ADVERTISEMENT

ಜನಸಂಖ್ಯೆ ನಿಯಂತ್ರಿಸಿದ ರಾಜ್ಯಗಳಿಗೆ ಅನ್ಯಾಯ: ಸಚಿವ ದಿನೇಶ್‌ ಗುಂಡೂರಾವ್‌ ಬೇಸರ

ವಿಶ್ವ ಜನಸಂಖ್ಯಾ ದಿನಾಚರಣೆಯಲ್ಲಿ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಬೇಸರ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 9:56 IST
Last Updated 11 ಜುಲೈ 2024, 9:56 IST
<div class="paragraphs"><p>ರಾಜ್ಯ ಮಟ್ಟದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮವನ್ನು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ಉದ್ಘಾಟಿಸಿದರು.</p></div>

ರಾಜ್ಯ ಮಟ್ಟದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮವನ್ನು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ಉದ್ಘಾಟಿಸಿದರು.

   

ದಾವಣಗೆರೆ: ಕುಟುಂಬ ಕಲ್ಯಾಣ ಕಾರ್ಯಕ್ರಮವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಜನಸಂಖ್ಯೆ ನಿಯಂತ್ರಿಸಿದ ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಆರ್ಥಿಕ ಹಾಗೂ ರಾಜಕೀಯವಾಗಿ ಅನ್ಯಾಯವಾಗುತ್ತಿದೆ. ಉತ್ತಮ ಕೆಲಸ ಮಾಡಿದವರಿಗೆ ಶಿಕ್ಷೆಯಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಬಿಐಟಿ ಎಂಜಿನಿಯರಿಂಗ್‌ ಕಾಲೇಜಿನ ಎಸ್.ಎಸ್.ಮಲ್ಲಿಕಾರ್ಜುನ ಸಾಂಸ್ಕೃತಿಕ ಭವನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಗುರುವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ವಿಶ್ವ ಜನಸಂಖ್ಯಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ADVERTISEMENT

‘ಜನಸಂಖ್ಯೆ ಬೆಳವಣಿಗೆ ನಿರ್ಧರಿಸುವ ಸಂತಾನೋತ್ಪತ್ತಿ ಫಲವತ್ತತೆ ಸರಾಸರಿ ದರ ದೇಶದಲ್ಲಿ 2.1ರಷ್ಟಿದೆ. ಕರ್ನಾಟಕದಲ್ಲಿ ಇದು 1.6ರಷ್ಟಿದ್ದು, ಜನಸಂಖ್ಯೆ ನಿಯಂತ್ರಣದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ. ಕೇರಳ, ತೆಲಂಗಾಣ ಸೇರಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಜನಸಂಖ್ಯೆ ನಿಯಂತ್ರಣದಲ್ಲಿದೆ. ಉತ್ತರಪ್ರದೇಶ, ಬಿಹಾರ ಸೇರಿ ಉತ್ತರಭಾರತದ ರಾಜ್ಯಗಳು ಜನಸಂಖ್ಯೆ ನಿಯಂತ್ರಿಸುವಲ್ಲಿ ವಿಫಲವಾಗಿವೆ. ಕೇಂದ್ರ ಸರ್ಕಾರದ ಅನುದಾನ ಜನಸಂಖ್ಯೆ ಆಧಾರದಲ್ಲಿ ಹಂಚಿಕೆಯಾಗುತ್ತಿದ್ದು, ಉತ್ತರ ಭಾರತಕ್ಕೆ ಸಿಂಹಪಾಲು ಸಿಗುತ್ತಿದೆ’ ಎಂದು ದೂರಿದರು.

‘ಲೋಕಸಭಾ ಕ್ಷೇತ್ರಗಳ ಪುನರ್‌ ವಿಂಗಡಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಜನಸಂಖ್ಯೆ ಆಧಾರದಲ್ಲಿ ಕ್ಷೇತ್ರ ಪುನರ್‌ ವಿಂಗಡಣೆ ನಡೆದರೆ ದಕ್ಷಿಣ ಭಾರತದ ರಾಜ್ಯಗಳಿಗೆ ರಾಜಕೀಯವಾಗಿಯೂ ಅನ್ಯಾಯವಾಗಲಿದೆ. ಕುಟುಂಬ ಕಲ್ಯಾಣ ಯೋಜನೆ, ಜನಸಂಖ್ಯಾ ನಿಯಂತ್ರಣವನ್ನು ಸಮರ್ಪಕವಾಗಿ ಜಾರಿಗೊಳಿಸಿದ್ದು ತಪ್ಪಾಯಿತೇ ಎಂಬ ಭಾವನೆ ಮೂಡುತ್ತಿದೆ’ ಎಂದು ಹೇಳಿದರು.

‘ಹೈಕೋರ್ಟ್‌ಗೆ ಶೀಘ್ರ ವರದಿ’

ಡೆಂಗಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಕುರಿತು ಹೈಕೋರ್ಟ್‌ ಕೇಳಿದ ಮಾಹಿತಿಯನ್ನು ಶೀಘ್ರದಲ್ಲೇ ಒದಗಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.

‘ಮಳೆಗಾಲದಲ್ಲಿ ಡೆಂಗಿ ಸಾಮಾನ್ಯವಾಗಿ ಹರಡುತ್ತದೆ. ಮಳೆಗಾಲ ಮುಗಿಯುವವರೆಗೂ ಇದರ ತೊಂದರೆ ತಪ್ಪಿದ್ದಲ್ಲ. ಡೆಂಗಿ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಸಮರೋಪಾದಿಯ ಕ್ರಮಗಳನ್ನು ಕೈಗೊಂಡಿದೆ. ಆರೋಗ್ಯ ತುರ್ತುಪರಿಸ್ಥಿತಿ ಘೋಷಣೆ ಮಾಡುವ ಅಗತ್ಯ ಕಂಡುಬಂದಿಲ್ಲ’ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌, ಸಂಸದೆ ಪ್ರಭಾ ಮಲ್ಲಿಕಾರ್ಜುನ್‌ ಇದ್ದರು.

ಡೆಂಗಿಗಿಂತ ಬಿಜೆಪಿ ಸೊಳ್ಳೆ ವೇಗವಾಗಿ ಹರಡುತ್ತಿದೆ. ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡುವ ಬದಲು ರೋಗ ನಿಯಂತ್ರಣಕ್ಕೆ ಕೈಜೋಡಿಸಿ. ಬಿಜೆಪಿ ಶಾಸಕರು, ಸಂಸದರ ಮೇಲೆಯೂ ಜವಾಬ್ದಾರಿ ಇದೆ.
ದಿನೇಶ್‌ ಗುಂಡೂರಾವ್‌, ಆರೋಗ್ಯ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.