ADVERTISEMENT

ಒಳಮೀಸಲು: ಮತ್ತೆ ಆಯೋಗ

ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವ * ಮೂರು ತಿಂಗಳಲ್ಲಿ ವರದಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2024, 1:16 IST
Last Updated 29 ಅಕ್ಟೋಬರ್ 2024, 1:16 IST
<div class="paragraphs"><p>ಸಭೆ</p></div>

ಸಭೆ

   

ಬೆಂಗಳೂರು: ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿ ಮಾಡುವ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಆಯೋಗ ರಚಿಸಲು ಸರ್ಕಾರ ತೀರ್ಮಾನಿಸಿದೆ.

ಒಳ ಮೀಸಲಾತಿ ಅನುಷ್ಠಾನಗೊಳಿಸುವ ಬಗ್ಗೆ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಿತು.

ADVERTISEMENT

ಬಳಿಕ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ, ವರದಿ ನೀಡಲು ಆಯೋಗಕ್ಕೆ ಮೂರು ತಿಂಗಳು ಅವಕಾಶ ನೀಡಲಾಗಿದೆ. ವರದಿಯ ಶಿಫಾರಸುಗಳನ್ನು ಸರ್ಕಾರ ಜಾರಿ ಮಾಡಲಿದೆ ಎಂದು ವಿವರಿಸಿದರು.

ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಮಾತನಾಡಿ, ಒಳ ಮೀಸಲಾತಿ ಪ್ರಮಾಣ ನಿರ್ಧರಿಸಲು ಸಮುದಾಯಗಳ ಜನಸಂಖ್ಯೆಯ ಪರಿಶೀಲನಾರ್ಹ ದತ್ತಾಂಶ ಎಲ್ಲಿಂದ ಪಡೆಯಬೇಕು ಮತ್ತು ಆದಿ ಕರ್ನಾಟಕ, ಆದಿ ದ್ರಾವಿಡ ಹೆಸರಿನ ಗೊಂದಲಗಳನ್ನು ಬಗೆಹರಿಸುವ ವಿಚಾರವನ್ನು ಆಯೋಗಕ್ಕೆ ನಿಗದಿಪಡಿಸುವ ಷರತ್ತುಗಳು ಮತ್ತು ನಿಯಮಗಳಲ್ಲಿಯೇ ನಮೂದಿಸಲಾಗುವುದು ಎಂದು ಹೇಳಿದರು.

‘ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು 2022ರಲ್ಲಿ ಬಿಜೆಪಿ ಸರ್ಕಾರವೇ ತಿರಸ್ಕರಿಸಿತ್ತು. ನಮ್ಮ ಸರ್ಕಾರವೇ ಹಿಂದೆ ನಡೆಸಿದ್ದ ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ ಇನ್ನೂ ಅಂಗೀಕರಿಸಿಲ್ಲ. ಈ ಸಮೀಕ್ಷಾ ವರದಿಯಲ್ಲಿರುವ ವಿವಿಧ ಜಾತಿಗಳ ಜನಸಂಖ್ಯೆಯ ದತ್ತಾಂಶ ಗೊತ್ತಾಗಿಲ್ಲ. ಹೀಗಾಗಿ ದತ್ತಾಂಶವನ್ನು ಎಲ್ಲಿಂದ ಪಡೆಯಬೇಕು ಎನ್ನುವ ವಿಚಾರವನ್ನು ಆಯೋಗಕ್ಕೆ ಬಿಡುತ್ತೇವೆ’ ಎಂದು ಅವರು ವಿವರಿಸಿದರು.

