ಗದಗ/ದಾವಣಗೆರೆ/ಕೊಪ್ಪಳ: ಒಳ ಮೀಸಲಾತಿ ವಿರೋಧಿಸಿ ಬಂಜಾರ, ಲಂಬಾಣಿ ವಡ್ಡರ, ಕೊರಚ, ಕೊರಮ ಸೇರಿದಂತೆ ಪರಿಶಿಷ್ಟ ಜಾತಿಯ ವಿವಿಧ ಸಮಾಜದವರು ರಾಜ್ಯದ ವಿವಿಧೆಡೆ ಗುರುವಾರವೂ ಪ್ರತಿಭಟಿಸಿದರು.
ಗದಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ಈ ಸಮುದಾಯಗಳ ಜನರು, ‘ಸಮುದಾಯಕ್ಕೆ ಅನ್ಯಾಯವಾಗುತ್ತಿದ್ದರೂ ಶಾಸಕರು, ಸಂಸದರು ಚಕಾರ ಎತ್ತುತ್ತಿಲ್ಲ. ಇಂತಹ ಶಾಸಕರು ಸಮುದಾಯದ ಪಾಲಿಗೆ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿ, ಅವರೆಲ್ಲರಿಗೆ ಎಳ್ಳುನೀರು ಬಿಟ್ಟು, ತಲೆ ಬೋಳಿಸಿಕೊಂಡು ಶ್ರದ್ಧಾಂಜಲಿ ಅರ್ಪಿಸಿ ಪಿಂಡಪ್ರದಾನ ಮಾಡಿದರು.
ಕಿತ್ತೂರು ರಾಣಿ ಚೆನ್ನಮ್ಮನ ಪುತ್ಥಳಿ ಎದುರು ಜಮಾಯಿಸಿದ್ದ ಪ್ರತಿಭಟನಕಾರರು ಸರ್ಕಾರ ದಲಿತರನ್ನು ಒಡೆದು ಆಳುತ್ತಿದೆ ಎಂದು ಟೀಕಿಸಿದರು. ಒಳ ಮೀಸಲಾತಿ ಹಿಂಪಡೆಯದಿದ್ದರೆ ಎಲ್ಲ ತಾಂಡಾ, ಹಾಡಿ, ಹಟ್ಟಿಗಳಲ್ಲಿ ಚುನಾವಣೆ ಬಹಿಷ್ಕಾರ ಮಾಡುತ್ತೇವೆ ಎಂದು ಶಪಥ ಮಾಡಿದರು. ಬಳಿಕ ಜಿಲ್ಲಾಧಿಕಾರಿ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಚುನಾವಣಾ ಬಹಿಷ್ಕಾರ ಎಚ್ಚರಿಕೆ (ಕನಕಗಿರಿ, ಕೊಪ್ಪಳ ಜಿಲ್ಲೆ):
ಒಳಮೀಸಲಾತಿ ಕುರಿತು ಸರ್ಕಾರದ ನಿರ್ಣಯವನ್ನು ವಿರೋಧಿಸಿ ಕನಕಗಿರಿ ತಾಲ್ಲೂಕಿನ ಅಡವಿಬಾವಿ ಚಿಕ್ಕತಾಂಡಾದ ಲಂಬಾಣಿಗರು ಚುನಾವಣಾ ಬಹಿಷ್ಕಾರ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಗ್ರಾಮದಲ್ಲಿ ಬ್ಯಾನರ್‌ಗಳನ್ನು ಹಾಕಲಾಗಿದೆ. ಒಂದು ಬ್ಯಾನರ್‌ನಲ್ಲಿ ‘ಬಿಜೆಪಿಯ ಎಲ್ಲಾ ನಾಯಕರ ಹಾಗೂ ಮುಖಂಡರ ಪ್ರವೇಶವನ್ನು ಗ್ರಾಮಕ್ಕೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ’ ಎಂದು ಬರೆದಿದ್ದರೆ, ಮತ್ತೊಂದು ಬ್ಯಾನರ್‌ನಲ್ಲಿ,‘ನಮ್ಮ ತಾಂಡಾಕ್ಕೆ ಎಲ್ಲಾ ಪಕ್ಷಗಳ ಮುಖಂಡರ ಪ್ರವೇಶ ನಿಷೇಧಿಸಲಾಗಿದೆ’ ಎಂದು ಬರೆಯಲಾಗಿದೆ.
‘ಬಂಜಾರರು ಶೈಕ್ಷಣಿಕ, ಸಾಮಾಜಿಕ, ರಾಜಕೀಯ, ಆರ್ಥಿಕವಾಗಿ ಹಿಂದುಳಿದಿದ್ದಾರೆ. ಸದಾಶಿವ ಆಯೋಗದ ಶಿಫಾರಸು ಒಪ್ಪಿದರೆ, ಸಮುದಾಯಕ್ಕೆ ಅನ್ಯಾಯವಾಗಲಿದೆ’ ಎಂದು ಶಿವಪ್ಪ ಚವ್ಹಾಣ ಹೇಳಿದರು.
‘ಒಳ ಮೀಸಲಾತಿ ಮೂಲಕ ಬಿಜೆಪಿ ಸರ್ಕಾರ ಜಾತಿಗಳ ನಡುವೆ ಜಗಳ ಹಚ್ಚುವ ಕೆಲಸ ಮಾಡಲಾಗುತ್ತಿದೆ. ಬಂಜಾರ ಸಮುದಾಯದ ಬಿಜೆಪಿ ಶಾಸಕರು ಹಾಗೂ ಸಚಿವರು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡು ಸಮಾಜದವರಿಗೆ ದ್ರೋಹ ಎಸಗಿದ್ದಾರೆ. ಸಚಿವ ಪ್ರಭು ಚವ್ಹಾಣ, ಸಂಸದ ಉಮೇಶ ಜಾಧವ ಹಾಗೂ ಶಾಸಕ ಪಿ. ರಾಜೀವ ಅವರಿಗೆ ಸಮಾಜದ ಬಗ್ಗೆ ನಿಜವಾದ ಕಾಳಜಿಯಿದ್ದರೆ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕಿತ್ತು’ ಎಂದರು.
