ADVERTISEMENT

ಜಲ ವಿವಾದ ಕಾಯ್ದೆಗೆ ತಿದ್ದುಪಡಿ ಅಗತ್ಯ: ಬೊಮ್ಮಾಯಿ

‘ಅಂತರ ರಾಜ್ಯ ಜಲ ವಿವಾದಗಳ ಸುಲಲಿತ ಪರಿಹಾರ ಸಾಧ್ಯ’

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2022, 14:47 IST
Last Updated 5 ಮಾರ್ಚ್ 2022, 14:47 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ಜನರ ಹಿತಾಸಕ್ತಿಯನ್ನೇ ಕೇಂದ್ರವಾಗಿಟ್ಟುಕೊಂಡು ಜಲ ವಿವಾದಗಳನ್ನು ಪರಿಹರಿಸುವುದಕ್ಕೆ ಪೂರಕವಾಗಿ ‘ಅಂತರ ರಾಜ್ಯ ಜಲ ವಿವಾದ ಕಾಯ್ದೆ’ಗೆ ತಿದ್ದುಪಡಿ ತರುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಪಾದಿಸಿದರು.

ಜಲ ಜೀವನ್‌ ಮಿಷನ್‌ ಮತ್ತು ಸ್ವಚ್ಛ ಭಾರತ್‌ ಮಿಷನ್‌ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶನಿವಾರ ನಡೆದ ದಕ್ಷಿಣ ಭಾರದ ರಾಜ್ಯಗಳ ಪ್ರಾದೇಶಿಕ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಜಲ ವಿವಾದಗಳ ಪರಿಹಾರದ ಸಂದರ್ಭದಲ್ಲಿ ಸಂಕುಚಿತ ರಾಜಕಾರಣಕ್ಕೆ ಅವಕಾಶ ಇರಬಾರದು. ನದಿ ಪಾತ್ರಗಳ ನಿರ್ವಹಣೆಯ ಮೂಲಕವೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಜನರಿಗೆ ಹೆಚ್ಚು ನೀರು ಲಭ್ಯವಾಗುವಂತೆ ಮಾಡುವುದೇ ಅಂತಿಮ ಗುರಿ ಆಗಿರಬೇಕು. ಈ ದಿಸೆಯಲ್ಲಿ ಕಾಯ್ದೆಗೆ ತಿದ್ದುಪಡಿ ತರಬೇಕು’ ಎಂದರು.

ADVERTISEMENT

ಜನರಿಗೆ ನೀರು ಒದಗಿಸುವುದು ಸರ್ಕಾರದ ಕರ್ತವ್ಯ. ಈ ವಿಚಾರದಲ್ಲಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಿದೆ. ನೀರಿನ ದುರ್ಬಳಕೆ ತಡೆಗೆ ಕಠಿಣವಾದ ಕ್ರಮಗಳನ್ನು ಕೈಗೊಳ್ಳಬೇಕು. ಕಾಲುವೆಗಳಲ್ಲಿ ಹರಿಸುವ ನೀರು ಮತ್ತು ಅಂತಿಮವಾಗಿ ತಲುಪುವ ನೀರಿನ ಪ್ರಮಾಣದ ನಡುವೆ ಭಾರಿ ವ್ಯತ್ಯಾಸವಿದೆ. ಅದನ್ನು ತಗ್ಗಿಸಲು ಕಾಲುವೆಗಳ ಗುಣಮಟ್ಟ ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.

ಗುರಿ ಮುಟ್ಟುವ ವಿಶ್ವಾಸ: ರಾಜ್ಯದಲ್ಲಿ 97.91 ಲಕ್ಷ ಮನೆಗಳಿವೆ. ಅವುಗಳಲ್ಲಿ 46.2 ಲಕ್ಷ ಮನೆಗಳಿಗೆ ಜಲ ಜೀವನ್‌ ಮಿಷನ್‌ ಯೋಜನೆ ಅಡಿಯಲ್ಲಿ ನಲ್ಲಿಯ ಮೂಲಕ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಬಾಕಿ ಇರುವ 50 ಲಕ್ಷ ಮನೆಗಳಿಗೆ ನಿಗದಿತ ಗಡುವಿನೊಳಗೆ ನಲ್ಲಿಯ ಮೂಲಕ ನೀರಿನ ಸಂಪರ್ಕ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು

‘ಜಲ ಜೀವನ್‌ ಮಿಷನ್‌ ಯೋಜನೆ ಅನುಷ್ಠಾನದಲ್ಲಿ ಕೆಲವು ತೊಡಕುಗಳಿದ್ದವು. ಅವುಗಳನ್ನು ಪರಿಹರಿಸಲಾಗಿದೆ. ಈ ಯೋಜನೆಯನ್ನು ಖುದ್ದಾಗಿ ಅನುಷ್ಠಾನಕ್ಕೆ ತರಬೇಕು ಎಂಬುದು ಸರ್ಕಾರದ ಗುರಿ. ಈ ಕಾರಣದಿಂದ ನಾನು ಖುದ್ದಾಗಿ ಯೋಜನೆಯ ಅನುಷ್ಠಾನದ ಪ್ರಗತಿಯ ಕುರಿತು ಮೇಲ್ವಿಚಾರಣೆ ನಡೆಸುತ್ತಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.