ADVERTISEMENT

ಕೊಪ್ಪಳ: ಬರದ ನಾಡಿನ ಮೇಲೆ ಪೇಜಾವರ ಶ್ರೀಗಳ ವಿಶೇಷ ಪ್ರೀತಿ

ಸಿದ್ದನಗೌಡ ಪಾಟೀಲ
Published 29 ಡಿಸೆಂಬರ್ 2019, 10:10 IST
Last Updated 29 ಡಿಸೆಂಬರ್ 2019, 10:10 IST
ಕೊಪ್ಪಳ ಜಿಲ್ಲೆಯ ನವ ವೃಂದಾವನ ಗಡ್ಡೆಗೆ ಭೇಟಿ ನೀಡಿದ ಪೇಜಾವರ ವಿಶ್ವೇಶ ತೀರ್ಥ ಶ್ರೀಗಳನ್ನು ಉತ್ತರಾದಿ ಮಠದ ಸತ್ಯಾತ್ಮತೀರ್ಥ ಸ್ವಾಮೀಜಿ ಹಾಗೂ ಮಂತ್ರಾಲಯದ ಮಠದ ಸುಭುದೇಂದ್ರ ತೀರ್ಥ ಸ್ವಾಮೀಜಿ ಕೈಹಿಡಿದು ಕರೆದುಕೊಂಡು ಬಂದ ಐತಿಹಾಸಿಕ ಕ್ಷಣ
ಕೊಪ್ಪಳ ಜಿಲ್ಲೆಯ ನವ ವೃಂದಾವನ ಗಡ್ಡೆಗೆ ಭೇಟಿ ನೀಡಿದ ಪೇಜಾವರ ವಿಶ್ವೇಶ ತೀರ್ಥ ಶ್ರೀಗಳನ್ನು ಉತ್ತರಾದಿ ಮಠದ ಸತ್ಯಾತ್ಮತೀರ್ಥ ಸ್ವಾಮೀಜಿ ಹಾಗೂ ಮಂತ್ರಾಲಯದ ಮಠದ ಸುಭುದೇಂದ್ರ ತೀರ್ಥ ಸ್ವಾಮೀಜಿ ಕೈಹಿಡಿದು ಕರೆದುಕೊಂಡು ಬಂದ ಐತಿಹಾಸಿಕ ಕ್ಷಣ    

ಕೊಪ್ಪಳ:ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ತಮ್ಮದೇ ವಿಶೇಷ ಗುಣದಿಂದ ರಾಷ್ಟ್ರ ಸಂತ ಎಂದು ಕರೆಸಿಕೊಂಡಿದ್ದು ಸಾಮಾನ್ಯ ಸಂಗತಿಯಲ್ಲ. ಈಚೆಗೆ ಗಂಗಾವತಿ ತಾಲ್ಲೂಕಿನವ್ಯಾಸರಾಜರ ವೃಂದಾವನ ಧ್ವಂಸವಾದಾಗ ಅದರಮರು ನಿರ್ಮಾಣ ಕಾರ್ಯದವರೆಗೂ ಅಲ್ಲಿದ್ದುಕೊಂಡುಮಾರ್ಗದರ್ಶನ ನೀಡಿದ್ದರು.

