ಮೈಸೂರು: ಮುಡಾ ನಿವೇಶನಗಳ ಹಂಚಿಕೆ ಕುರಿತ ತನಿಖೆಗಾಗಿ ರಾಜ್ಯ ಸರ್ಕಾರವು ನೇಮಿಸಿರುವ ನಿವೃತ್ತ ನ್ಯಾಯಮೂರ್ತಿ ಪಿ.ಎಸ್. ದೇಸಾಯಿ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗವು ಇಲ್ಲಿನ ಮುಡಾ ಕಚೇರಿಯಲ್ಲಿ ಮಂಗಳವಾರ ವಿಚಾರಣೆ ನಡೆಸಿತು.
‘ಬೆಳಿಗ್ಗೆ 11.30ರ ಸುಮಾರಿಗೆ ಸಹಾಯಕರೊಂದಿಗೆ ಬಂದ ನ್ಯಾ. ಪಿ.ಎನ್. ದೇಸಾಯಿ, ಮೊದಲಿಗೆ ಮುಡಾದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಬಳಿಕ 50:50 ಅನುಪಾತದಲ್ಲಿ ಹಂಚಿಕೆಯಾದ ಎಲ್ಲ ನಿವೇಶನಗಳು ಹಾಗೂ ಫಲಾನುಭವಿಗಳ ಪಟ್ಟಿ ಹಾಗೂ ಅದಕ್ಕೆ ಸಂಬಂಧಿಸಿದ ದಾಖಲೆಗಳ ಕುರಿತು ರಾತ್ರಿವರೆಗೂ ವಿಚಾರಣೆ ನಡೆಸಿದರು. ನಿವೇಶನಗಳ ಹಂಚಿಕೆಯಲ್ಲಿ ಭಾಗಿಯಾಗಿದ್ದ ಸಿಬ್ಬಂದಿ ಯಿಂದ ವಿವರಣೆ ಪಡೆದರು’ ಎಂದು ಮೂಲಗಳು ತಿಳಿಸಿವೆ.
ಆಯೋಗದ ಭೇಟಿ ಕಾರಣಕ್ಕೆ ಮಂಗಳವಾರ ಮುಡಾಕ್ಕೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿತ್ತು. ಮುಡಾ ಕಾರ್ಯದರ್ಶಿ ಪ್ರಸನ್ನಕುಮಾರ್ ನೇತೃತ್ವದ ತಂಡವು ಅಗತ್ಯ ಮಾಹಿತಿ ಒದಗಿಸಿತು.
ನಿವೇಶನಗಳ ಹಂಚಿಕೆಯಲ್ಲಿ ಅಕ್ರಮದ ಆರೋಪ ಕೇಳಿಬಂದಿದ್ದರಿಂದ, ರಾಜ್ಯ ಸರ್ಕಾರವು ಜುಲೈ 14ರಂದು ವಿಚಾರಣಾ ಆಯೋಗವನ್ನು ನೇಮಿಸಿತ್ತು. ಅದಾದ ನಾಲ್ಕು ತಿಂಗಳ ಬಳಿಕ ಆಯೋಗವು ಮೊದಲ ಬಾರಿಗೆ ಮುಡಾ ಕಚೇರಿಯಲ್ಲಿ ವಿಚಾರಣೆ ನಡೆಸಿ ಮಾಹಿತಿ ಪಡೆದಿದೆ.
ಹರಿದಾಡಿದ 928 ನಿವೇಶನಗಳ ಪಟ್ಟಿ
ಮುಡಾದಲ್ಲಿ 50:50 ಅನುಪಾತದಲ್ಲಿ ಹಂಚಿಕೆಯಾದ ನಿವೇಶನಗಳ ಎರಡನೇ ಪಟ್ಟಿ ಸಾಮಾಜಿಕ ಮಾಧ್ಯಮ
ಗಳಲ್ಲಿ ಹರಿದಾಡಿದ್ದು, ಅದರಲ್ಲಿ ಒಟ್ಟು 928 ನಿವೇಶನಗಳ ಫಲಾನುಭವಿಗಳ ವಿವರಗಳಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ, ಸಿದ್ದರಾಮಯ್ಯ ಆಪ್ತ ಹಿನಕಲ್ ಪಾಪಣ್ಣ ಸೇರಿದಂತೆ ಹಲವರ ಹೆಸರುಗಳು ಪಟ್ಟಿಯಲ್ಲಿವೆ.
ಪಾರ್ವತಿ ಅವರಿಗೆ 14, ರಾಕೇಶ್ ಪಾಪಣ್ಣ ಅವರಿಗೆ 32, ಮಹದೇವ್ – 34, ಎಂ.ರವಿಕುಮಾರ್ – 23, ಮಹೇಂದ್ರ – 19, ದೀಪು ರಾಜೇಂದ್ರ – 14, ಅಬ್ದುಲ್ ವಾಹಿದ್ –14, ಸುನೀತಾ ಬಾಯಿ ಎಂಬವರಿಗೆ 12 ನಿವೇಶನ ನೀಡಲಾಗಿದೆ. ಅಂತೆಯೇ ಕ್ಯಾಥೆಡ್ರಲ್ ಪ್ಯಾರಿಸ್ ಸೊಸೈಟಿಗೆ 48 ಬದಲಿ ನಿವೇಶನ ನೀಡಿರುವ ಮಾಹಿತಿಯೂ ಪಟ್ಟಿಯಲ್ಲಿದೆ.
ಸ್ನೇಹಮಯಿ ಕೃಷ್ಣ ವಿರುದ್ಧ ದೂರು
‘ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವ ಸ್ನೇಹಮಯಿ ಕೃಷ್ಣ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಕೆಪಿಸಿಸಿ ರಾಜ್ಯ ವಕ್ತಾರ ಎಂ.ಲಕ್ಷ್ಮಣ ಮಂಗಳವಾರ ಇಲ್ಲಿನ ದೇವರಾಜ ಠಾಣೆಗೆ ದೂರು ನೀಡಿದರು.
‘ಬಿ.ಎಂ. ಪಾರ್ವತಿ ಅವರ ನಿವೇಶನ ನೋಂದಣಿಗೆ ಮುಡಾ ತಹಶೀಲ್ದಾರ್ ಅವರೇ ಮುದ್ರಾಂಕ ಶುಲ್ಕ ಕಟ್ಟಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ. ನಿವೇಶನದಾರರು ಉಪನೋಂದಣಾಧಿಕಾರಿ
ಕಚೇರಿಗೆ ಹಾಜರಾಗದೇ ವಿನಾಯಿತಿ ಪಡೆದ ಪ್ರಕರಣಗಳಲ್ಲಿ ಕಾವೇರಿ ತಂತ್ರಾಂಶದಲ್ಲಿ ಖರೀದಿದಾರರ ಬದಲಿಗೆ ಮುಡಾ ಅಧಿಕಾರಿಗಳ ಹೆಸರು ನಮೂದಾ ಗಿರುತ್ತದೆ. ಅದನ್ನು ಮರೆಮಾಚಿ, ಸಿದ್ದರಾಮಯ್ಯ ಅವರನ್ನು ಖಳನಾಯಕರನ್ನಾಗಿ ಬಿಂಬಿಸಲೆಂದೇ ಸುಳ್ಳು ಆರೋಪ ಮಾಡಿದ್ದಾರೆ’ ಎಂದು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.