ಬೆಂಗಳೂರು: ಯಾಕೆ ಈ ಫೋಟೋ ವೈರಲ್ ಮಾಡುತ್ತಿದ್ದಾರೆ ಎಂದು ಗೊತ್ತಿಲ್ಲ. ಇತ್ತೀಚಿಗೆ ನನ್ನನ್ನು ಇಂದ್ರಜಿತ್ ಭೇಟಿ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಇಂದ್ರಜಿತ್ ಲಂಕೇಶ್ ಮತ್ತು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರ ಭೇಟಿಯ ಫೋಟೊವೊಂದು ವೈರಲ್ ಆಗಿರುವ ವಿಚಾರದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಪತ್ರಿ ದಿನ ನೂರಾರು ಜನ ನನ್ನನ್ನು ಭೇಟಿ ಮಾಡುತ್ತಾರೆ. ನನ್ನ ಜೊತೆ ಫೋಟೋ ತೆಗೆದುಕೊಳ್ಳುತ್ತಾರೆ.
ಬಹುಷಃ ನನ್ನಷ್ಟು ಒಬ್ಬ ರಾಜಕಾರಣಿ ಮುಕ್ತವಾಗಿ ವಿಷಯಗಳನ್ನು ಪ್ರಸ್ತಾಪ ಮಾಡುವವನು ಈ ದೇಶದಲ್ಲೇ ಇಲ್ಲ. ಮುಕ್ತವಾಗಿ ಎಲ್ಲರ ಜೊತೆ ಚರ್ಚೆ ಮಾಡುತ್ತೇನೆ. ಇಲ್ಲಿ ಯಾವುದೋ ಒಂದು ಫೋಟೊ ತೆಗೆದುಕೊಂಡು ಗುರುವಾರದಿಂದ ನಡೆಯುತ್ತಿರುವ ಘಟನೆಗೆ ಥಳಕು ಹಾಕುವಂತ ಕೆಲಸ ಮಾಡಬೇಡಿ ಎಂದು ಮನವಿ ಮಾಡಿದರು.
ಈ ಹಿಂದೆ ಹಲವು ಬಾರಿ ಇಂದ್ರಜಿತ್ ಅವರು ನನ್ನನ್ನು ಭೇಟಿ ಮಾಡಿದ್ದಾರೆ. ಸಂದರ್ಶನ ನಡೆಸಿದ್ದಾರೆ. ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಆದರೆ ಇತ್ತೀಚೆಗೆ ಅವರನ್ನು ಭೇಟಿ ಮಾಡಿಲ್ಲ. ಯಾಕೆ ನನ್ನ ಹೆಸರು ಥಳಕು ಹಾಕಿಕೊಂಡಿದ್ದಿರಾ? ನಾನು ರಾಜಕಾರಣ ಮಾಡಿದರೆ ನೇರವಾಗಿ ಮಾಡುತ್ತೆನೆ ಎಂದು ಕುಮಾರಸ್ವಾಮಿ ತಿಳಿಸಿದರು.
ಈ ಫೋಟೊ ಯಾರು ಯಾವ ಕಾರಣಕ್ಕೆ ಬಳಸಿಕೊಂಡು ಉಪಯೋಗ ಮಾಡಿಕೊಳ್ಳಲು ಹೊರಟಿದ್ದಾರೆ ಎಂಬುದರ ಸತ್ಯವನ್ನು ಅವರೇ ತಿಳಿಸುವುದು ಒಳ್ಳೆಯದು ಎಂದು ಇಂದ್ರಜಿತ್ ಲಂಕೇಶ್ ಅವರಿಗೆ ಮಾಧ್ಯಮದ ಮೂಲಕ ಮನವಿ ಮಾಡಿದರು.
ಇತ್ತೀಚೆಗೆ ಹೋಟೆಲ್ ಸಿಬ್ಬಂದಿ ಮೇಲೆ ನಟನಿಂದ ಹಲ್ಲೆ ನಡೆದಿದೆ ಎಂದು ಪತ್ರಕರ್ತ ಇಂದ್ರಜಿತ್ ಲಂಕೇಶ್ ಆರೋಪಿಸಿದ್ದ ಬೆನ್ನಲ್ಲೇ ಕುಮಾರಸ್ವಾಮಿ ಅವರನ್ನು ಭೇಟಿಯಾಗಿರುವ ಬಗ್ಗೆ ವದಂತಿಗಳು ಏರ್ಪಟ್ಟಿದ್ದವು. ವೈರಲ್ ಆಗಿದ್ದ ಫೋಟೊ ಮೂಲಕ ನಟ ದರ್ಶನ್ ವಿರುದ್ಧದ ಹೋಟೆಲ್ ಸಿಬ್ಬಂದಿ ಮೇಲಿನ ಹಲ್ಲೆ ಪ್ರಕರಣದಲ್ಲಿ ಕುಮಾರಸ್ವಾಮಿ ಅವರ ಹೆಸರನ್ನು ಎಳೆದು ತರಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.