ಧರ್ಮನಿಷ್ಠೆಯ ಜೊತೆಗೆ ಸಂಪ್ರದಾಯದ ಮೌಢ್ಯವನ್ನುವಿರೋಧಿಸಿದ ಅವರಲ್ಲಿಪ್ರಗತಿ ಪರ ಮನಸ್ಸು ಇತ್ತು ಎಂಬುವುದಕ್ಕೆ ಅನೇಕ ಸಾಕ್ಷಿಗಳು ದೊರೆಯುತ್ತವೆ. ಜಿಲ್ಲೆಯ ಅನೇಕ ಹಿಂದುಳಿದ ವರ್ಗದ ಭಕ್ತರನ್ನು ಸಂಪಾದಿಸಿದ್ದ ಶ್ರೀಗಳು ಅವರನ್ನುಭೇಟಿ ಮಾಡಿ ಯೋಗ-ಕ್ಷೇಮ ವಿಚಾರಿಸುತ್ತಿದ್ದರು. ಅಗತ್ಯ ಬಿದ್ದಾಗ ಸಹಾಯ ಮಾಡುವಲ್ಲಿ ಕೂಡಾ ಅವರು ಹಿಂದೆ ಬಿದ್ದಿದ್ದಿಲ್ಲ. ನೆರೆ ಪರಿಹಾರ, ಬರ, ಸಂತ್ರಸ್ತರಿಗೆ ಸಹಾಯ ನೀಡಿದ್ದನ್ನೂ ಜಿಲ್ಲೆಯ ಜನ ಇಂದಿಗೂ ನೆನಪಿಸಿಕೊಳ್ಳುತ್ತಾರೆ.

ಪೇಜಾವರರ ಸಮ್ಮುಖ ಒಂದಾದ ಶ್ರೀಗಳು

ಈಚೆಗೆ ಆನೆಗೊಂದಿ ಸಮೀಪ ನಿಧಿಗಳ್ಳರು ವ್ಯಾಸರಾಜರ ವೃಂದಾವನವನ್ನು ಧ್ವಂಸಗೊಳಿಸಿದ್ದಾಗ ಶ್ರೀಗಳು ನೇರವಾಗಿ ಆನೆಗೊಂದಿಗೆ ಬಂದು ದೋಣಿ ಮೂಲಕ ನಡುಗಡ್ಡೆ ತಲುಪಿದ್ದರು. ಆ ಸಮಯದಲ್ಲಿ ಅಷ್ಟಮಠಗಳು ಮತ್ತು ಮಾಧ್ವ ಯತಿ ಪರಂಪರೆಯ ಎಲ್ಲ ಸ್ವಾಮೀಜಿಗಳು ಶ್ರೀಗಳ ಜೊತೆಗಿದ್ದರು.

ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠ ಮತ್ತು ಮಳಖೇಡದ ಉತ್ತರಾದಿಮಠಗಳ ಮಧ್ಯೆವೃಂದಾವನಗಳ ಪೂಜೆ ಸಂಬಂಧ ಶತಮಾನಗಳಿಂದ ಜಗಳವಿದೆ. ಇದು ಎರಡು ಮಠಗಳ ಭಕ್ತರ ನಡುವಿನ ಜಗಳಕ್ಕೂ ಕಾರಣವಾಗಿ, ಮನಸ್ಸುಗಳು ದೂರವಾಗಿದ್ದವು. ಈ ವಿವಾದ ಸುಪ್ರೀಂಕೋರ್ಟ್‌ನಲ್ಲಿ ಇದೆ. ಪ್ರತಿವರ್ಷ ನ್ಯಾಯಾಲಯದ ಅನುಮತಿ ಮೇರೆಗೆ ಪೂಜೆ ಸಲ್ಲಿಸಲಾಗುತ್ತಿದೆ. ಉಭಯ ಮಠದ ಶ್ರೀಗಳು ಮುಖಾಮುಖಿಯಾಗದೇ ಶತಮಾನಗಳೇ ಕಳೆದಿದ್ದವು. ನವ ವೃಂದಾವನಕ್ಕೆ ಪೇಜಾವರ ಶ್ರೀಗಳ ಯೋಗಕ್ಷೇಮ ವಿಚಾರಿಸಲು ಇಬ್ಬರೂ ಶ್ರೀಗಳು ಬಂದಿದ್ದರು. ಇದು ಲಕ್ಷಾಂತರ ಭಕ್ತರಿಗೆ ಹರ್ಷ ಉಂಟು ಮಾಡಿತ್ತು. ಪುನರ್ ನಿರ್ಮಾಣ ಕಾರ್ಯ ಮುಗಿದ ನಂತರ ವಿಶ್ವೇಶ ತೀರ್ಥ ಸ್ವಾಮೀಜಿ ಅವರ ಕೈಹಿಡಿದು ಇಬ್ಬರು ಶ್ರೀಗಳು ಪೂಜೆಗೆ ಬಂದಿದ್ದು, ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿತ್ತು.

