ADVERTISEMENT

ಸಿಂಗಪುರ ಉದ್ಯಮಿಗಳಿಗೆ ಮೂಲಸೌಕರ್ಯ: ಎಂ.ಬಿ.ಪಾಟೀಲ ಭರವಸೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2024, 16:13 IST
Last Updated 9 ಸೆಪ್ಟೆಂಬರ್ 2024, 16:13 IST
ಎಂ.ಬಿ.ಪಾಟೀಲ
ಎಂ.ಬಿ.ಪಾಟೀಲ   

ಬೆಂಗಳೂರು: ಸಿಂಗಪುರದ ಉದ್ಯಮಿಗಳು ರಾಜ್ಯದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆಗೆ ಮುಂದೆ ಬಂದರೆ ಅವರಿಗೆ ಅಗತ್ಯವಾಗಿ ಬೇಕಾದ ಭೂಮಿ ಮತ್ತು ಇತರ ಮೂಲಸೌಕರ್ಯಗಳನ್ನು ತ್ವರಿತಗತಿಯಲ್ಲಿ ಒದಗಿಸಲಾಗುವುದು ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಭರವಸೆ ನೀಡಿದ್ದಾರೆ.

ತಮ್ಮನ್ನು ಭೇಟಿ ಮಾಡಿದ ಸಿಂಗಪುರ್ ಬಿಜಿನೆಸ್ ಫೆಡರೇಶನ್‌ನ ಉನ್ನತ ಮಟ್ಟದ ನಿಯೋಗದ ಸದಸ್ಯರೊಂದಿಗೆ  ಮಾತುಕತೆ ನಡೆಸಿದ ಅವರು, ಅಲ್ಲಿನ ಉದ್ಯಮಿಗಳೊಂದಿಗೆ ನಿರಂತರ ಸಂಪರ್ಕದಲ್ಲಿ ಇರಲಾಗುವುದು ಎಂದೂ ಹೇಳಿದರು.

2025ರ ಫೆಬ್ರುವರಿ 12 ರಿಂದ 14 ರವರೆಗೆ ಬೆಂಗಳೂರಿನಲ್ಲಿ ನಡೆಯುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಸಿಂಗಪುರದ ಉದ್ದಿಮೆದಾರರು ಭಾಗವಹಿಸಬೇಕು ಎಂದು ಸಚಿವರು ಆಹ್ವಾನ ನೀಡಿದರು.

ADVERTISEMENT

ಸಿಂಗಪುರದ ಅಪ್ಲೈಡ್‌ ಟೋಟಲ್‌ ಕಂಟ್ರೋಲ್‌ ಟ್ರೀಟ್ಮೆಂಟ್ ಪಿಟಿಇ ಲಿಮಿಟೆಡ್‌, ಬಯೋಮೆಡ್‌ ಸರ್ವೀಸಸ್‌ ಪಿಟಿಇ ಲಿಮಿಟೆಡ್‌, ಕೇಟರಿಂಗ್‌ ಸೊಲ್ಯೂಷನ್ಸ್‌ ಲಿ, ಹರ್ಮಿಸ್‌ ಎಪಿಟೆಕ್‌ ಕಾರ್ಪೊರೇಷನ್‌, ಇನ್ಸ್ಫಿಯರ್‌ ಟೆಕ್ನಾಲಜಿ, ರಿಟ್ಜ್‌ ಲಿಮಿಟೆಡ್‌, ಯೂನಿವರ್ಸಲ್‌ ಸಕ್ಸಸ್‌ ಎಂಟರ್‌ಪ್ರೈಸಸ್‌ ಲಿಮಿಟೆಡ್‌ ರಾಜ್ಯದಲ್ಲಿ ಹೂಡಿಕೆ ಆಸಕ್ತಿ ವ್ಯಕ್ತಪಡಿಸಿದವು. ಇವುಗಳಿಗೆ ಅಗತ್ಯ ಭೂಮಿ ಮತ್ತು ಇತರ ಮೂಲಸೌಕರ್ಯಗಳನ್ನು ಒದಗಿಸುವುದಾಗಿ ಪಾಟೀಲ ಭರವಸೆ ನೀಡಿದರು.

ಸಿಂಗಪುರ ಬಿಜಿನೆಸ್‌ ಫೆಡರೇಶನ್‌ನ ಕಚೇರಿಯನ್ನು ಬೆಂಗಳೂರಿನಲ್ಲಿ ತೆರೆಯಲು ಆಸಕ್ತಿ ಹೊಂದಿರುವುದಾಗಿ ಫೆಡರೇಶನ್‌ ಸದಸ್ಯರು ತಿಳಿಸಿದರು. ನಿಯೋಗದಲ್ಲಿ ಉದ್ಯಮಿಗಳಾದ ಜೆಫ್ರಿ ಗುವೋ, ಡಗ್ಲಾಸ್‌ ಟ್ಯಾನ್‌, ಸಮಂತಾ ಟಿಯೋ, ಚೆನ್‌ ಚಿಯೋಂಗ್‌, ಮಾರ್ಕಸ್‌ ಸಿಯಾ, ಪಪ್ಪು ಮಿಲಿಂದ್ ಸುರೇಶ್‌, ಎಸ್‌.ಮಹೇಂದ್ರನ್‌, ಜೆಫ್ರಿ ಕಾಂಗ್‌ ಮತ್ತು ಶಂಭುನಾಥ್‌ ರೇ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.