ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವಜನರು ಸ್ವ-ಉದ್ಯೋಗ ನಡೆಸುವುದಕ್ಕೆ ನೆರವಾಗುವ ಉದ್ದೇಶದಿಂದ ಸಮಾಜ ಕಲ್ಯಾಣ ಇಲಾಖೆ ಆರಂಭಿಸಿರುವ ‘ಐರಾವತ’ ಯೋಜನೆಗೆ ಶನಿವಾರ ಚಾಲನೆ ನೀಡಲಾಯಿತು.
ಈ ಯೋಜನೆ ಅನುಷ್ಠಾನಕ್ಕಾಗಿ ಇಲಾಖೆಯು ಆ್ಯಪ್ ಆಧರಿತ ಟ್ಯಾಕ್ಸಿ ಸೇವೆ ಒದಗಿಸುತ್ತಿರುವ ಉಬರ್ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದೆ. ಟ್ಯಾಕ್ಸಿ ಖರೀದಿಗಾಗಿ ಇಲಾಖೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಯುವಕರಿಗೆ ₹ 5 ಲಕ್ಷ ಹಾಗೂ ಯುವತಿಯರಿಗೆ ₹ 6 ಲಕ್ಷ ಸಹಾಯಧನ ನೀಡಲಿದೆ.
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಯೋಜನೆಯಡಿ ಈ ಸಹಾಯಧನ ನೀಡಲಾಗುತ್ತಿದೆ. ಮೊದಲ ಹಂತವಾಗಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ ಹಾಗೂ ಮಂಗಳೂರಿನಲ್ಲಿ ಯೋಜನೆಯನ್ನು ಆರಂಭಿಸಲಾಗುತ್ತದೆ. ಕ್ರಮೇಣ ರಾಜ್ಯದಾದ್ಯಂತ ವಿಸ್ತರಿಸಲಾಗುತ್ತದೆ.
ಮುಂದಿನ ಹಂತದಲ್ಲಿ ಖರೀದಿ ಮಾಡುವ ಕ್ಯಾಬ್‌ಗಳಲ್ಲಿ (4500) ಪರಿಶಿಷ್ಟ ಜಾತಿಯ 3,500 ಯುವಜನರಿಗೆ ₹ 175 ಕೋಟಿ ಹಾಗೂ ಪರಿಶಿಷ್ಟ ಪಂಗಡದ 1 ಸಾವಿರ ಯುವಜನರಿಗೆ ₹ 50 ಕೋಟಿ ಅನುದಾನ ತೆಗೆದಿರಿಸಿದೆ.
ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ, ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವಜನರ ಆರ್ಥಿಕ ಸಬಲೀಕರಣಕ್ಕೆ ಈ ಯೋಜನೆ ಸಹಕಾರಿ ಎಂಬುದು ಮನದಟ್ಟಾದ ಬಳಿಕವೇ ಈ ಯೋಜನೆ ಜಾರಿಗೆ ತರುತ್ತಿದ್ದೇವೆ. ಇದು ಜನಸ್ನೇಹಿ ನೀತಿ ಆಗಲಿದೆ’ ಎಂದು ಹೇಳಿದರು.
ಉಬರ್ ಸಂಸ್ಥೆಯ ಅಧ್ಯಕ್ಷ ಪ್ರದೀಪ್ ಪರಮೇಶ್ವರನ್, ‘ಫಲಾನುಭವಿಗಳಿಗೆ ಉದ್ಯಮ ಕ್ಷೇತ್ರ ಪರಿಚಯಿಸಲು ಈ ಕಾರ್ಯಕ್ರಮ ಜಾರಿಗೆ ತರಲಾಗಿದೆ. ‘ಐರಾವತ’ ಕೌಶಲಪೂರ್ಣ ಉದ್ಯಮಶೀಲತೆಯನ್ನು ಉತ್ತೇಜಿಸಲಿದೆ’ ಎಂದು ತಿಳಿಸಿದರು.
ವೆಬ್‌ಸೈಟ್‌ನಲ್ಲಿ ಅ.15ರಿಂದ ಅರ್ಜಿ
ಈ ಯೋಜನೆಯಿಂದ ಸಹಾಯಧನ ಪಡೆಯಲು ಅರ್ಜಿ ನಮೂನೆಗಳು ಅಕ್ಟೋಬರ್ 15ರಿಂದ (www.kalyanakendra.com ಮತ್ತು www.adcl.karnataka.gov.in) ವೆಬ್‌ಸೈಟ್‌ನಲ್ಲಿ ಲಭ್ಯವಾಗಲಿದೆ. ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿಯನ್ನು ಪರಿಶೀಲಿಸಿ 20 ದಿನ ತರಬೇತಿ ನೀಡಲಾಗುತ್ತದೆ. ಗೂಗಲ್‌ನಕ್ಷೆಯನ್ನು ಸರಿಯಾಗಿ ಅನುಸರಿಸುವುದು, ಸಂಚಾರ ನಿಯಮಗಳ ಪಾಲನೆ, ಸುರಕ್ಷಿತೆ, ಚಾಲನೆ ಮಾಡುವ ರೀತಿ, ವ್ಯಕ್ತಿತ್ವ, ಗ್ರಾಹಕರೊಂದಿಗೆ ವರ್ತಿಸುವುದು ಹೇಗೆ ಎಂಬುದು ಸೇರಿದಂತೆ ಮುಖ್ಯವಾದ ಅಂಶಗಳ ಕುರಿತು ತಿಳಿಸಲಾಗುತ್ತದೆ. ತರಬೇತಿ ಬಳಿಕ ಅವರ ಕಾರ್ಯಕ್ಷಮತೆ ನೋಡಿಕೊಂಡು ಸಹಾಯಧನ ನೀಡಲಾಗುತ್ತದೆ.
ಅಂಕಿ ಅಂಶ
500
ಮೊದಲ ಹಂತದಲ್ಲಿ ಉಬರ್ ಕಂಪನಿ ನೀಡಲಿರುವ ಕ್ಯಾಬ್‌ಗಳು
₹ 25
ಕೋಟಿ ತಗಲುವ ವೆಚ್ಚ
4,500
ಮುಂದಿನ ಹಂತದಲ್ಲಿ ಖರೀದಿ ಮಾಡುವ ಟ್ಯಾಕ್ಸಿಗಳು
₹ 225 ಕೋಟಿ
ಟ್ಯಾಕ್ಸಿ ಖರೀದಿಗೆ ಮೀಸಲಿರಿಸಿದ ಅನುದಾನ
*ಉಬರ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಇತರ ಸಂಸ್ಥೆಗಳೊಂದಿಗೂ ಒಪ್ಪಂದ ಮಾಡಿಕೊಳ್ಳಲಿದ್ದೇವೆ
–ಪ್ರಿಯಾಂಕ್ ಖರ್ಗೆ, ಸಮಾಜ ಕಲ್ಯಾಣ ಇಲಾಖೆ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.