ಬೆಂಗಳೂರು: ‘ರೋಹಿತ್ ಚಕ್ರತೀರ್ಥ ಅವರ ಅಧ್ಯಕ್ಷತೆಯ ಪಠ್ಯಪುಸ್ತಕ ಸಮಿತಿದಲಿತ ಬರಹಗಾರರನ್ನು ಕೈಬಿಟ್ಟು, ಬ್ರಾಹ್ಮಣ ಲೇಖಕರ ಪಠ್ಯ ಸೇರ್ಪಡೆ ಮಾಡಿದೆ’ ಎಂಬ ಆರೋಪ ಎದುರಾಗಿದೆ.
ಕೈಬಿಟ್ಟಿರುವ ಪಠ್ಯ ಹಾಗೂ ಸೇರ್ಪಡೆ ಮಾಡಿರುವ ಪಠ್ಯದ ಬಗ್ಗೆ, ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಸದಸ್ಯರಾಗಿದ್ದ ನಿವೃತ್ತ ಪ್ರಾಧ್ಯಾಪಕ ರವೀಶ್ ಕುಮಾರ್ ಅವರು ವರದಿ ತಯಾರಿಸಿ ಬಿಡುಗಡೆ ಮಾಡಿದ್ದಾರೆ. ‘ಪರಿಷ್ಕರಿಸಿದ ಪಠ್ಯಪುಸ್ತಕಗಳಲ್ಲಿ ಭಾರಿ ಅನ್ಯಾಯವಾಗಿದ್ದು, ದಲಿತ ಬರಹಗಾರರನ್ನು ಕೈಬಿಡಲಾಗಿದೆ.ಈ ಬಗ್ಗೆ ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರು ಪರಿಶೀಲನೆ ನಡೆಸಿ, ನ್ಯಾಯ ಒದಗಿಸಬೇಕು’ ಎಂದು ಆಗ್ರಹಿಸಿದ್ದಾರೆ.
‘ಚೆನ್ನಣ್ಣ ವಾಲಿಕಾರ, ಮೂಡ್ನಾಕೂಡು ಚಿನ್ನಸ್ವಾಮಿ, ಅರವಿಂದ ಮಾಲಗತ್ತಿ, ಟಿ. ಯಲ್ಲಪ್ಪ, ಸರಜೂ ಕಾಟ್ಕರ್, ದು. ಸರಸ್ವತಿ ಸೇರಿದಂತೆ ಈ ಹಿಂದೆ ಅವಕಾಶ ಪಡೆದಿದ್ದ ಬರಹಗಾರರ ಪಠ್ಯವನ್ನು ಮರು ಪರಿಷ್ಕರಣೆಯಲ್ಲಿ ಕೈಬಿಡಲಾಗಿದೆ. ಬ್ರಾಹ್ಮಣ ಲೇಖಕರ ಪಠ್ಯ ಸೇರ್ಪಡೆ ಮಾಡಲಾಗಿದೆ. ಕವಿ, ನಾಟಕಕಾರ ಎಚ್.ಎಸ್. ಶಿವಪ್ರಕಾಶ್ ಅವರ ಪದ್ಯ ತೆಗೆದು, ಎನ್. ಶ್ರೀನಿವಾಸ್ ಉಡುಪ ಅವರಿಗೆ ಅವಕಾಶ ಮಾಡಿಕೊಡಲಾಗಿದೆ. 6ನೇ ತರಗತಿ ಸಮಾಜ ವಿಜ್ಞಾನ ಪಠ್ಯದಿಂದ ಜೈನ ಧರ್ಮದ ವಿವರ ಕೈ ಬಿಟ್ಟಿದ್ದಾರೆ. 10ನೇ ತರಗತಿ ಪಠ್ಯದಿಂದ ಶಿವಕೋಟ್ಯಾಚಾರ್ಯರ ಪಾಠ ತೆಗೆದಿದ್ದಾರೆ. ಬೌದ್ಧ ಧರ್ಮದ ಪಾಠವನ್ನೂ ತೆಗೆಯಲಾಗಿದೆ’ ಎಂದು ತಿಳಿಸಿದ್ದಾರೆ.
