ADVERTISEMENT

‘ಸಾಧ್ಯವಿದ್ದರೆ ಹಿಡಿಯಿರಿ’–ಸವಾಲೆಸೆದಿದ್ದ ಐಷಾರಾಮಿ ಕಾರುಗಳ ಚೋರ ಸೆರೆ

21 ಐಷಾರಾಮಿ ಕಾರು ಕಳವು ಪ್ರಕರಣ ಭೇದಿಸಿದ ಪೊಲೀಸರು * ₹4 ಕೋಟಿ ಮೌಲ್ಯದ ಸ್ವತ್ತು ಜಪ್ತಿ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2022, 10:47 IST
Last Updated 17 ಮಾರ್ಚ್ 2022, 10:47 IST
ಆರೋಪಿಯಿಂದ ಜಪ್ತಿ ಮಾಡಿರುವ ಕಾರುಗಳು 
ಆರೋಪಿಯಿಂದ ಜಪ್ತಿ ಮಾಡಿರುವ ಕಾರುಗಳು    

ಬೆಂಗಳೂರು: ‘ಸಾಧ್ಯವಿದ್ದರೆ ನನ್ನನ್ನು ಹಿಡಿಯಿರಿ’ (ಕ್ಯಾಚ್‌ ಮಿ ಇಫ್‌ ಯು ಕ್ಯಾನ್‌) ಎಂದು ತೆಲಂಗಾಣ ಪೊಲೀಸರಿಗೆ ಸವಾಲು ಹಾಕಿ ತಲೆಮರೆಸಿಕೊಂಡಿದ್ದ, ಐಷಾರಾಮಿ ಕಾರುಗಳನ್ನೇ ಕಳವು ಮಾಡುತ್ತಿದ್ದ ಅಂತರರಾಜ್ಯ ಕಳ್ಳನನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈತನಿಂದ ₹ 4 ಕೋಟಿ ಮೌಲ್ಯದ ಸ್ವತ್ತು ಜಪ್ತಿ ಮಾಡಲಾಗಿದೆ.

‘ರಾಜಸ್ಥಾನದ ಸತ್ಯೇಂದರ್‌ ಸಿಂಗ್‌ ಶೇಖಾವತ್ (41) ಬಂಧಿತ. ಈತನಿಂದ ಟೊಯೊಟಾ ಫಾರ್ಚೂನರ್‌, ಔಡಿ ಹಾಗೂ ಹೊಂಡಾ ಆ್ಯಕ್ಟೀವಾ ಸ್ಕೂಟರ್‌, 20 ಕೀಗಳು, ಸ್ವಯಂಚಾಲಿತವಾಗಿ ಕೀ ಕತ್ತರಿಸಲು ಬಳಸುವಸುಮಾರು ₹2 ಲಕ್ಷ ಮೌಲ್ಯದ ಎಕ್ಸ್‌ ಹಾರ್ಸ್‌ ಡಾಲ್ಫಿನ್‌ ಯಂತ್ರ, 1 ಚಾರ್ಜರ್‌ ಕೇಬಲ್‌, 1 ಏರ್‌ಟೆಲ್‌ ಡಾಂಗಲ್‌, 2 ಎಕ್ಸ್‌ 100 ಪ್ಯಾಡ್‌, 1 ಎಕ್ಸ್‌ ಟೂಲ್‌, 1 ವಿವಿಡಿಐ ಮಿನಿ ಕೀ ಟೂಲ್‌, 1 ಚರ್ಮದ ಕೈಚೀಲ, 13 ಸ್ಮಾರ್ಟ್‌ ಕೀ, 1 ಎಕ್ಸ್‌ ಟೂಲ್‌ ಅಡಾಪ್ಟರ್‌, 1 ಬಟ್ಟೆಯ ಬ್ಯಾಗ್‌ ಹಾಗೂ 6 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.

‘ಆರೋಪಿಯ ಬಂಧನದಿಂದ ಬೆಂಗಳೂರಿನ 14, ಹೈದರಾಬಾದ್‌ನ 5, ರಾಜಸ್ಥಾನ ಹಾಗೂ ಚೆನ್ನೈನ ತಲಾ 1 ಐಷಾರಾಮಿ ಕಾರು ಕಳವು ಹಾಗೂ 1 ಸ್ಕೂಟರ್‌ ಕಳವು ಪ್ರಕರಣ ಪತ್ತೆಯಾಗಿದೆ. ಕದ್ದ ಕಾರುಗಳಲ್ಲಿ ರಾಜಸ್ಥಾನಕ್ಕೆ ತೆರಳುತ್ತಿದ್ದ ಆರೋಪಿ ಅಲ್ಲಿ ಅವುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ. ಆತ ಮಾರಿದ್ದ ಕಾರುಗಳನ್ನು ರಾಜಸ್ಥಾನದ ವಿವಿಧ ಠಾಣೆಗಳ ಪೊಲೀಸರು ಈಗಾಗಲೇ ಜಪ್ತಿ ಮಾಡಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

