ADVERTISEMENT

ಮಾಹಿತಿ ಸೋರಿಕೆ | ರಾಜಭವನದ ತನಿಖೆಗೆ ಭ್ರಷ್ಟ ಅಧಿಕಾರಿ: ಎಚ್‌ಡಿಕೆ ಆರೋಪ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2024, 15:27 IST
Last Updated 28 ಸೆಪ್ಟೆಂಬರ್ 2024, 15:27 IST
‘ರಾಜ್ಯಪಾಲರು ಕೇಳಿದ ಮಾಹಿತಿ ನೀಡಬೇಕು’ ಎಂದು 2011ರಲ್ಲಿ ಸಿದ್ದರಾಮಯ್ಯ ಹೇಳಿದ್ದ ವಿಡಿಯೊವನ್ನು ಎಚ್‌.ಡಿ.ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ತೋರಿಸಿದರು –ಪ್ರಜಾವಾಣಿ ಚಿತ್ರ
‘ರಾಜ್ಯಪಾಲರು ಕೇಳಿದ ಮಾಹಿತಿ ನೀಡಬೇಕು’ ಎಂದು 2011ರಲ್ಲಿ ಸಿದ್ದರಾಮಯ್ಯ ಹೇಳಿದ್ದ ವಿಡಿಯೊವನ್ನು ಎಚ್‌.ಡಿ.ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ತೋರಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಲೋಕಾಯುಕ್ತ ವಿಶೇಷ ತನಿಖಾ ತಂಡದ ಐಜಿಪಿ ಎಂ.ಚಂದ್ರಶೇಖರ್‌ ಮಹಾ ಭ್ರಷ್ಟ. ಮಾಹಿತಿ ಸೋರಿಕೆ ಸಂಬಂಧ ರಾಜಭವನ ಸಚಿವಾಲಯದಲ್ಲಿ ತನಿಖೆ ನಡೆಸಲು ಈ ಅಧಿಕಾರಿಯನ್ನು ಸರ್ಕಾರ ಬಳಸಿಕೊಳ್ಳುತ್ತಿದೆ’ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದರು. 

ಮಾಧ್ಯಮಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ರಾಜಭವನ ಸಚಿವಾಲಯದ ಪಾತ್ರದ ಕುರಿತು ತನಿಖೆ ನಡೆಸಲು ಅನುಮತಿ ನೀಡಿ ಎಂದು ಈ ಅಧಿಕಾರಿ ಪತ್ರ ಬರೆದಿದ್ದಾನೆ. ಆದರೆ ಈತ ರಾಜ್ಯದಲ್ಲಿ ಕರ್ತವ್ಯದಲ್ಲಿರುವುದೇ ಕಾನೂನುಬಾಹಿರ. ಅಂತಹ ವ್ಯಕ್ತಿ ರಾಜಭವನದಲ್ಲಿ ತನಿಖೆ ನಡೆಸುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

‘ಈತ ಆಂಧ್ರಪ್ರದೇಶದವನಾಗಿದ್ದು, ಹಿಮಾಚಲ ಪ್ರದೇಶ ಕೇಡರ್‌ನ ಐಪಿಎಸ್‌ ಅಧಿಕಾರಿ. ಕರ್ನಾಟಕಕ್ಕೆ ನಿಯೋಜನೆ ಮೇಲೆ ಬಂದು, ಇಲ್ಲೇ ಉಳಿದಿದ್ದಾನೆ. ನಿಯೋಜನೆ ಮೇಲೆ ಗರಿಷ್ಠ ಐದು ವರ್ಷವಷ್ಟೇ ಇರಬಹುದು. ಈತ ಆರೋಗ್ಯದ ನೆಪವೊಡ್ಡಿ, ಸುಳ್ಳು ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸಿ 11–12 ವರ್ಷಗಳಿಂದಲೂ ಇಲ್ಲೇ ಇದ್ದಾನೆ’ ಎಂದು ಆಪಾದಿಸಿದರು.

ADVERTISEMENT

‘ಸುದ್ದಿ ವಾಹಿನಿಯೊಂದರ ಒಡೆಯನಾಗಿದ್ದ ವಿಜಯ್ ಟಾಟಾ ಜತೆ ಸೇರಿ, ಇದೇ ಚಂದ್ರಶೇಖರ್ ಸಂಚು ರೂಪಿಸುತ್ತಿದ್ದ. ಪಿಎಸ್‌ಎಲ್‌ ಎಂಬ ಕಂಪನಿಯ ಮಾಲೀಕರಿಂದ ₹100 ಕೋಟಿ ವಸೂಲಿ ಮಾಡಿದ್ದ. ತನ್ನ ಅಧೀನ ಅಧಿಕಾರಿಯಿಂದಲೇ ₹20 ಕೋಟಿ ಲಂಚ ಕೇಳಿದ್ದ. ಈತ ಮಾನ್ಯತಾ ಟೆಕ್‌ ಪಾರ್ಕ್‌ ಎದುರು, ರಾಜಕಾಲುವೆ ಮೇಲೆ ತನ್ನ ಪತ್ನಿ ಹೆಸರಿನಲ್ಲಿ 38 ಅಂತಸ್ತಿನ ಅಪಾರ್ಟ್‌ಮೆಂಟ್‌ ಕಟ್ಟುತ್ತಿದ್ದಾನೆ. ಅಧೀನ ಅಧಿಕಾರಿಗಳು, ಉದ್ಯಮಿಗಳು ಮತ್ತು ಸಾರ್ವಜನಿಕರಿಂದಲೇ ಈತನ ಮೇಲೆ ದೂರು ದಾಖಲಾಗಿದೆ. ಇಷ್ಟೆಲ್ಲಾ ಪ್ರಕರಣಗಳು ಇದ್ದರೂ ಸರ್ಕಾರ ಆತನ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ’ ಎಂದರು.

