ADVERTISEMENT

ಕೋವಿಡ್-19 ಚಿಕಿತ್ಸಾ ಆಸ್ಪತ್ರೆಗೆ ಸಕಲ ನೆರವು ನೀಡಲು ಮುಂದೆ ಬಂದ ಸುಧಾ ಮೂರ್ತಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 2:45 IST
Last Updated 13 ಮಾರ್ಚ್ 2020, 2:45 IST
ಇನ್ಫೊಸಿಸ್‌ ಫೌಂಡೇಷನ್‌ನ ಸುಧಾ ಮೂರ್ತಿ
ಇನ್ಫೊಸಿಸ್‌ ಫೌಂಡೇಷನ್‌ನ ಸುಧಾ ಮೂರ್ತಿ    

ಬೆಂಗಳೂರು:ಕೊರೊನಾ ವೈರಸ್‌ ರಾಜ್ಯದಲ್ಲಿ ವ್ಯಾಪಿಸದಂತೆ ಕ್ರಮವಹಿಸಲು, ಸಕಲ ರೀತಿಯಲ್ಲಿ ಸಜ್ಜಾಗಲು ಸರ್ಕಾರದ ಜೊತೆಗೆ ಕೈಜೋಡಿಸಲು ಇನ್ಫೊಸಿಸ್‌ ಫೌಂಡೇಷನ್‌ ಮುಂದೆ ಬಂದಿದೆ. ಈ ಕುರಿತು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಶುಕ್ರವಾರ ಟ್ವೀಟ್‌ ಮಾಡಿದ್ದಾರೆ.

ದೇಶದಲ್ಲಿ ಕೊರೊನಾ ವೈರಸ್‌ ಸೋಂಕು (ಕೋವಿಡ್‌–19) ತಗುಲಿರುವ 14 ಹೊಸ ಪ್ರಕರಣಗಳು ಗುರುವಾರ ವರದಿಯಾಗಿವೆ. ದೇಶದಲ್ಲಿ ಸೋಂಕಿತರ ಸಂಖ್ಯೆ 74ಕ್ಕೆ ಏರಿಕೆಯಾಗಿದೆ. ಸೌದಿ ಅರೇಬಿಯಾದಿಂದ ಕಲಬುರ್ಗಿಗೆ ವಾಪಸಾಗಿದ್ದ ವೃದ್ಧರೊಬ್ಬರು ಮೃತಪಟ್ಟಿದ್ದು ‘ಕೋವಿಡ್‌–19’ ಸೋಂಕಿನಿಂದಲೇ ಎಂದು ದೃಢಪಟ್ಟಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಇದೇ ಸಮಯದಲ್ಲಿ ರಾಜ್ಯದಲ್ಲಿ ಕೋವಿಡ್‌–19 ಚಿಕಿತ್ಸೆಗೆ ಆಸ್ಪತ್ರೆಯೊಂದನ್ನು ಅಣಿಗೊಳಿಸಲು ಇನ್ಫೊಸಿಸ್‌ ಫೌಂಡೇಷನ್‌ನ ಸುಧಾ ಮೂರ್ತಿ ಮುಂದೆ ಬಂದಿದ್ದಾರೆ.

'ಆಸ್ಪತ್ರೆಯೊಂದು ವಹಿಸಿದರೆ, ಅಲ್ಲಿ ಕೊರೋನಾ ವೈರಸ್‌ ಸೋಂಕಿತರಿಗೆ ಚಿಕಿತ್ಸೆ ನೀಡಲು ಇನ್ಫೊಸಿಸ್ ಫೌಂಡೇಷನ್‌ ಮೂಲಕ ಅಗತ್ಯ ವೆಚ್ಚ ಭರಿಸಿ ಪೂರ್ಣಪ್ರಮಾಣದಲ್ಲಿ ಸಜ್ಜುಗೊಳಿಸಲಾಗುತ್ತದೆ. ಅಗತ್ಯ ಉಪಕರಣಗಳನ್ನೂ ಒದಗಿಸುವುದಾಗಿಯೂ' ಹೇಳಿರುವುದಾಗಿ ಸುರೇಶ್‌ ಕುಮಾರ್ ಪ್ರಕಟಿಸಿದ್ದಾರೆ.

ADVERTISEMENT

ದೇಶ-ವಿದೇಶಗಳಲ್ಲಿ ಆತಂಕ ತಂದಿರುವ ಕರೋನಾ ವೈರಸ್ ಹರಡದಂತೆ ರಾಜ್ಯದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸುರೇಶ್‌ ಕುಮಾರ್‌ ಅವರೊಂದಿಗೆ ಚರ್ಚಿಸಿದ್ದಾರೆ.ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಮತ್ತು ಆರೋಗ್ಯ ಸಚಿವ ಶ್ರೀರಾಮುಲು ಅವರೊಂದಿಗೂ ಸುಧಾ ಮೂರ್ತಿ ಚರ್ಚಿಸಿದ್ದು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೂ ಪತ್ರ ರವಾನಿಸಿದ್ದಾರೆ.

ಸದ್ಯದಲ್ಲಿಯೇ ಈ ಕುರಿತು ಉನ್ನತಮಟ್ಟದ ಸಭೆ ನಡೆಯಲಿದೆ ಎಂದು ಸುರೇಶ್ ಕುಮಾರ್‌ ತಿಳಿಸಿದ್ದಾರೆ.

'ನಿನ್ನೆ ಸಂಜೆ ಸುಧಾಮೂರ್ತಿ ಫೋನ್ ಮಾಡಿ ನಮ್ಮ ಶಿಕ್ಷಣ ಇಲಾಖೆಯಲ್ಲಿ‌ ಮಕ್ಕಳ ಹಿತವನ್ನು‌ ಗಮನದಲ್ಲಿಟ್ಟುಕೊಂಡು ಶಾಲೆಗಳಿಗೆ ರಜೆ ಘೋಷಿಸಿರುವ ಕ್ರಮ ವಿವರಿಸಿದೆ.ಇಷ್ಟು ಬೇಗ ಕ್ರಮ ತೆಗೆದುಕೊಂಡಿರುವ ಬಗ್ಗೆ ತಮ್ಮ ಸಂತಸ ವ್ಯಕ್ತಪಡಿಸಿದರು‌‌' ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.