂ ಪ್ರಶ್ನಿಸಿದ ತಕ್ಷಣ ಪ್ರಜಾತಂತ್ರ ಅಪಾಯದಲ್ಲಿದೆ. ಪಾಕಿಸ್ತಾನ್ ಏಜೆಂಟರಿದ್ದಾರೆ ಎಂದು ಜನರ ಗಮನ ಬೇರೆಡೆ ಸೆಳೆಯುತ್ತಾರೆ. ಪ್ರಧಾನಿಯ ಮಾತು–ಕೃತಿಯಲ್ಲೇ ಭಿನ್ನತೆ ಕಾಣಬಹುದು ಎಂದು ಟೀಕಿಸಿದರು.
ಕೇಂದ್ರ ಸರ್ಕಾರ ತಂತ್ರಗಳ ಮೂಲಕ ಸುಳ್ಳುಗಳನ್ನೇ ಸತ್ಯ ಮಾಡುತ್ತಿದೆ. ಒಂದು ಕಿ.ಮೀ ಚತುಷ್ಪದ ರಸ್ತೆಯನ್ನು ನಾಲ್ಕು ಕಿ.ಮೀ ಎಂದು, ಹಸಿವಿನ ಸೂಚ್ಯಂಕದಲ್ಲಿ ಭಾರತ 142 ಸ್ಥಾನದಲ್ಲಿದ್ದರೂ ದೇಶದಲ್ಲಿ ಒಬ್ಬರೂ ಹಸಿವಿನಿಂದ ಬಳಲುತ್ತಿಲ್ಲವೆಂದು ಮೋದಿ ಅವರ ಸಂಪುಟದ ಸಚಿವರೇ ಹೇಳುತ್ತಾರೆ. ದೊಡ್ಡ ಮಾತುಗಳು, ಸಂಸ್ಕೃತ ಬಳಕೆಯ ಮೂಲಕ ಸತ್ಯ ಜನರಿಗೆ ಅರ್ಥವಾಗದಂತೆ ಮಾಡುತ್ತಾರೆ. ಜನರಿಗೆ ಹಸಿವೇ ಇಲ್ಲದ ಮೇಲೆ 83 ಕೋಟಿ ಜನರಿಗೆ ಐದು ವರ್ಷಗಳು ಆಹಾರ ಧಾನ್ಯ ಪೂರೈಸುತ್ತಿದ್ದೇವೆ ಎನ್ನುವುದು ಸುಳ್ಳೇ ಎಂದು ಪ್ರಶ್ನಿಸಿದರು.
‘ಸದ್ಯದ ಪರಿಸ್ಥಿತಿಯಲ್ಲಿ ಬಹುತ್ವದ ಭಾರತವು ಬಹುಸಂಖ್ಯಾವಾದದ ಕಗ್ಗಂಟಿನ ಕಡೆ ವಾಲುತ್ತಿದೆ. ಜಾತ್ಯತೀತರು ಎಂದು ಬೀಗುತ್ತಿದ್ದವರೂ ‘ನಾವು ಹಿಂದುಗಳೇ’ ಎಂದು ಪ್ರತಿಕ್ರಿಯಿಸುವ ಸ್ಥಿತಿಗೆ ಬಂದಿದ್ದೇವೆ’ ಎಂದು ವಿಷಾದಿಸಿದರು.
ಜಾಗೃತ ಕರ್ನಾಟಕದ ಸಂಚಾಲಕ ಬಿ.ಸಿ. ಬಸವರಾಜು, ವಕೀಲರಾದ ಗಂಗಾಧರ್ ಮುಳುಗುಂದ್, ಪೂರ್ಣಾ ಉಪಸ್ಥಿತರಿದ್ದರು.
ದೇವಸ್ಥಾನ ಉದ್ಘಾಟನೆಗೆ ಸಾವಿರಾರು ಕೋಟಿ ಖರ್ಚು
ಒಂದು ದೇವಸ್ಥಾನದ ಉದ್ಘಾಟನೆಯ ವಿಷಯವನ್ನು ಭಾರತದ ಮಾಧ್ಯಮಗಳು ಒಂದು ತಿಂಗಳು ಬಿತ್ತರಿಸಿದವು. ಅದಕ್ಕಾಗಿ ಕೇಂದ್ರ ಸರ್ಕಾರ ಸಾವಿರಾರು ಕೋಟಿ ಹಣ ಖರ್ಚು ಮಾಡಿದೆ ಎಂದು ಪರಕಾಲ ಪ್ರಭಾಕರ್ ಆರೋಪಿಸಿದರು.
ಕೇಂದ್ರದ ಯೋಜನೆಗಳ ಶೇ 80ರಷ್ಟು ಹಣವನ್ನು ಪ್ರಚಾರಕ್ಕೇ ಬಳಸಲಾಗುತ್ತಿದೆ. ಪ್ರಶ್ನಿಸಿದವರನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಭಿನ್ನಾಭಿಪ್ರಾಯಕ್ಕೆ ಅವಕಾಶ ನೀಡುತ್ತಿಲ್ಲ. ದೇಶದ ಕೆಲ ರಾಜ್ಯಗಳಲ್ಲಿ ಕೆಟ್ಟ ಪರಿಸ್ಥಿತಿ ಇದೆ. ಮಣಿಪುರ ಉರಿಯುತ್ತಿದ್ದರೂ ಅದು ಪ್ರಮುಖ ವಿಷಯವೇ ಅಲ್ಲ ಎನ್ನುವಂತಹ ಸ್ಥಿತಿ ನಿರ್ಮಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.