‘ಸಿ.ಎಂ ಇಬ್ಬಗೆ ನೀತಿ’: 

‘ಸಿದ್ದರಾಮಯ್ಯ ವಿರೋಧ ಪಕ್ಷದಲ್ಲಿದ್ದಾಗ, ‘ರಾಜ್ಯಪಾಲರದ್ದು ಸಾಂವಿಧಾನಿಕ ಹುದ್ದೆ. ಅವರು ಕೇಳಿದ ಮಾಹಿತಿ, ವರದಿ ಕೊಡುವುದು ಸರ್ಕಾರದ ಕರ್ತವ್ಯ’ ಎಂದಿದ್ದರು. ಈಗ ಸಂಪುಟದ ಗಮನಕ್ಕೆ ತರದೆ, ರಾಜ್ಯಪಾಲರ ಪತ್ರಕ್ಕೆ ಉತ್ತರಿಸಬೇಡಿ’ ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಅವರದ್ದು ಇಬ್ಬಗೆ ನೀತಿ’ ಎಂದು ಕುಮಾರಸ್ವಾಮಿ ಟೀಕಿಸಿದರು.

ನನ್ನ ಬಳಿ ಹಲವು ದಾಖಲೆಗಳು ಇವೆ. ಅವನ್ನು ಬಿಡುಗಡೆ ಮಾಡಿದರೆ ರಾಜ್ಯ ಸರ್ಕಾರದ ಏಳು ಜನ ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ.
ಎಚ್‌.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ

‘ಸಂದರ್ಭ ಬಂದರೆ ರಾಜೀನಾಮೆ’

‘ಗಂಗೇನಹಳ್ಳಿ ಡಿನೋಟಿಫೈ ನಾನು ಮಾಡಿಲ್ಲ. ಹೀಗಾಗಿ ನನ್ನ ರಾಜೀನಾಮೆ ಕೇಳುವುದರಲ್ಲಿ ಅರ್ಥವಿಲ್ಲ. ಒಂದೊಮ್ಮೆ ಸಂದರ್ಭ ಬಂದರೆ ರಾಜೀನಾಮೆ ನೀಡುತ್ತೇನೆ’ ಎಂದು ಕುಮಾರಸ್ವಾಮಿ ಹೇಳಿದರು. ‘ಆ ಜಮೀನಿಗೆ ಸಂಬಂಧಿಸಿದಂತೆ ನಮ್ಮ ಅತ್ತೆ ಹೆಸರಿನಲ್ಲಿ ಜಿಪಿಎ ಆಗಿದೆ ಎಂಬುದು ನನಗೆ ಗೊತ್ತಿರಲಿಲ್ಲ. ಅದಕ್ಕೂ ನನಗೂ ಸಂಬಂಧವೇ ಇಲ್ಲ’ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ‘ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ಸಿಗರು ನರೇಂದ್ರ ಮೋದಿ ಮತ್ತು ನಿರ್ಮಲಾ ಸೀತಾರಾಮನ್‌ ಅವರ ರಾಜೀನಾಮೆ ಕೇಳುತ್ತಿದ್ದಾರೆ. ಅವರಾದರೂ ಏಕೆ ರಾಜೀನಾಮೆ ನೀಡಬೇಕು’ ಎಂದು ಪ್ರಶ್ನಿಸಿದರು.

‘ಸಿ.ಎಂ ಕಚೇರಿಯಿಂದಲೇ ಮಾಹಿತಿ ಸೋರಿಕೆ’

‘ಲೋಕಾಯುಕ್ತ ಪೊಲೀಸರು ನನಗೆ ನೋಟಿಸ್‌ ನೀಡಲು ಬಂದಿದ್ದರು ನಾನು ನೋಟಿಸ್‌ ಪಡೆದುಕೊಳ್ಳಲಿಲ್ಲ ಎಂದು ಒಂದು ಸುದ್ದಿ ವಾಹಿನಿ ಮಾತ್ರ ವರದಿ ಮಾಡಿತ್ತು. ಅವರಿಗೆ ಈ ಮಾಹಿತಿ ಸಿಕ್ಕಿದ್ದು ಹೇಗೆ? ಮುಖ್ಯಮಂತ್ರಿ ಕಚೇರಿಯಿಂದಲೇ ಮಾಹಿತಿ ಸೋರಿಕೆ ಆಗಿರಬೇಕು’ ಎಂದು ಕುಮಾರಸ್ವಾಮಿ ಹೇಳಿದರು. ‘ಈ ಸರ್ಕಾರವು ತನ್ನ ಅನುಕೂಲಕ್ಕೆ ಬರುವ ಮಾಹಿತಿಯನ್ನು ಒಂದೇ–ಒಂದು ಸುದ್ದಿ ವಾಹಿನಿಗೆ ಸೋರಿಕೆ ಮಾಡುತ್ತಿದೆ. ಬೇರೆ ಯಾವ ಮಾಧ್ಯಮಕ್ಕೂ ಮಾಹಿತಿ ನೀಡುತ್ತಿಲ್ಲ. ಇದು ಹೆಚ್ಚು ದಿನ ನಡೆಯುವುದಿಲ್ಲ. ಆ ಸುದ್ದಿ ವಾಹಿನಿಯನ್ನು ದೇವರು ನೋಡಿಕೊಳ್ಳುತ್ತಾನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.