ಬೆಂಗಳೂರು: ‘ಮುಕ್ತ ಮಾರುಕಟ್ಟೆ ಹಾಗೂ ಸಹಾನುಭೂತಿಯುಳ್ಳ ಬಂಡವಾಳಶಾಹಿ ವ್ಯವಸ್ಥೆಯೊಂದೇ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳ ಅಭಿವೃದ್ಧಿಗೆ ಇರುವ ಪರಿಹಾರ’ ಎಂದು ಇನ್ಫೊಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅಭಿಪ್ರಾಯಪಟ್ಟರು.
ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ ಮೊದಲ ದಿನವಾದ ಬುಧವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಜಗತ್ತಿನಲ್ಲಿ ಸಮಾಜವಾದ, ಎಡಪಂಥೀಯ ಸಿದ್ಧಾಂತಗಳನ್ನು ನಂಬಿದ ರಾಷ್ಟ್ರಗಳು ಅಷ್ಟಾಗಿ ಉತ್ತಮ ಸ್ಥಿತಿಯಲ್ಲಿಲ್ಲ. ಇಂಥ ಸಿದ್ಧಾಂತ ನಂಬಿದ್ದ ಸೋವಿಯತ್ ಒಕ್ಕೂಟವೇ ಇಲ್ಲವಾಗಿದೆ. ಇಂಥ ಸಂದರ್ಭದಲ್ಲಿ ಸಹಾನುಭೂತಿಯುಳ್ಳ ಬಂಡವಾಳಶಾಹಿ ವ್ಯವಸ್ಥೆ ನಮ್ಮ ರಾಷ್ಟ್ರಕ್ಕೆ ಅಗತ್ಯವಿದೆ. ಇದೇ ಸಂದರ್ಭದಲ್ಲಿ ಬಂಡವಾಳ ಹೂಡುವವರು ತಮ್ಮ ಕಂಪನಿಯಲ್ಲಿ ದುಡಿಯುವ ಕಟ್ಟಕಡೆಯ ವ್ಯಕ್ತಿಯ ಹಿತವನ್ನು ಗಮನದಲ್ಲಿಟ್ಟುಕೊಂಡೇ ಯಾವುದೇ ಕ್ರಮವನ್ನು ಕೈಗೊಳ್ಳಬೇಕು. ಹೀಗಾದಲ್ಲಿ ಮಾತ್ರ ಎಲ್ಲರ ಉದ್ಧಾರ ಸಾಧ್ಯ’ ಎಂದರು.
‘ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಕಟ್ಟಾ ಅಭಿಮಾನಿಯಾದ ನಮ್ಮ ತಂದೆಯ ಪ್ರಭಾವದಿಂದ ನಾವೂ ಸಮಾಜವಾದ ಹಾಗೂ ಸ್ವಲ್ಪ ಮಟ್ಟಿನ ಎಡಪಂಥೀಯವಾದವನ್ನು ಅನುಸರಿಸುತ್ತಿದ್ದೆವು. ಆ ಕಾಲಕ್ಕೆ ದೇಶದ ಪರಿಸ್ಥಿತಿಗೆ ಅದು ಅಗತ್ಯವಿತ್ತು. ಆದರೆ ನಾನು ಫ್ರಾನ್ಸ್‌ನಂತ ಅಭಿವೃದ್ಧಿ ಹೊಂದಿದ ರಾಷ್ಟ್ರದಲ್ಲಿ ಒಂದಷ್ಟು ಕಾಲ ಇದ್ದ ನಂತರ, ನನ್ನ ಆಲೋಚನೆಯೇ ತಪ್ಪು ಎಂದೆನಿಸಿತು. ನಮ್ಮ ದೇಶದ ಅಭಿವೃದ್ಧಿಗೆ ಬಂಡವಾಳಶಾಹಿ ವ್ಯವಸ್ಥೆ ಅಗತ್ಯ, ಆದರೆ ಅದು ಸಹಾನುಭೂತಿಯುಳ್ಳದ್ದಾಗಿರಬೇಕು ಎಂಬುದು ಸ್ಪಷ್ಟವಾಯಿತು’ ಎಂದರು.
