ADVERTISEMENT

ಬೆಂಗಳೂರು: ನಗರದಲ್ಲಿ ಇಂಡೋ–ಸ್ವಿಸ್‌ ಇನ್ನೋವೇಶನ್‌ ಪ್ಲಾಟ್‌ಫಾರಂ

​ಪ್ರಜಾವಾಣಿ ವಾರ್ತೆ
Published 24 ಜುಲೈ 2023, 16:32 IST
Last Updated 24 ಜುಲೈ 2023, 16:32 IST
ಸ್ವಿಟ್ಜರ್ಲೆಂಡ್ ಕಾನ್ಸುಲ್‌ ಜನರಲ್‌ ಜೋನಾಸ್‌ ಬ್ರನ್ಶ್‌ವಿಗ್‌ ಅವರು ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರನ್ನು ಸೋಮವಾರ ಭೇಟಿ ಮಾಡಿ, ಮಾತುಕತೆ ನಡೆಸಿದರು.ಕೈಗಾರಿಕಾ ಇಲಾಖೆಯ ಆಯುಕ್ತೆ ಗುಂಜನ್‌ ಕೃಷ್ಣ ಇದ್ದರು. 
ಸ್ವಿಟ್ಜರ್ಲೆಂಡ್ ಕಾನ್ಸುಲ್‌ ಜನರಲ್‌ ಜೋನಾಸ್‌ ಬ್ರನ್ಶ್‌ವಿಗ್‌ ಅವರು ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರನ್ನು ಸೋಮವಾರ ಭೇಟಿ ಮಾಡಿ, ಮಾತುಕತೆ ನಡೆಸಿದರು.ಕೈಗಾರಿಕಾ ಇಲಾಖೆಯ ಆಯುಕ್ತೆ ಗುಂಜನ್‌ ಕೃಷ್ಣ ಇದ್ದರು.    

ಬೆಂಗಳೂರು: ವಿಜ್ಞಾನ, ಸಂಶೋಧನೆ ಮತ್ತು ನಾವೀನ್ಯತೆ ವಿಷಯದಲ್ಲಿ ರಾಜ್ಯದ ಜತೆ ಕೆಲಸ ಮಾಡಲು ಸ್ವಿಟ್ಜರ್ಲೆಂಡ್‌ ಆಸಕ್ತಿ ವ್ಯಕ್ತಪಡಿಸಿದ್ದು, ಈ ಸಂಬಂಧ ಆ ದೇಶದ ಕಾನ್ಸುಲ್‌ ಜನರಲ್‌ ಜೋನಾಸ್‌ ಬ್ರನ್ಶ್‌ವಿಗ್ ಅವರು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಜತೆ ಚರ್ಚೆ ನಡೆಸಿದರು.

ಸ್ವಿಟ್ಜರ್ಲೆಂಡ್‌ ಮತ್ತು ಕರ್ನಾಟಕದ ನಡುವೆ ಇರುವ ಸಹಭಾಗಿತ್ವವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಉದ್ದೇಶದಿಂದ 'ಇಂಡೋ–ಸ್ವಿಸ್‌ ಇನ್ನೋವೇಶನ್‌ ಪ್ಲಾಟ್‌ಫಾರಂ' ಎಂಬ ಸಾಂಸ್ಥಿಕ ವ್ಯವಸ್ಥೆಯನ್ನು ಅಸ್ತಿತ್ವಕ್ಕೆ ತರಲಾಗುತ್ತಿದೆ ಎಂದು ಜೋನಾಸ್‌ ತಿಳಿಸಿದರು.

ಬೆಂಗಳೂರಿನಲ್ಲಿರುವ ನ್ಯಾಷನಲ್‌ ಸೆಂಟರ್‌ ಫಾರ್ ಬಯಲಾಜಿಕಲ್‌ ಸೈನ್ಸಸ್‌ನಲ್ಲಿ(ಎನ್‌ಸಿಬಿಎಸ್‌) ಮೂರು ದಿನಗಳ ಸಮಾವೇಶ ನಡೆಸುವ ಮೂಲಕ ಈ ವೇದಿಕೆಗೆ ಚಾಲನೆ ನೀಡಲಾಗುವುದು. ಇದರಲ್ಲಿ ಭಾರತ ಮತ್ತು ಸ್ವಿಸ್‌ಗಳ ತಲಾ 25 ಪರಿಣತರು ಭಾಗವಹಿಸಲಿದ್ದಾರೆ ಎಂದರು.

