ADVERTISEMENT

Scouts and Guides jamboree | ಹಾಡು–ಕುಣಿತ: ಭಾರತದ ಜನಪದ ಮಿಡಿತ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2022, 22:00 IST
Last Updated 24 ಡಿಸೆಂಬರ್ 2022, 22:00 IST
ಮೂಡುಬಿದಿರೆಯಲ್ಲಿ ನಡೆಯುತ್ತಿರುವ ಭಾರತ್ ಸ್ಕೌಟ್ಸ್‌ ಮತ್ತು ಗೈಡ್ಸ್‌ ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಲ್ಲಿ ಹಿಮಾಚಲ ಪ್ರದೇಶ ತಂಡದ ವಿದ್ಯಾರ್ಥಿಗಳು ಲುಡೀ ನೃತ್ಯ ಪ್ರದರ್ಶಿಸಿದರು – ಪ್ರಜಾವಾಣಿ ಚಿತ್ರ
ಮೂಡುಬಿದಿರೆಯಲ್ಲಿ ನಡೆಯುತ್ತಿರುವ ಭಾರತ್ ಸ್ಕೌಟ್ಸ್‌ ಮತ್ತು ಗೈಡ್ಸ್‌ ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಲ್ಲಿ ಹಿಮಾಚಲ ಪ್ರದೇಶ ತಂಡದ ವಿದ್ಯಾರ್ಥಿಗಳು ಲುಡೀ ನೃತ್ಯ ಪ್ರದರ್ಶಿಸಿದರು – ಪ್ರಜಾವಾಣಿ ಚಿತ್ರ   

ಮೂಡುಬಿದಿರೆ (ದಕ್ಷಿಣ ಕನ್ನಡ): ಮಹಾರಾಷ್ಟ್ರದ ಕೋಲೀ ನೃತ್ಯ, ಹರಿಯಾಣದ ‘ಹರಿಯಾಣವಿ’ ನೃತ್ಯ, ಗೋವಾದ ಮುಸೋಲ್‌ ಕುಣಿತ, ಹಿಮಾಚಲ ಪ್ರದೇಶದ ಲುಡೀ ನೃತ್ಯ, ಕರ್ನಾಟಕದ ಬೇಡರ ನೃತ್ಯ... ದೇಶದ ಬೇರೆ ಬೇರೆ ರಾಜ್ಯಗಳ ಜನಪದ ಕುಣಿತಗಳನ್ನು ಒಂದೇ ವೇದಿಕೆಯಲ್ಲಿ ಕಣ್ತುಂಬಿಕೊಳ್ಳುವ ಅವಕಾಶ ವಿದ್ಯಾರ್ಥಿ ಗಳ ಪಾಲಿಗೆ ಶನಿವಾರ ಇಲ್ಲಿ ಒದಗಿ ಬಂತು.

ಇಲ್ಲಿನ ಆಳ್ವಾಸ್‌ ವಿದ್ಯಾಸಂಸ್ಥೆಗಳ ಪ್ರಾಂಗಣದಲ್ಲಿ ನಡೆಯುತ್ತಿರುವ ‘ಭಾರತ್‌ ಸ್ಕೌಟ್ಸ್ ಮತ್ತು ಗೈಡ್ಸ್‌ ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ 2022’ರಲ್ಲಿ ನಡೆದ ಜಾನಪದ ನೃತ್ಯಗಳ ಪ್ರದರ್ಶನ ದೇಶದ ವಿವಿಧ ರಾಜ್ಯಗಳ ಜನಪದ ಸೊಬಗನ್ನು ಪ್ರೇಕ್ಷಕರಿಗೆ ಉಣಬಡಿಸಿತು.

ಹಿಮಾಚಲ ಪ್ರದೇಶದ ವಿದ್ಯಾರ್ಥಿಗಳು ಪ್ರದರ್ಶಿಸಿದ ಲುಡೀ ನೃತ್ಯವಂತೂ ಜನಪದ ಲಾಲಿತ್ಯಕ್ಕೆ ಕನ್ನಡಿ ಹಿಡಿಯಿತು. ತೀರಾ ನಿಧಾನವೂ ಅಲ್ಲ, ಅತ್ತ ವೇಗವೂ ಅಲ್ಲದ ಈ ಲಯಬದ್ಧ ಕುಣಿತ ಮನಸೂರೆಗೊಂಡಿತು. ಉದ್ದನೆಯ ಲಂಗ ಧರಿಸಿದ್ದ ವಿದ್ಯಾರ್ಥಿನಿಯರು ಕೈಯಲ್ಲಿ ಬಿಳಿಯ ವಸ್ತ್ರ ಹಿಡಿದು, ಅರ್ಧವೃತ್ತಾಕಾರದಲ್ಲಿ ಬಿಡುಬೀಸಾಗಿ ಹೆಜ್ಜೆ ಹಾಕುತ್ತಾ ವಯ್ಯಾರದಿಂದ ಕುಣಿಯುವುದನ್ನು ಕಂಡು ಪ್ರೇಕ್ಷಕರು ಮೂಕವಿಸ್ಮಿತರಾದರು.

ADVERTISEMENT

ಹರಿಯಾಣ ರಾಜ್ಯದ ವಿದ್ಯಾರ್ಥಿನಿಯರು ಹಳದಿ ಹಾಗೂ ಕೆಂಬಣ್ಣದ ಸಾಂಪ್ರದಾಯಿಕ ಉಡುಗೆ ಧರಿಸಿ ಲೀಲಾಜಾಲವಾಗಿ ಪ್ರದರ್ಶಿಸಿದ ಹರಿಯಾಣವಿ ಜನಪದ ನೃತ್ಯದ ಲಯ ಮಾಧುರ್ಯಮನಸೂರೆಗೊಂಡಿತು.