‘ತೆರಿಗೆ ವ್ಯವಸ್ಥೆ ಕುರಿತು ಮಾತನಾಡಿದ ನಾರಾಯಣಮೂರ್ತಿ, ‘ಭಾರತ ಬಡ ರಾಷ್ಟ್ರ. ಇಲ್ಲಿರುವ ಬಹುತೇಕರ ತಿಂಗಳ ಆದಾಯ ₹6 ಸಾವಿರದಿಂದ ₹15 ಸಾವಿರವರೆಗೆ ಇದೆ. ಇವರನ್ನು ಸಲಹುವುದರ ಜತೆಗೆ ದೇಶದ ಮೂಲಸೌಕರ್ಯ ಹೆಚ್ಚಿಸುವ ಜವಾಬ್ದಾರಿಯೂ ಸರ್ಕಾರಕ್ಕಿದೆ. ಪಾಶ್ಚಿಮಾತ್ಯ ರಾಷ್ಟ್ರಗಳಿಗಿಂತ ನಾವು ಹೆಚ್ಚಿನ ತೆರಿಗೆ ನೀಡುತ್ತಿರಬಹುದು. ಆದರೆ ಸದ್ಯದ ಪರಿಸ್ಥಿತಿಗೆ ಇದು ಅನಿವಾರ್ಯ. ಆ ಮೂಲಕ ಸದೃಢ, ಭ್ರಷ್ಟಾಚಾರ ರಹಿತ ಸರ್ಕಾರ ನೆಡಸಲು ಅನುಕೂಲವಾಗಲಿದೆ’ ಎಂದರು.
‘ದೇಶದ ಅರ್ಥವ್ಯವಸ್ಥೆಯನ್ನು ಉತ್ತಮ ಪಡಿಸಿಕೊಳ್ಳಬೇಕಾದರೆ ಪಕ್ಕದ ಚೀನಾ ಅಳವಡಿಸಿಕೊಂಡ ಉತ್ತಮ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸುವ ಅಗತ್ಯವಿದೆ. ನಮ್ಮ ದೇಶದಲ್ಲಿರುವ ರಾಜಕೀಯ ಪಕ್ಷಗಳು ದೇಶ ಮೊದಲು, ಪಕ್ಷ ನಂತರ ಎಂಬ ಮನಸ್ಥಿತಿ ಅಳವಡಿಸಿಕೊಂಡು ಎಲ್ಲಾ ಪಕ್ಷಗಳಲ್ಲಿರುವ ಪರಿಣಿತರು ಒಂದು ಸಮಿತಿ ರಚಿಸಬೇಕು. ಅದರ ಮೂಲಕ ವಿದೇಶಿ ಬಂಡವಾಳವನ್ನು ಹೇಗೆ ದೇಶಕ್ಕೆ ಹರಿಸಬಹುದು ಎಂಬುದರ ಕುರಿತು ನೀಲನಕ್ಷೆ ಸಿದ್ಧಪಡಿಸಬೇಕು’ ಎಂದು ನಾರಾಯಣಮೂರ್ತಿ ಸಲಹೆ ನೀಡಿದರು.
ಜೆರೋದಾ ಕಂಪನಿ ಸಂಸ್ಥಾಪಕ ನಿತಿನ್ ಕಾಮತ್ ಅವರು ಕಾರ್ಯಕ್ರಮ ನಡೆಸಿಕೊಟ್ಟರು.
‘ತಂತ್ರಜ್ಞರ ಲಭ್ಯತೆಗೆ ಇಂಗ್ಲಿಷ್ ಮಾಧ್ಯಮ ಶಾಲೆ ಕಡ್ಡಾಯವಾಗಲಿ’
‘ಇಲ್ಲಿನ ಕಂಪನಿಗಳಿಗೆ ಸ್ಥಳೀಯ ತಂತ್ರಜ್ಞರ ಲಭ್ಯತೆ ಪ್ರಮಾಣ ಶೇ 60ರಷ್ಟು ಮಾತ್ರ ಇದೆ. ಶೇ 100ರಷ್ಟನ್ನು ನಾವು ಸೃಜಿಸಬೇಕೆಂದರೆ ಕಡ್ಡಾಯವಾಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಆರಂಭಿಸಬೇಕು’ ನಾರಾಯಣಮೂರ್ತಿ ಹೇಳಿದರು.
ಶಿಕ್ಷಣ ವ್ಯವಸ್ಥೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದ ನೂತನ ಶಿಕ್ಷಣ ನೀತಿಗೆ ಈ ದೇಶದ ದಿಕ್ಕನ್ನೇ ಬದಲಿಸುವ ಶಕ್ತಿ ಇದೆ. ಜಾಗತಿಕ ಮಟ್ಟದ ಒಟ್ಟು ತಂತ್ರಾಂಶ ರಫ್ತು ಉದ್ಯಮದಲ್ಲಿ ಶೇ 37ರಷ್ಟು ಬೆಂಗಳೂರು ನೀಡುತ್ತದೆ. ತಂತ್ರಜ್ಞರ ಲಭ್ಯತೆ ಕಡಿಮೆ ಇದೆ. ಅದು ಪೂರೈಕೆಯಾಗಬೇಕಾದರೆ ಇಂಗ್ಲಿಷ್ ಕಲಿಯಲೇಬೇಕು. ಕನ್ನಡಿಗನಾಗಿ ನನಗೂ ಕನ್ನಡದ ಕುರಿತು ಅಭಿಮಾನವಿದೆ. ಆದರೆ, ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುವುದು ಅಗತ್ಯ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.