‘ಪರಿಶಿಷ್ಟ ಜಾತಿಯ ಎಡ, ಬಲ, ಬೋವಿ, ಲಂಬಾಣಿ ಸಮುದಾಯವರು ಒಳಮೀಸಲಾತಿ ಜಾರಿ ಬಗ್ಗೆ ಒಮ್ಮತ ಹೊಂದಿದ್ದಾರೆ. ಈ ಬಗ್ಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಈಗಾಗಲೇ ಹಲವು ಸಭೆ, ಸಮಾರಂಭಗಳಲ್ಲಿ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಒಳಮೀಸಲಾತಿಗಾಗಿ 30 ವರ್ಷಗಳಿಂದ ನಡೆದುಕೊಂಡು ಬಂದಿದ್ದ ಹೋರಾಟಕ್ಕೆ ಫಲ ಇಂದು ಸಿಕ್ಕಿದೆ. ವಿಧಾನಸಭಾ ಚುನಾವಣೆ ವೇಳೆಯಲ್ಲಿ ಒಳಮೀಸಲಾತಿ ಜಾರಿ ಮಾಡುವ ಬಗ್ಗೆ ಆಶ್ವಾಸನೆ ನೀಡಿದ್ದೆವು. ಅದನ್ನು ಈಗ ಸಾಕಾರಗೊಳಿಸಲು ಹೊರಟಿದ್ದೇವೆ. ಇದು ಐತಿಹಾಸಿಕ ಹೆಜ್ಜೆ’ ಎಂದು ಎಂದು ಅವರು ವ್ಯಾಖ್ಯಾನಿಸಿದರು.

ಇವತ್ತಿನ ಸಂಪುಟ ಸಭೆಯಲ್ಲಿ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವಿಷಯ ಪ್ರಸ್ತಾಪವಾಗಲಿಲ್ಲ ಎಂದು ಎಚ್‌.ಕೆ.ಪಾಟೀಲ ಹೇಳಿದರು.

ಸಚಿವರಾದ ಕೆ.ಎಚ್‌.ಮುನಿಯಪ್ಪ, ಆರ್‌.ಬಿ.ತಿಮ್ಮಾಪುರ, ಶಿವರಾಜ ತಂಗಡಗಿ, ಕಾಂಗ್ರೆಸ್‌ ನಾಯಕ ಎಲ್‌.ಹನುಮಂತಯ್ಯ, ಮಾಜಿ ಸಚಿವ ಎಚ್‌.ಆಂಜನೇಯ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಆಯೋಗ ರಚನೆ ತೀರ್ಮಾನ ಕುಂಟು ನೆಪವಲ್ಲ ಕಾಲ ಹರಣ ಮಾಡುವ ಮತ್ತು ಒಳ ಮೀಸಲಾತಿ ಅನುಷ್ಠಾನವನ್ನು ಮುಂದಕ್ಕೆ ಹಾಕುವ ತಂತ್ರವೂ ಅಲ್ಲ
ಡಾ.ಎಚ್‌.ಸಿ.ಮಹದೇವಪ್ಪ ಸಮಾಜಕಲ್ಯಾಣ ಸಚಿವರು
ಎಡ– ಬಲ ನಾವು ಅಣ್ಣ– ತಮ್ಮಂದಿರಂತೆ ಒಟ್ಟಿಗೆ ಇದ್ದೇವೆ. ಮೂರು ತಿಂಗಳಲ್ಲಿ ಪರಿಹಾರ ಸಿಗುತ್ತದೆ. ಎಲ್ಲರೂ ಸರ್ಕಾರದ ಜತೆ ಗಟ್ಟಿಯಾಗಿ ನಿಲ್ಲಬೇಕು
ಕೆ.ಎಚ್‌.ಮುನಿಯಪ್ಪ ಆಹಾರ ಸಚಿವ

ವರದಿ ಸಲ್ಲಿಕೆವರೆಗೆ ನೇಮಕಾತಿ ಬಂದ್

‘ಇವತ್ತಿನಿಂದ ವರದಿ ಸಲ್ಲಿಕೆ ಆಗುವವರೆಗೆ ಸರ್ಕಾರ ಯಾವುದೇ ಹೊಸ ನೇಮಕಾತಿ ಮಾಡುವುದಿಲ್ಲ. ಅಧಿಸೂಚನೆಗಳನ್ನೂ ಹೊರಡಿಸುವುದಿಲ್ಲ. ಈಗಾಗಲೇ ನೇಮಕಾತಿ ಪ್ರಕ್ರಿಯೆ ಜಾರಿಯಲ್ಲಿ ಇದ್ದರೆ ಮುಂದುವರೆಯಲಿದೆ’ ಎಂದು ಸಚಿವ ಎಚ್‌.ಕೆ. ಪಾಟೀಲ ತಿಳಿಸಿದರು. ‘ಹೊಸ ನೇಮಕಾತಿಗಳು ಏನೇ ಇದ್ದರೂ ವರದಿ ಸಲ್ಲಿಕೆ ಆದ ಬಳಿಕವೇ ಕೈಗೆತ್ತಿಕೊಳ್ಳಲಾಗುವುದು’ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.