‘ಬೆಂಗಳೂರಿನ ಉಪ್ಪಾರಪೇಟೆ (ಫಾರ್ಚೂನರ್‌), ಹನುಮಂತನಗರ (ಸ್ಕಾರ್ಪಿಯೊ), ಕಾಡುಗೊಂಡನಹಳ್ಳಿ (ಫಾರ್ಚೂನರ್‌), ಸುದ್ದಗುಂಟೆಪಾಳ್ಯ (ಇನ್ನೊವಾ ಕ್ರಿಸ್ಟಾ), ಕೊಡಿಗೆಹಳ್ಳಿ (ಸ್ಕಾರ್ಪಿಯೊ), ಯಲಹಂಕ (ಎಂಡೀವರ್‌), ಪರಪ್ಪನ ಅಗ್ರಹಾರ (ಔಡಿ), ಯಶವಂತಪುರ (ಫಾರ್ಚೂನರ್‌), ಜೆ.‍‍ಪಿ.ನಗರ (ಕ್ರೆಟಾ), ಅಮೃತಹಳ್ಳಿ (2 ಫಾರ್ಚೂನರ್‌), ಬಾಣಸವಾಡಿ (ಹೊಂಡಾ ಆ್ಯಕ್ಟೀವಾ), ಎಚ್‌ಎಸ್‌ಆರ್‌ ಲೇಔಟ್‌ (ಫಾರ್ಚೂನರ್‌) ಹಾಗೂ ಮಹದೇವಪುರ (ಡಸ್ಟರ್‌) ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈತ ಕಳವು ಮಾಡಿದ್ದ’ ಎಂದು ವಿವರಿಸಿದ್ದಾರೆ.

2003ರಿಂದಲೇ ಕಳವು ಆರಂಭಿಸಿದ್ದ

ಆರೋಪಿಯು 2003ರಿಂದಲೇ ಐಷಾರಾಮಿ ಕಾರುಗಳ ಕಳವು ಮಾಡಲು ಆರಂಭಿಸಿದ್ದ. ಈತನ ವಿರುದ್ಧ ನವದೆಹಲಿ, ಗುಜರಾತ್‌, ರಾಜಸ್ಥಾನ, ಮಹಾರಾಷ್ಟ್ರ, ದಿಯು–ದಾಮನ್‌, ತೆಲಂಗಾಣ, ತಮಿಳುನಾಡು ರಾಜ್ಯಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ಈ ಎಲ್ಲಾ ಪ್ರಕರಣಗಳಲ್ಲೂ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ.

ಪತ್ತೆ ಆಗಿದ್ದು ಹೇಗೆ

ಅಮೃತಹಳ್ಳಿ ಠಾಣೆ ವ್ಯಾಪ್ತಿಯ ಗೋದ್ರೇಜ್‌ ವಸತಿ ಸಮುಚ್ಚಯದ ವಾಹನ ನಿಲುಗಡೆ ಪ್ರದೇಶದಲ್ಲಿ 2021ರ ಅಕ್ಟೋಬರ್‌ 19ರಂದು ಅಭಿಷೇಕ್‌ ಎಂಬುವರು ಫಾರ್ಚೂನರ್‌ ಕಾರು ನಿಲ್ಲಿಸಿದ್ದರು. ಅದೇ ದಿನ ಕಾರು ಕಳವಾಗಿತ್ತು. ಈ ಬಗ್ಗೆ ದೂರು ದಾಖಲಾಗಿತ್ತು.

ತನಿಖೆ ಆರಂಭಿಸಿದ್ದ ಪೊಲೀಸರಿಗೆ ಆರೋಪಿಯು ವಿವಿಧ ರಾಜ್ಯಗಳಲ್ಲಿ ಐಷಾರಾಮಿ ಕಾರುಗಳನ್ನು ಕಳವು ಮಾಡಿರುವ ಮಾಹಿತಿ ಲಭಿಸಿತ್ತು. ಆತನ ಬಂಧನಕ್ಕಾಗಿ ಈಶಾನ್ಯ ವಿಭಾಗದ ಡಿಸಿಪಿ, ವಿಶೇಷ ತಂಡವೊಂದನ್ನು ರಚಿಸಿದ್ದರು.

ಆರೋಪಿಯು ಜೈಪುರದಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಕಲೆಹಾಕಿದ್ದ ತಂಡವು ಅಲ್ಲಿಗೆ ತೆರಳಿ ಈ ವರ್ಷದ ಫೆಬ್ರುವರಿ 10ರಂದು ಆತನನ್ನು ಬಂಧಿಸಿತ್ತು.

ವಿದೇಶದಿಂದ ವಿದ್ಯುನ್ಮಾನ ಉಪಕರಣಗಳನ್ನು ತರಿಸಿದ್ದ

ಆರೋಪಿಯು ಕಾರುಗಳನ್ನು ಕದಿಯುವುದಕ್ಕಾಗಿಯೇ ವಿದೇಶದಿಂದ ಹಲವು ಉಪಕರಣಗಳನ್ನು ತರಿಸಿಕೊಂಡಿದ್ದ. ಎಕ್ಸ್‌ 100 ಪ್ಯಾಡ್‌ ಬಳಸಿ ಕಾರಿನ ಸಂಪೂರ್ಣ ಮಾಹಿತಿ ಹಾಗೂ ದತ್ತಾಂಶಗಳನ್ನು ಕಲೆಹಾಕುತ್ತಿದ್ದ ಈತ ಅದರ ಆಧಾರದಲ್ಲೇ ನಕಲಿ ಕೀ ತಯಾರಿಸುತ್ತಿದ್ದ.‌

ಕಾರುಗಳ ಮೇಲೆ ನಿಗಾ ಇಡುತ್ತಿದ್ದ ಈತಮಾಲೀಕರು ಅದನ್ನು ನಿಲುಗಡೆ ಮಾಡಿ ಬೇರೆಡೆ ಹೋಗುವುದನ್ನೇ ಕಾಯುತ್ತಿದ್ದ. ಯಾರೂ ಇಲ್ಲದ ಹೊತ್ತಿನಲ್ಲಿ ನಿಲುಗಡೆ ಪ್ರದೇಶಕ್ಕೆ ಹೋಗಿ ಅದನ್ನು ಕಳವು ಮಾಡುತ್ತಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.