‘ಈ ಹಿಂದಿನ ಪಠ್ಯಪುಸ್ತಕಗಳಲ್ಲಿ ಸಾಮಾಜಿಕ ನ್ಯಾಯ, ಲಿಂಗ ಸಮಾನತೆ ಮತ್ತು ಪ್ರಾದೇಶಿಕ ಪ್ರಾತಿನಿಧ್ಯಗಳಿಗೆ ಅನುಗುಣವಾಗಿ ಸುಮಾರು 28 ಮಂದಿಗೆ ನೀಡಿದ್ದ ಒಂದೇ ಒಂದು ಅವಕಾಶವನ್ನು ಕಸಿದುಕೊಂಡು, ತಮಗೆ ಬೇಕಾದವರಿಗೆ ಸಮಿತಿ ಅವಕಾಶ ನೀಡಿದೆ.ಕರ್ನಾಟಕ ಪಠ್ಯಪುಸ್ತಕ ಸಂಘ ಮೇ 31ರಂದು ಬಿಡುಗಡೆ ಮಾಡಿದ ಟಿಪ್ಪಣಿಯಲ್ಲಿ ಈ ವಿಷಯ ಸ್ಪಷ್ಟವಾಗಿದೆ’ ಎಂದೂ ಅವರು ತಿಳಿಸಿದ್ದಾರೆ.
‘1ರಿಂದ 10ನೇ ತರಗತಿಯ ಪ್ರಥಮ, ದ್ವಿತೀಯ, ತೃತೀಯ ಭಾಷೆಯ ಪಠ್ಯಪುಸ್ತಕದಲ್ಲಿ ಕೇವಲ ಒಂದೇ ಅವಕಾಶವಿದ್ದ ಕವಿ, ಲೇಖಕರನ್ನು ಕೈಬಿಡಲಾಗಿದೆ. 10ನೇ ತರಗತಿಯಲ್ಲಿ 4 ಬಿಡಿ ಲೇಖನಗಳನ್ನು ಮತ್ತು 7 ಪೂರಕ ಅಧ್ಯಾಯಗಳನ್ನು ಸೇರಿಸುವ ಮೂಲಕ ವಿದ್ಯಾರ್ಥಿಗಳಿಗೆ ಪಾಠದ ಹೊರೆ ಹೆಚ್ಚಿಸಲಾಗಿದೆ’ ಎಂದೂ ಅವರು ದೂರಿದ್ದಾರೆ.
‘ಅರ್ಹತೆ ಬಗ್ಗೆ ಉತ್ತರಿಸುವ ಅಗತ್ಯವಿಲ್ಲ’
‘ಈ ಹಿಂದಿನ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷಬರಗೂರು ರಾಮಚಂದ್ರಪ್ಪ ಅವರು ದಾಖಲಾತಿಯೊಂದಿಗೆ ಚರ್ಚೆಗೆ ಬಂದರೆ ಉತ್ತರಿಸುತ್ತೇನೆ. ಉಳಿದವರ ಆರೋಪಕ್ಕೆ ಪ್ರತಿಕ್ರಿಯೆ ನೀಡಲಾರೆ. ನನ್ನ ಶೈಕ್ಷಣಿಕ ಅರ್ಹತೆ ಬಗ್ಗೆಯೂ ಉತ್ತರಿಸುವ ಅಗತ್ಯವಿಲ್ಲ. ಸಮಿತಿಯನ್ನು ಸರ್ಕಾರ ರಚನೆ ಮಾಡಿದೆ. ಎಲ್ಲ ಆಯಾಮಗಳಿಂದಲೂ ನೋಡಿ, ನೇಮಕ ಮಾಡಲಾಗಿದೆ. ನಾನು ಐಐಟಿ–ಸಿಇಟಿ ಪ್ರಾಧ್ಯಾಪಕ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ’ ಎಂದು ರೋಹಿತ್ ಚಕ್ರತೀರ್ಥ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.