ಮಹಾರಾಷ್ಟ್ರದ ತಂಡವು ‘ಕೋಲೀ’ ಕುಣಿತವನ್ನು ಪ್ರದರ್ಶಿಸಿತು. ಮೀನುಗಾರ ಸಮುದಾಯದವರು ಪ್ರದರ್ಶಿಸುವ ಈ ನೃತ್ಯ ಸಮುದ್ರದ ಅಲೆಗಳ ನಡುವೆ ದೋಣಿಯಲ್ಲಿ ಹುಟ್ಟು ಹಾಕುತ್ತಾ ಸಾಗಿ ಬಲೆ ಬೀಸಿ ಮೀನು ಹಿಡಿಯುವ ಮೀನುಗಾರರ ಸಂಭ್ರಮವನ್ನು ಕಟ್ಟಿಕೊಟ್ಟಿತು.

ಗೋವಾ ವಿದ್ಯಾರ್ಥಿಗಳ ತಂಡವು ‘ಮುಸೊಲ್‌ ಖೇಲ್‌’ ಕುಣಿತವನ್ನು ಪ್ರದರ್ಶಿಸಿತು. ವಿಜಯೋತ್ಸವದ ನೆನಪಿನಾರ್ಥ ಕೈಯಲ್ಲಿ ಒನಕೆಹಿಡಿದು ಪ್ರದರ್ಶಿಸುವ ಈ ಕುಣಿತಕ್ಕೆ ನೂರಾರು ವರ್ಷದ ಇತಿಹಾಸವಿದೆ. ಹಿಂದೂರಾಜರ ಗೆಲುವನ್ನು ಸಂಭ್ರಮಿಸುವ ಈ ಕುಣಿತದ ಪರಂಪರೆ ಯನ್ನು ಈಗಲೂ ಕ್ರೈಸ್ತ ಸಮುದಾಯದವರು ಕಾಪಾಡಿಕೊಂಡು ಬಂದಿದ್ದಾರೆ.

60 ತಂಡಗಳು ನೃತ್ಯ ಪ್ರದರ್ಶನಕ್ಕೆ ಹೆಸರು ನೋಂದಾಯಿಸಿದ್ದವು. ಕೆಲವು ತಂಡಗಳು ಜನಪದದ ಬದಲು ಸಿನಿಮಾ ಹಾಡುಗಳಿಗೆ ನೃತ್ಯ ಪ್ರದರ್ಶಿಸಿದವು. ಅಂತಹವುಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ ಎಂದು ಆಯೋಜಕರು ಪ್ರಕಟಿಸಿದರು. ಉತ್ತರ ಪ್ರದೇಶ, ಮಧ್ಯ
ಪ್ರದೇಶ, ಕೇರಳ, ರಾಜಸ್ಥಾನದ ತಂಡಗಳೂ ನೃತ್ಯ ಪ್ರದರ್ಶಿಸಿದವು. ಕರ್ನಾಟಕದ ಬೇರೆ ಬೇರೆ ಜಿಲ್ಲೆಯ ತಂಡಗಳು ಜನಪದ ನೃತ್ಯವನ್ನು ಪ್ರದರ್ಶಿಸಿದವು. ಬೇಡರ ನೃತ್ಯ ಗಮನ ಸೆಳೆಯಿತು.

ಪೂರ್ವ ತಯಾರಿಯ ಸಡಗರ

ವೇದಿಕೆಯಲ್ಲಿ ನೃತ್ಯ ಪ್ರದರ್ಶಿಸುವ ಸಡಗರ ಒಂದೆಡೆಯಾದರೆ, ಅದಕ್ಕೆ ಸಜ್ಜುಗೊಳ್ಳುವ ವಿದ್ಯಾರ್ಥಿಗಳ ಸಂಭ್ರಮ ಹೊಸತೊಂದು ಲೋಕವನ್ನೇ ಸೃಷ್ಟಿಸಿತ್ತು. ನೃತ್ಯಕ್ಕೆ ಪೂರಕವಾಗಿ ಉಡುಗೆ–ತೊಡುಗೆ ಧರಿಸುವುದು, ಅದಕ್ಕೆ ಬೇಕಾದ ಪರಿಕರಗಳನ್ನು ಅಣಿಗೊಳಿ
ಸುವುದರಲ್ಲಿ ವಿದ್ಯಾರ್ಥಿಗಳ ಜೊತೆಗೆ ಶಿಕ್ಷಕರೂ ಮಗ್ನರಾಗಿದ್ದರು.

ಪ್ರತಿ ತಂಡಕ್ಕೂ 10 ನಿಮಿಷ ಕಾಲಾವಕಾಶವನ್ನು ಮಾತ್ರ ನೀಡಲಾಗಿತ್ತು. ಆದರೆ, ಅಷ್ಟರೊಳಗೆ ನೃತ್ಯವನ್ನು ಪೂರ್ತಿಯಾಗಿ ಪ್ರದರ್ಶಿಸಲು ಸಾಧ್ಯವಾಗದೇ ಕೆಲವು ತಂಡಗಳ ಸದಸ್ಯರು ನಿರಾಸೆ ಅನುಭವಿಸಿದರು. ವಾರಗಟ್ಟಲೆ ತಾಲೀಮು ನಡೆಸಿಯೂ ಪೂರ್ತಿ ನೃತ್ಯ ಪ್ರದರ್ಶಿಸಲು ಅವಕಾಶ ಸಿಗಲಿಲ್ಲ ಎಂದು ಕೆಲ ವಿದ್ಯಾರ್ಥಿಗಳು ಬಿಕ್ಕಿ ಬಿಕ್ಕಿ ಅಳುತ್ತಿದ್ದುದೂ ಕಂಡುಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.