ನವದೆಹಲಿ: ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಹಿನ್ನೆಲೆಯಲ್ಲಿ ಶ್ರಮಜೀವಿಗಳಿಗೆ ನಾಡಿನ ಗಣ್ಯರು ಕಾರ್ಮಿಕ ದಿನದ ಶುಭಾಶಯಗಳನ್ನು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ಕಾಯಕವೇ ಕೈಲಾಸವೆಂದು ನಂಬಿ ರಾಷ್ಟ್ರನಿರ್ಮಾಣದಲ್ಲಿ ಅವಿರತ ಸೇವೆ ಸಲ್ಲಿಸುತ್ತಿರುವ ಎಲ್ಲ ಕಾರ್ಮಿಕರಿಗೆ ಕಾರ್ಮಿಕ ದಿನದ ಶುಭಾಶಯಗಳು ಎಂದು ಹೇಳಿದ್ದಾರೆ.
ದೇಶವನ್ನು ಸದೃಢವಾಗಿಸುವಲ್ಲಿ ಕಾರ್ಮಿಕರ ಕೊಡುಗೆ ಅಪಾರವಾಗಿದೆ. ಕಾರ್ಮಿಕರ ಕಾರ್ಯತತ್ಪರತೆಯನ್ನು ಗುರುತಿಸಿ ಶ್ಲಾಘಿಸೋಣ. ಎಲ್ಲ ಕಾರ್ಮಿಕರಿಗೂ ವಿಶ್ವ ಕಾರ್ಮಿಕರ ದಿನಾಚರಣೆ ಶುಭಾಶಯಗಳು ಎಂದು ಬಿಜೆಪಿ ಮುಖಂಡ ಹಾಗೂ ವಿರೋಧ ಪಕ್ಷದ ನಾಯಕ ಆರ್.ಅಶೋಕ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ದೇಶದ ಅಭ್ಯುದಯಕ್ಕೆ ಮಹೋನ್ನತ ಕೊಡುಗೆ ನೀಡುತ್ತಿರುವ ಸಮಸ್ತ ಕಾರ್ಮಿಕ ಬಂಧುಗಳಿಗೆ ಮೇ 1ರ ಕಾರ್ಮಿಕರ ದಿನದ ಹಾರ್ದಿಕ ಶುಭಾಶಯಗಳು. ಶ್ರಮಶಕ್ತಿ ಇಲ್ಲದೆ ಮುನ್ನಡೆ ಇಲ್ಲ. ಹೀಗಾಗಿ ಎಲ್ಲಾ ಕಾರ್ಮಿಕರನ್ನು ಗೌರವಿಸೋಣ, ಅವರ ಹಿತಕ್ಕಾಗಿ ಶ್ರಮಿಸೋಣ ಎಂದು ಜೆಡಿಎಸ್ ನಾಯಕ ಕುಮಾರಸ್ವಾಮಿ ಶುಭಾಶಯ ಹೇಳಿದ್ದಾರೆ.
ದುಡಿಮೆಯ ನಂಬಿ ಬದುಕು ಅದರಲೆ ದೇವರ ಹುಡುಕು! ಕೃಷಿಕ, ಶ್ರಮಿಕ, ಸೈನಿಕ, ಶಿಕ್ಷಕ ಸಮಾಜದ ಆಧಾರ ಸ್ತಂಭಗಳು. ದೇಶದ ಬೆಳವಣಿಗೆಗಾಗಿ ಹಗಲಿರುಳು ದುಡಿಯುತ್ತಿರುವ ಕಾರ್ಮಿಕ ವರ್ಗದ ಸೇವೆಯನ್ನು ಎಷ್ಟು ಬಣ್ಣಿಸಿದರೂ ಸಾಲದು. ಅಂತಾರಾಷ್ಟ್ರೀಯ ಕಾರ್ಮಿಕರ ದಿನದಂದು ಆ ದುಡಿಯುವ ಕೈಗಳಿಗೆ ನನ್ನ ನಮನಗಳು ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸುಭಾಶಯ ಕೋರಿದ್ದಾರೆ.
'ಕಾಯಕವೇ ಕೈಲಾಸ' ತತ್ವವನ್ನು ಅಕ್ಷರಶಃ ಅನುಷ್ಠಾನಕ್ಕೆ ತಂದು ದುಡಿಯುವ ನಾಡಿನ ಸಮಸ್ತ ಕಾರ್ಮಿಕರ ಬಂಧುಗಳಿಗೆ 'ಅಂತಾರಾಷ್ಟ್ರೀಯ ಕಾರ್ಮಿಕರ ದಿನ'ದ ಹಾರ್ದಿಕ ಶುಭಾಶಯಗಳು. ದೇಶದ ಆರ್ಥಿಕ ಪ್ರಗತಿಯ ಪಾಲುದಾರರಾದ ಕಾರ್ಮಿಕರ ಕಠಿಣ ಪರಿಶ್ರಮ, ಸಮರ್ಪಣಾ ಭಾವ ಮತ್ತು ಇಚ್ಛಾಶಕ್ತಿಯನ್ನು ನಾವೆಲ್ಲರೂ ಗೌರವಿಸೋಣ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಸಾಮಾಜಿಕ ಮಾಧ್ಯಮಗಳ ಮೂಲಕ ಶುಭ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.