ಕೊಪ್ಪಳದಲ್ಲಿ ಎರಡು ದಿನದಿಂದ ನಡೆಯುತ್ತಿರುವಶಾರದಾ ಉತ್ಸವಕ್ಕೆ ಬಂದಿರುವ ಗಣ್ಯರು ಭಾನುವಾರ ಪೇಜಾವರ ಶ್ರೀಗಳ ಬಗ್ಗೆ ಆಡಿದ ಮಾತುಗಳು:

ಮುಖದಲ್ಲಿ ದೈವ ಕಳೆ, ಮನದಲ್ಲಿ ದೇಶಪ್ರೇಮ, ವಿಶ್ವ ಸಂಚಾರಿ ವಿಶ್ವೇಶ ತೀರ್ಥರು ನಾಡಿನ ಅದಮ್ಯ ಆಧ್ಯಾತ್ಮ ಚೇತನ. ಉಡುಪಿ ಶ್ರೀಗಳು ದೇಹದಿಂದ ದೂರಾದರೂ. ಲಕ್ಷ ಲಕ್ಷ ಭಕ್ತರ ಹೃದಯಗಳಿಂದ ದೂರವಾಗಿಲ್ಲ.

ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ, ಗವಿಮಠ, ಕೊಪ್ಪಳ

***
ಪೇಜಾವರ ಸ್ವಾಮೀಜಿಯವರದ್ದು ಪರಿಪೂರ್ಣ ಜೀವನ. ಆದರೆ ಅವರ ಕನಸು ಮಾತ್ರ ಈಡೇರಲಿಲ್ಲ. ಬರುವ ದಿನಗಳಲ್ಲಿ ಆ ಕನಸು ಸಹ ಈಡೇರಲಿದೆ. ಉಡುಪಿಯಂತಹ ಸಾಂಸ್ಕೃತಿಕ ಕ್ಷೇತ್ರದಲ್ಲಿದ್ದುಕೊಂಡು ನಾಡಿನಲ್ಲಿ ಸಾಮರಸ್ಯ ತರುವ ಕೆಲಸ ಮಾಡಿದ್ದಾರೆ. ಅವರು ಬಯಸಿದ್ದ ಸರ್ಕಾರಗಳು ಅಧಿಕಾರಕ್ಕೆ ಬಂದಿವೆ. ಯಾವ ರೀತಿ ಅಭಿವೃದ್ಧಿ ಅಗಬೇಕು ಎಂದುಕೊಂಡಿದ್ದರೋ ಅಂತಹ ಕಾರ್ಯ ಈಡೇರಲಿವೆ.

ಸ್ವಾಮೀಜಿ ಧರ್ಮ ಮತ್ತು ರಾಜಕಾರಣವನ್ನು ಅತ್ಯಂತ ಹತ್ತಿರಕ್ಕೆ ತಂದ ಶ್ರೇಷ್ಠ ಸಂತ. ಅವರನ್ನು ಕಳೆದುಕೊಂಡು ನಾಡು ಬಡವಾಗಿದೆ. ಆ ಹಿರಿಯ ಸಂತನ ಆತ್ಮಕ್ಕೆ ಭಗವಂತ ಸದ್ಗತಿ ನೀಡಲಿ. ಅಷ್ಟ ಮಠಗಳ ಬಗ್ಗೆಯೂ ನನಗೆ ಅಪಾರ ಪ್ರೀತಿ ಇದೆ. ಅದರಲ್ಲೂ ಪೇಜಾವರ ಸ್ವಾಮೀಜಿ ಮಠದ ಬಗ್ಗೆ ಹೆಚ್ಚು ಶ್ರದ್ಧೆ ಇದೆ. ಉಡುಪಿಯಲ್ಲಿ ನನ್ನ ನೇತ್ರತ್ವದಲ್ಲಿ ಎಸ್‌ಪಿಬಿ ಮತ್ತು ಯೇಸುದಾಸ್ ಅವರನ್ನೊಳಗೊಂಡ ಸಂಗೀತ ಕಾರ್ಯಕ್ರಮದ ಜವಾಬ್ದಾರಿಯನ್ನು ಸ್ವಾಮೀಜಿ ನನಗೆ ‌ನೀಡಿದ್ದರು. ಅಂದಿನಿಂದ ಇಲ್ಲಿವರೆಗೂ ಹೆಚ್ಚು ಒಡನಾಟ ಇದೆ. ಅವರೊಬ್ಬ ಸಂಪೂರ್ಣ ಜೀವನ ನಡೆಸಿದ ಶ್ರೇಷ್ಠ ಸಂತ. ಅವರು ಇಹಲೋಕ ತ್ಯಜಿಸಿದ್ದು ನೋವು ತರಿಸಿದೆ. ಆತ್ಮಕ್ಕೆ ಶಾಂತಿ ದೊರಕಲಿ ಎಂದು ಬೇಡುವೆ.