ದಾವಣಗೆರೆಯಲ್ಲೂ ಪ್ರತಿಭಟನೆ: ಒಳ ಮೀಸಲಾತಿ ಕುರಿತು ಸರ್ಕಾರದ ನಿರ್ಧಾರವನ್ನು ವಿರೋಧಿಸಿ ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ತಾಲ್ಲೂಕು ಬಂಜಾರ, ಭೋವಿ, ಕೊರಚ, ಕೊರಮ ಮೀಸಲಾತಿ ಸಂರಕ್ಷಣಾ ಒಕ್ಕೂಟ ಪ್ರತಿಭಟನೆ ನಡೆಸಿತು.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಅಯ್ಯನಹಳ್ಳಿ ತಾಂಡಾದ ನಿವಾಸಿಗಳು ಒಳ ಮೀಸಲಾತಿ ವರ್ಗೀಕರಣ ವಿರೋಧಿಸಿ ಹಾಗೂ ತಾಂಡಾವನ್ನು ಕಂದಾಯ ಗ್ರಾಮವನ್ನಾಗಿ ಘೋಷಿಸದಿರುವುದನ್ನು ಖಂಡಿಸಿ ಪ್ರತಿಭಟಿಸಿದರು. ಮತದಾನ ಬಹಿಷ್ಕರಿಸುವುದಾಗಿ ಅವರು ಎಚ್ಚರಿಸಿದರು.
ಶಿವಮೊಗ್ಗ ಸಮೀಪದ ಮಲವಗೊಪ್ಪದಲ್ಲಿ ಬಂಜಾರ ಸಮಾಜದವರು ಬಿ.ಎಚ್. ರಸ್ತೆಯಲ್ಲಿ ಟೈರ್ ಸುಟ್ಟು
ಪ್ರತಿಭಟಿಸಿದರು.
ಮುಸ್ಲಿಮರ ಆಕ್ರೋಶ
ಹೂವಿನಹಡಗಲಿ (ವಿಜಯನಗರ ಜಿಲ್ಲೆ): ಅಲ್ಪಸಂಖ್ಯಾತರ ‘2ಬಿ’ ಮೀಸಲಾತಿ ರದ್ದುಗೊಳಿಸಿರುವುದನ್ನು ವಿರೋಧಿಸಿ ಮುಸ್ಲಿಂ ಸಮುದಾಯವರು ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಶಾಸ್ತ್ರಿ ವೃತ್ತದಿಂದ ತಾಲ್ಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿ, ಮೀಸಲಾತಿ ರದ್ದುಪಡಿಸಿದ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮೀಸಲಾತಿ ಯಥಾವತ್ತಾಗಿ ಮುಂದುವರಿಸಲು ಒತ್ತಾಯಿಸಿ ತಹಶೀಲ್ದಾರ್ ಕೆ.ಶರಣಮ್ಮ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಹಿರಿಯ ಮುಖಂಡ ಸಿ.ಚಾಂದಸಾಹೇಬ್ ಮಾತನಾಡಿ, ‘ಮೀಸಲಾತಿ ನಮ್ಮ ಸಾಂವಿಧಾನಿಕ ಹಕ್ಕು. ಹೋರಾಟ ತೀವ್ರ ಸ್ವರೂಪ ಪಡೆಯುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಲಿ’ ಎಂದು ಆಗ್ರಹಿಸಿದರು.
ಒಳಮೀಸಲಾತಿಗೆ ವಿರೋಧ
ಬೆಂಗಳೂರು: ಪರಿಶಿಷ್ಟ ಜಾತಿಯಲ್ಲಿರುವ ಸಮುದಾಯಗಳನ್ನು ಸ್ಪೃಶ್ಯರು–ಅಸ್ಪೃಶ್ಯರು ಎಂಬ ಶಬ್ದಗಳಿಂದ ಕರೆಯುವ ಮೂಲಕ ಸರ್ಕಾರವೇ ಅಧಿಕೃತವಾಗಿ ಅಸ್ಪೃಶ್ಯತೆ ಆಚರಣೆಗೆ ಕರೆ ನೀಡಿದೆ ಎಂದು ಅಖಿಲ ಭಾರತ ಬಂಜಾರ ಸೇವಾ ಸಂಘ ಆರೋಪಿಸಿದೆ.
‘ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಿ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿಯನ್ನು ಸರ್ಕಾರ ಹಂಚಿಕೆ ಮಾಡಿದೆ. ಆದರೆ, ಪರಿಶಿಷ್ಟ ಜಾತಿಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿ ಅಂಶಗಳನ್ನು ವಸ್ತುನಿಷ್ಠವಾಗಿ
ಅಧ್ಯಯನ ಮಾಡದೇ ಮೀಸಲಾತಿ ಪ್ರಮಾಣದ ಹಂಚಿಕೆ ಮಾಡಿದೆ’ ಎಂದು ಸಂಘದ ರಾಷ್ಟ್ರೀಯ ಅಧ್ಯಕ್ಷ ಬಾಬುರಾವ್ ಚವ್ಹಾಣ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.