ADVERTISEMENT

ಕರ್ನಾಟಕದಲ್ಲಿ ಸ್ವಿಟ್ಜರ್ಲೆಂಡ್‌ನ 49 ಕಂಪನಿಗಳು ಸಕ್ರಿಯವಾಗಿದ್ದು, 17,800 ಉದ್ಯೋಗಾವಕಾಶ ಸೃಷ್ಟಿಸಿವೆ. ಇದರ ಪೈಕಿ ಸರಿಸುಮಾರು 40 ಕಂಪನಿಗಳು ರಾಜ್ಯದಲ್ಲಿ ತಯಾರಿಕಾ ಘಟಕಗಳನ್ನು ಹೊಂದಿವೆ. ಮುಂಬರುವ ದಿನಗಳಲ್ಲಿ ಹಮ್ಮಿಕೊಳ್ಳಲಿರುವ ಸಮಾವೇಶದಲ್ಲಿ ಆಂಟಿಮೈಕ್ರೋಬಯಲ್‌ ರೆಸಿಸ್ಟೆನ್ಸ್‌(ಎಎಂಆರ್‌) ಕುರಿತು ಹೆಚ್ಚಿನ ಗಮನಹರಿಸುವುದು ಮುಖ್ಯ ಉದ್ದೇಶವಾಗಿದೆ. ಇದು ಅಂತಿಮವಾಗಿ ಶಿಕ್ಷಣ ಕ್ಷೇತ್ರ ಮತ್ತು ಉದ್ಯಮದ ನಡುವಿನ ಸಹಭಾಗಿತ್ವವನ್ನು ಮತ್ತಷ್ಟು ವಿಸ್ತರಿಸಲು ನೆರವಾಗಲಿದೆ ಎಂದು ಅವರು ಹೇಳಿದರು.

ತಮ್ಮ ದೇಶದ ಕಂಪನಿಗಳು ಭಾರತದಲ್ಲಿ ಹೂಡುತ್ತಿರುವ ಬಂಡವಾಳ ಪ್ರಮಾಣವು 2015 ರಿಂದ 2022 ರ ನಡುವೆ ಶೇ 53 ರಷ್ಟು ಏರಿಕೆ ಕಂಡಿದೆ. ಹಾಗೆಯೇ ಭಾರತದ ಕಂಪನಿಗಳು ಸ್ವಿಸ್‌ನಲ್ಲಿ ಹೂಡುತ್ತಿರುವ ಬಂಡವಾಳದಲ್ಲೂ ಕಳೆದ ಏಳು ವರ್ಷಗಳಲ್ಲಿ ಶೇ 9 ರಷ್ಟು ಬೆಳವಣಿಗೆ ಕಂಡು ಬಂದಿದೆ ಎಂದು ಜೋನಾಸ್‌ ವಿವರಿಸಿದರು.

ಇಂಗಾಲಮುಕ್ತ, ಪರಿಸರ ಸ್ನೇಹಿ ಇಂಧನಕ್ಕೆ ಹೆಚ್ಚು ಒತ್ತು ನೀಡಬೇಕಾಗಿದೆ. ಇದಕ್ಕಾಗಿ ಎಲ್ಲೆಡೆ ಹಸಿರು ಕವಚವನ್ನು ಸೃಷ್ಟಿಸಬೇಕು. ಇಂತಹ ಆಸಕ್ತಿ ಸಾರ್ವಜನಿಕರಲ್ಲೂ ಹುಟ್ಟಬೇಕು. ಮಂಗಳೂರಿನಲ್ಲಿ ಹಸಿರು ಇಂಧನ ಉತ್ಪಾದಿಸಲು ಸರ್ಕಾರ ಮುಂದಡಿ ಇಟ್ಟಿದೆ. ಅಪಾರ ಪ್ರಮಾಣದಲ್ಲಿ ಹೂಡಿಕೆ ಹರಿದು ಬರುತ್ತಿದೆ ಎಂದು ಸಚಿವ ಎಂ.ಬಿ.ಪಾಟೀಲ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.