ADVERTISEMENT

ಇನ್‌ಫ್ಲೂಯೆಂಜಾ ಜ್ವರ: ಎಚ್ಚರ ವಹಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2023, 16:24 IST
Last Updated 18 ಮಾರ್ಚ್ 2023, 16:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜಸ್ಥಾನ, ಗುಜರಾತ್ ಸೇರಿ ವಿವಿಧ ರಾಜ್ಯಗಳಲ್ಲಿ ಹೆಚ್ಚಳವಾಗಿರುವ ಇನ್‌ಫ್ಲೂಯೆಂಜಾ ಜ್ವರ, ರಾಜ್ಯದಲ್ಲಿಯೂ ಹೆಚ್ಚುವ ಸಾಧ್ಯತೆಯಿದೆ. ಆದ್ದರಿಂದ ಈ ಜ್ವರ ತಡೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.

ಈ ಬಗ್ಗೆ ಸುತ್ತೋಲೆ ಹೊರಡಿಸಲಾಗಿದೆ. ಇನ್‌ಫ್ಲೂಯೆಂಜಾ ಚಿಕಿತ್ಸೆಗೆ ಉತ್ತಮ ಆಯ್ಕೆಯಾಗಿರುವ ‘ಒಸಲ್ಟಾಮಿವಿರ್ ಆ್ಯಂಟಿ-ವೈರಲ್’ ಅನ್ನು ಅಗತ್ಯ ಔಷಧಗಳ ಪಟ್ಟಿಗೆ ಸೇರಿಸಲಾಗಿದೆ. ಇದು ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿರುತ್ತದೆ. ಐಸಿಎಂಆರ್ ಪ್ರಯೋಗಾಲಯಗಳ ದತ್ತಾಂಶ ವಿಶ್ಲೇಷಣೆಯಿಂದ ಕರ್ನಾಟಕದಲ್ಲೂ ಈ ಸೋಂಕು ಪ್ರಕರಣಗಳು ವ್ಯಾಪಿಸಿಕೊಳ್ಳುತ್ತಿರುವುದು ತಿಳಿದು ಬಂದಿದೆ ಎಂದು ಇಲಾಖೆ ಹೇಳಿದೆ.

ಋತುಮಾನದ ಫ್ಲೂ ಜ್ವರವು ಸಾಂಕ್ರಾಮಿಕ ರೋಗವಾಗಿದ್ದು, ಜ್ವರ ಇರುವ ವ್ಯಕ್ತಿ ಕೆಮ್ಮಿದಾಗ ಹಾಗೂ ಸೀನಿದಾಗ ಹೊರಹೊಮ್ಮುವ ತುಂತುರು ಹನಿಗಳ ಸಂಪರ್ಕದಿಂದ ಒಬ್ಬರಿಂದ ಒಬ್ಬರಿಗೆ ಸೋಂಕು ಹರಡುತ್ತದೆ. ಸ್ವಯಂ ನಿಯಂತ್ರಣಕ್ಕೆ ಬರುವ ಈ ಸಾಂಕ್ರಾಮಿಕ ರೋಗವು 5-7 ದಿನಗಳವರೆಗೆ ಕಾಡಲಿದೆ. ಕೆಲವರಿಗೆ ಆಸ್ಪತ್ರೆಗೆ ದಾಖಲಾಗಬೇಕಾದ ಅವಶ್ಯಕತೆ ಬರಬಹುದು. ಹಾಗಾಗಿ, ನವಜಾತ ಶಿಶುಗಳು, ವೃದ್ಧರು, ಗರ್ಭಿಣಿಯರು, ರೋಗ ನಿರೋಧಕ ಶಕ್ತಿ ಕುಂಠಿತಗೊಂಡವರು ಸೇರಿ ಕೆಲ ವರ್ಗದವರು ಎಚ್ಚರಿಕೆಯಿಂದ ಇರಬೇಕು ಎಂದು ಇಲಾಖೆ ತಿಳಿಸಿದೆ.

ADVERTISEMENT

ಜ್ವರ, ಚಳಿ, ಆಲಸ್ಯ, ಹಸಿವಾಗದಿರುವಿಕೆ, ಮೈ-ಕೈನೋವು, ವಾಕರಿಕೆ, ಸೀನುವಿಕೆ, ಬಹುದಿನಗಳ ಒಣಕೆಮ್ಮು ಹಾಗೂ ಹಠಾತ್ ಅಸ್ವಸ್ಥತೆಗೊಳಗಾಗುವುದು ಈ ರೋಗದ ಸಾಮಾನ್ಯ ಲಕ್ಷಣಗಳಾಗಿವೆ. ಹೆಚ್ಚಿನ ಔಷಧ ತೆಗೆದುಕೊಳ್ಳುತ್ತಿರುವವರಿಗೆ ಈ ಲಕ್ಷಣಗಳು 3 ವಾರಗಳವರೆಗೂ ಕಾಣಿಸಿಕೊಳ್ಳಬಹುದು ಎಂದು ಇಲಾಖೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.