ಬೆಂಗಳೂರು: ‘ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಉದ್ಯಮಿ ಗೋವಿಂದಬಾಬು ಪೂಜಾರಿ ಎಂಬವರಿಂದ ₹3.5 ಕೋಟಿ ವಂಚಿಸಿದ ಆರೋಪಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದು, ಯಾರೇ ತಪ್ಪು ಮಾಡಿದರೂ ಕಾನೂನಿನಡಿ ಕ್ರಮ ಆಗಲಿದೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ಈ ಪ್ರಕರಣಕ್ಕೂ ಇಂದಿರಾ ಕ್ಯಾಂಟಿನ್‌ಗೂ ಸಂಬಂಧ ಇಲ್ಲ’ ಎಂದರು.
‘ನನಗೆ ಬಂದ ಮಾಹಿತಿ ಪ್ರಕಾರ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹಣ ಪಡೆದಿದ್ದಾರೆ. ಪ್ರಕರಣದಲ್ಲಿ ಸ್ವಾಮೀಜಿ ಬಗ್ಗೆಯೂ ತನಿಖೆಯಾಗಲಿದೆ. ಸ್ವಾಮೀಜಿಯ ತಪ್ಪಿದ್ದರೇ ಅವರ ಬಂಧನವೂ ಆಗಲಿದೆ. ಸಿಸಿಬಿ ಪೊಲೀಸರ ತನಿಖೆ ಬಳಿಕ ಎಲ್ಲ ವಿಚಾರ ಗೊತ್ತಾಗಲಿದೆ’ ಎಂದರು.
‘ಪೊಲೀಸರು ಸ್ವಯಂಪ್ರೇರಿತವಾಗಿ ಈ ಪ್ರಕರಣವನ್ನು ದಾಖಲಿಸಿಕೊಂಡಿಲ್ಲ. ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದೆ. ಚೈತ್ರಾ ಹಿಂದೂ ಪರವಾದ ಭಾಷಣ ಮಾಡಿದ್ದಾರೆ ಎಂಬ ವಿಚಾರಕ್ಕೂ ಅವರ ಬಂಧನದ ವಿಚಾರವನ್ನು ಜೊತೆಗೂಡಿಸುವುದು ಬೇಡ’ ಎಂದೂ ಪರಮೇಶ್ವರ ಹೇಳಿದರು.
ಸಿಸಿಬಿ ತನಿಖೆಗೆ ತೆರಳುವ ಮೊದಲು ಮಾಧ್ಯಮದ ಮುಂದೆ ಮಾತನಾಡಿದ್ದ ಚೈತ್ರಾ ಕುಂದಾಪುರ, ‘ ಇದರಲ್ಲಿ ದೊಡ್ಡ ದೊಡ್ಡವರ ಹೆಸರು ಕೂಡ ಬಹಿರಂಗವಾಗುತ್ತದೆ. ಇಂದಿರಾ ಕ್ಯಾಂಟೀನ್ ಬಿಲ್‌ಗಾಗಿ ಈ ರೀತಿ ಷಡ್ಯಂತ್ರ ಮಾಡಿದ್ದಾರೆ’ ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.