ಖ್ಯಾತ ಸಂಗೀತಗಾರ ಹಂಸಲೇಖ

***

ಉಡುಪಿಗೆ ಹೋದವರು ಕೃಷ್ಣನ ದರ್ಶನ ಪಡೆದ ನಂತರ ಪೇಜಾವರ ಶ್ರೀಗಳ ದರ್ಶನಕ್ಕೆ ಕಾತರದಿಂದ ಕಾಯುತ್ತಿದ್ದರು. ಹಿಂದೂ-ಮುಸ್ಲಿಂ ಮಧ್ಯೆ ಭಾವೈಕ್ಯ ಮೂಡಿಸಿದ ಸಂತ. ಇಂದಿರಾ ಗಾಂಧಿ ಅವರ ತುರ್ತು ಪರಿಸ್ಥಿತಿಯನ್ನು ಖಂಡಿಸಿ ನೇರವಾಗಿ ಹೇಳಿಕೆ ನೀಡಿದ್ದು ಅವರೊಬ್ಬರೆ. ಅಂತಹ ಶ್ರೀಗಳನ್ನು ಕಳೆದುಕೊಂಡ ರಾಷ್ಟ್ರ ಬಡವಾಗಿದೆ.

ಆರೋಗ್ಯ ಸಚಿವ ಶ್ರೀರಾಮುಲು

***
ನಾಲ್ಕು ದಶಕದ ಹಿಂದೆ ಉಡುಪಿಯಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯಕಾರಣಿ ನಡೆದಾಗ ದಿಟ್ಟವಾಗಿ ನಾವು ಅಶ್ಪಶೃತೆಯನ್ನು ತೊಡೆದುಹಾಕದಿದ್ದರೆ ಐತಿಹಾಸಿಕ ಅಪಚಾರವಾಗುತ್ತದೆ. ದಲಿತರನ್ನು ಸಮಾನವಾಗಿ ಕಾಣಬೇಕು ಎಂಬ ನಿರ್ಣಯ ಮಂಡಿಸಿ ಅದರಲ್ಲಿ ಯಶಸ್ವಿಯಾದರು. ಅಲ್ಲದೆ ದಲಿತರ ಕೇರಿಗೆ ಪ್ರವೇಶ, ದೇವಸ್ಥಾನಕ್ಕೆ ಪ್ರವೇಶ, ಮಂತ್ರಾಕ್ಷತೆ ಸೇರಿದಂತೆ ಎಲ್ಲ ಧರ್ಮದ ಜನರಿಗೂ ಸಮಾನ ಅವಕಾಶ ನೀಡಿದ ಪ್ರಯೋಗಶೀಲ ಯೋಗಿ.

ಬಿಜೆಪಿ ಹಿರಿಯ ಮುಖಂಡಬಸವರಾಜ ಪಾಟೀಲ ಸೇಡಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.