ADVERTISEMENT

International Friendship Day: ‘ಗೆಳೆತನವನ್ನು ಗೆಲ್ಲಿಸಿದ ಕೋವಿಡ್‌ ಪರೀಕ್ಷೆ’

ಮನೆಗೆ ಬಂದು ಗಂಟಲ ದ್ರವ ಸಂಗ್ರಹಿಸಿ ನೆರವಾದ ಸ್ನೇಹಿತ

​ಪ್ರಜಾವಾಣಿ ವಾರ್ತೆ
Published 31 ಜುಲೈ 2021, 20:15 IST
Last Updated 31 ಜುಲೈ 2021, 20:15 IST
ಹರೀಶ್ ಹಾಗಲವಾಡಿ
ಹರೀಶ್ ಹಾಗಲವಾಡಿ   

ಬೆಂಗಳೂರು: ‘ಜ್ವರದ ತೀವ್ರತೆಗೆ ಮನೆಯಿಂದ ಹೊರಗಡೆ ಹೋಗುವ ಪರಿಸ್ಥಿಯಲ್ಲಿ ಇರಲಿಲ್ಲ. ಇಂತಹ ಸಂದರ್ಭದಲ್ಲಿ ಪತ್ನಿಗೆ ಕೂಡ ಜ್ವರ ಬಂದಾಗ ದಿಕ್ಕು ತೋಚಲಿಲ್ಲ. ಆ ವೇಳೆ ಮನೆಗೆ ಬಂದ ಸ್ನೇಹಿತ, ಕೋವಿಡ್ ಪರೀಕ್ಷೆಗೆ ಗಂಟಲ ದ್ರವ ಸಂಗ್ರಹಿಸಿ, ಧೈರ್ಯ ತುಂಬಿದ. ಇದರಿಂದಾಗಿ ನಮ್ಮ ಸ್ನೇಹ ಇನ್ನಷ್ಟು ಗಟ್ಟಿಗೊಳ್ಳುವ ಜೊತೆಗೆ ಕೋವಿಡ್ ಜಯಿಸಲು ಸಾಧ್ಯವಾಯಿತು.’

ಇದು ಹನುಮಂತನಗರದ ಹರೀಶ್ ಹಾಗಲಾವಾಡಿ ಅವರ ಮನದಾಳದ ಮಾತುಗಳು. ವಿಜಯನಗರ ಟೋಲ್‌ ಗೇಟ್‌ ಬಳಿ ಇರುವ ಎಎಸ್‌ಸಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ಕಳೆದ ಏಪ್ರಿಲ್‌ನಲ್ಲಿ ಕೋವಿಡ್ ಪೀಡಿತರಾಗಿದ್ದರು. ಪತ್ನಿಗೆ ಕೂಡ ಕೊರೊನಾ ಸೋಂಕು ತಗುಲಿತ್ತು. ಮನೆಯಲ್ಲಿ ಬೇರೆ ಸದಸ್ಯರು ಇರದ ಕಾರಣ ಅವರು ಆತಂಕಕ್ಕೆ ಒಳಗಾಗಿದ್ದರು. ಈ ವೇಳೆ ಅವರಿಗೆ ಸ್ನೇಹಿತರಾದ ಮೈಲಾರಿ ಮತ್ತು ಪ್ರಶಾಂತ್ ನೆರವಾಗಿದ್ದರು. ಇವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶುಶ್ರೂಷಾಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದಾರೆ.

‘ಜ್ವರ, ತಲೆನೋವು ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಂಡ ಕೂಡಲೇ ನಾನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ, ಕೋವಿಡ್ ಪರೀಕ್ಷೆಗೆ ಗಂಟಲ ದ್ರವದ ಮಾದರಿ ನೀಡಿದೆ. ಎರಡು ದಿನಗಳ ಬಳಿಕ ಜ್ವರ ಹೆಚ್ಚಾಯಿತು. ಪತ್ನಿಗೆ ಕೂಡ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಆ ವೇಳೆ ಆಸ್ಪತ್ರೆಗೆ ಹೋಗುವ ಅಥವಾ ಕರೆದೊಯ್ಯುವ ಸ್ಥಿತಿಯಲ್ಲಿ ನಾನು ಇರಲಿಲ್ಲ. ಈ ವಿಷಯವನ್ನು ಸ್ನೇಹಿತರಿಗೆ ತಿಳಿಸಿದೆ. ಬಿಡುವಿಲ್ಲದ ಕೆಲಸದ ನಡುವೆಯೂ ಅವರು ಮನೆಗೆ ಬಂದು, ಕೋವಿಡ್‌ ಪರೀಕ್ಷೆಗೆ ಪತ್ನಿಯ ಗಂಟಲ ದ್ರವವನ್ನು ಸಂಗ್ರಹಿಸಿದರು’ ಎಂದು ಹರೀಶ್ ತಿಳಿಸಿದರು.

ADVERTISEMENT

‘ಮೂರು ದಿನಗಳ ಬಳಿಕ ಪರೀಕ್ಷಾ ವರದಿಯಲ್ಲಿ ನಾನು ಕೋವಿಡ್ ಪೀಡಿತರಾಗಿರುವುದು ದೃಢಪಟ್ಟಿತು. ಪತ್ನಿಗೆ ಕೂಡ ಸೋಂಕು ತಗಲಿರುವುದು ಖಚಿತವಾಯಿತು. ಆ ವೇಳೆ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಮಸ್ಯೆ ಗಂಭೀರ ಸ್ವರೂಪ ಪಡೆದಿತ್ತು. ಏನು ಮಾಡಬೇಕೆಂದು ತೋಚದೆ ಕಂಗಾಲಾಗಿದ್ದೆ. ಆ ದಿನಗಳಲ್ಲಿ ಸ್ನೇಹಿತರ ಮಾರ್ಗದರ್ಶನವೇ ಕೋವಿಡ್ ಎದುರಿಸಲು ನೆರವಾಯಿತು’ ಎಂದು ವಿವರಿಸಿದರು.

‘ಯಾವ ರೀತಿಯಲ್ಲಿ ಆರೈಕೆ ಮಾಡಿಕೊಳ್ಳಬೇಕು? ಆಹಾರ ವಿಧಾನ ಹೇಗಿರಬೇಕು? ರೋಗನಿರೋಧಕ ಶಕ್ತಿ ವೃದ್ಧಿಗೆ ಯಾವೆಲ್ಲ ಆಹಾರವನ್ನು ಸೇವಿಸಬೇಕು ಎಂಬ ಮಾರ್ಗದರ್ಶನ ಅವರಿಂದಲೇ ದೊರೆಯಿತು. ಪ್ರತಿನಿತ್ಯ ದೂರವಾಣಿ ಕರೆ ಮಾಡಿ, ಆರೋಗ್ಯ ವಿಚಾರಿಸುತ್ತಿದ್ದರು. ಅವರ ಮಾತುಗಳು ನಮಗೆ ಆತ್ಮವಿಶ್ವಾಸ ಹೆಚ್ಚಿಸುತ್ತಿದ್ದವು. ಇದರಿಂದ ಚೇಗ ಚೇತರಿಸಿಕೊಳ್ಳಲು ಸಾಧ್ಯವಾಯಿತು. ದೀರ್ಘಕಾಲಿನ ನಮ್ಮ ಸ್ನೇಹ ಇನ್ನಷ್ಟು ಗಟ್ಟಿಯಾಯಿತು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.