ಅರ್ಹತೆ ಪ್ರಶ್ನಿಸಿದ ಡಾ. ಕಕ್ಕಿಲ್ಲಾಯ
‘ಬಿಎಸ್ಸಿ ಪದವಿಯನ್ನಷ್ಟೇ ಪಡೆದಿರುವ ವ್ಯಕ್ತಿ ಶಾಲಾ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷರಾಗಬಹುದೆ? ಸ್ನಾತಕೋತ್ತರ ಪದವಿಯನ್ನೂ ಪಡೆಯದ, ಶಿಕ್ಷಕನಾಗಿ ಬೋಧಿಸದ ವ್ಯಕ್ತಿ ಇಂತಹ ಸಮಿತಿಯ ನೇತೃತ್ವ ವಹಿಸಲು ಅರ್ಹರೆ’ ಎಂದು ವೈದ್ಯ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಪ್ರಶ್ನಿಸಿದ್ದಾರೆ.
‘ಚಕ್ರತೀರ್ಥ ಅವರು ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದಿರುವ ಮಾಹಿತಿ ಇದೆ. ಪದವಿಯಲ್ಲಿ ಗಣಿತ, ಭೌತವಿಜ್ಞಾನ, ಕಂಪ್ಯೂಟರ್ ವಿಜ್ಞಾನ ವಿಭಾಗದಲ್ಲಿ ಓದಿದ, ಸಂಸ್ಕೃತವನ್ನು ಎರಡನೇ ಭಾಷೆಯಾಗಿ ಕಲಿತಿರುವ ಮಾಹಿತಿ ಸಿಕ್ಕಿದೆ. ಪದವಿಯಲ್ಲಿ ಕನ್ನಡವನ್ನು ಒಂದು ವಿಷಯವಾಗಿ ಕಲಿಯದ ವ್ಯಕ್ತಿ ಕನ್ನಡ ಪಠ್ಯಪುಸ್ತಕಗಳನ್ನು ಹೇಗೆ ಪರಿಷ್ಕರಿಸುತ್ತಾರೆ’ ಎಂದು ಕೇಳಿದರು.
‘ಅರ್ಹತೆ ಬಗ್ಗೆ ಉತ್ತರಿಸುವ ಅಗತ್ಯವಿಲ್ಲ’
‘ಈ ಹಿಂದಿನ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷಬರಗೂರು ರಾಮಚಂದ್ರಪ್ಪ ಅವರು ದಾಖಲಾತಿಯೊಂದಿಗೆ ಚರ್ಚೆಗೆ ಬಂದರೆ ಉತ್ತರಿಸುತ್ತೇನೆ. ಉಳಿದವರ ಆರೋಪಕ್ಕೆ ಪ್ರತಿಕ್ರಿಯೆ ನೀಡಲಾರೆ. ನನ್ನ ಶೈಕ್ಷಣಿಕ ಅರ್ಹತೆ ಬಗ್ಗೆಯೂ ಉತ್ತರಿಸುವ ಅಗತ್ಯವಿಲ್ಲ. ಸಮಿತಿಯನ್ನು ಸರ್ಕಾರ ರಚನೆ ಮಾಡಿದೆ. ಎಲ್ಲ ಆಯಾಮಗಳಿಂದಲೂ ನೋಡಿ, ನೇಮಕ ಮಾಡಲಾಗಿದೆ. ನಾನು ಐಐಟಿ–ಸಿಇಟಿ ಪ್ರಾಧ್ಯಾಪಕ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ’ ಎಂದು ರೋಹಿತ್ ಚಕ್ರತೀರ್ಥ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.