ಮೈಸೂರು: ಬೋಧಕರ ಹುದ್ದೆಗಳಿಗೆ ಸೆಪ್ಟೆಂಬರ್ 18ರಂದು ಸಂದರ್ಶನ ಪ್ರಕ್ರಿಯೆಯನ್ನು ನಿಗದಿ ಮಾಡಿದ್ದ ಇಲ್ಲಿನ ಕರ್ನಾಟಕ ರಾಜ್ಯ ಮುಕ್ತವಿಶ್ವವಿದ್ಯಾಲಯವು ಹಿಂದಿನ ದಿನವಾದ ಮಂಗಳವಾರ ದಿಢೀರನೆ ಮುಂದೂಡಿ ಸುತ್ತೋಲೆ ಹೊರಡಿಸಿದೆ. ‘371 (ಜೆ)ಗೆ ಮೀಸಲಿರಿಸಿದ,ಶಿಕ್ಷಣಶಾಸ್ತ್ರ, ಭೌತವಿಜ್ಞಾನ ಮತ್ತು ಗಣಿತ ವಿಷಯಗಳ ಸಹಪ್ರಾಧ್ಯಾಪಕರಹುದ್ದೆ ಭರ್ತಿಗಾಗಿ ಮುಕ್ತ ವಿಶ್ವವಿದ್ಯಾಲಯ ಕಾನೂನುಬಾಹಿರವಾಗಿ ಸಂದರ್ಶನ ನಡೆಸುತ್ತಿದ್ದು, ಕೂಡಲೇ ತಡೆಹಿಡಿಯಬೇಕು’ ಎಂದು ವಿಶ್ವವಿದ್ಯಾಲಯದ ಕಾಯಂ ಅಧ್ಯಾಪಕರ ಸಂಘದ ಕಾರ್ಯದರ್ಶಿ ಎಚ್.ಕೆ. ಜಗದೀಶ್ ಬಾಬು ಮಂಗಳವಾರಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿದ್ದರು. ಮಧ್ಯಾಹ್ನ ವಿಶ್ವವಿದ್ಯಾಲಯವು ಸಂದರ್ಶನ ಪ್ರಕ್ರಿಯೆ ಮುಂದೂಡಿದ ಸುತ್ತೋಲೆ ಪ್ರಕಟಿಸಿತು.
‘ಒಟ್ಟಾರೆ 25 ಸಹ ಪ್ರಾಧ್ಯಾಪಕರು ಹಾಗೂ 7 ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗಾಗಿ ಆಗಸ್ಟ್ 16, 2023 ರಂದು ಅಧಿಸೂಚನೆ ಹೊರಡಿಸಿದ್ದು, ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 27, 2023 ಕೊನೆ ದಿನವಾಗಿತ್ತು. ಅಧಿಸೂಚನೆಗೆ ಹೈಕೋರ್ಟ್ ತಡೆಯಾಜ್ಞೆ ಇದ್ದರೂ, ಅಭ್ಯರ್ಥಿಗಳಿಗೆ ಆಗಸ್ಟ್18, 2021ರ ಅಧಿಸೂಚನೆ ಉಲ್ಲೇಖಿಸಿ ಸಂದರ್ಶನಕ್ಕೆ ಕರೆಯಲಾಗಿದೆ’ ಎಂದು ಜಗದೀಶ್‌ಬಾಬು ಆರೋಪಿಸಿದ್ದರು.
‘ನೇಮಕಾತಿ ಪ್ರಕ್ರಿಯೆಯಲ್ಲಿ, ಅರ್ಜಿ ಸಲ್ಲಿಕೆಯ ಕೊನೆ ದಿನದಿಂದ 6 ತಿಂಗಳೊಳಗೆ ಸಂದರ್ಶನ ಮುಗಿಸಬೇಕೆಂಬ ನಿಯಮವಿರುವುದ ರಿಂದ ಸಂದರ್ಶನ ಪ್ರಕ್ರಿಯೆಯು ನಿಯಮಬಾಹಿರವಾಗಿದೆ. ಯುಜಿಸಿ ನಿಯಮವನ್ನು ಉಲ್ಲಂಘಿಸಿ ತರಾತುರಿಯಲ್ಲಿ ಕೇವಲ 6 ದಿನಗಳ ಅಲ್ಪ ಅವಧಿ ನೀಡಿ ಸೆ.19ಕ್ಕೆ ಸಂದರ್ಶನ ದಿನಾಂಕ ನಿಗದಿಪಡಿಸಲಾಗಿತ್ತು. ಅಭ್ಯರ್ಥಿಗಳು ತಡೆಯಾಜ್ಞೆ ತರಬಹುದು ಎಂಬ ಕಾರಣಕ್ಕೆ ಸೆ.18ಕ್ಕೆ ಪೂರ್ವ ನಿಗದಿ ಮಾಡಲಾಗಿದೆ. ಭ್ರಷ್ಟಾಚಾರದ ಉದ್ದೇಶದಿಂದಲೇ ಇದು ನಡೆಯುತ್ತಿದ್ದು, ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಹಾಗೂ ಕುಲಪತಿ ಈ ಬಗ್ಗೆ ಉತ್ತರಿಸಬೇಕು’ ಎಂದು ಆಗ್ರಹಿಸಿದ್ದರು.
ಅಂಕವಿಲ್ಲದ ಪಟ್ಟಿಗೆ ಸಹಿ: ‘2023ರ ಜುಲೈ 31ರಂದು ಹೊರಡಿಸಿದ್ದ ಅಧಿಸೂಚನೆ ಆಧರಿಸಿ ನಡೆದಿದ್ದ, ಗುತ್ತಿಗೆ ಆಧಾರಿತ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಸಂದರ್ಶನದ ಬಳಿಕ, ಅಭ್ಯರ್ಥಿಗಳ ಅಂಕ ಪಟ್ಟಿಯಲ್ಲಿ ಅಂಕಗಳನ್ನೇ ನಮೂದಿಸದೆ ಪರೀಕ್ಷಕರು ಸೇರಿದಂತೆ ಕುಲಪತಿಯೂ ಸಹಿ ಮಾಡಿದ್ದಾರೆ. ಈ ಅಕ್ರಮದಲ್ಲಿ, ಹೊರ ವಿಶ್ವವಿದ್ಯಾಲಯದಿಂದ ಬಂದಿದ್ದ ತಜ್ಞರೂ ಭಾಗಿಯಾಗಿದ್ದರು’ ಎಂದು ಆರೋಪಿಸಿದರು. ‘ಅಧಿಸೂಚನೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರಿಂದ ಸ್ಥಗಿತಗೊಂಡಿತ್ತು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.