ರಾಜ್ಯದ 41ನೇ ಡಿಜಿ ಆಗಿ ಅಧಿಕಾರ ವಹಿಸಿಕೊಂಡ ಪ್ರವೀಣ್ ಸೂದ್ ಅವರು ‘ಪ್ರಜಾವಾಣಿ‘ಗೆ ವಿಶೇಷ ಸಂದರ್ಶನ ನೀಡಿದರು.
ರಾಜ್ಯದಲ್ಲಿ ಸಿಎಎ, ಎನ್‌ಸಿಆರ್ ಪ್ರತಿಭಟನೆ ಕಾವು ಇದೆ. ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತೀರಾ?
ಪ್ರವೀಣ್ ಸೂದ್: ಯಾವುದೇ ಪ್ರತಿಭಟನೆ ನಡೆಸಿದರೂ ಅದು ಶಾಂತಿಯುತವಾಗಿರಬೇಕು. ಜನರಿಗೆ ತೊಂದರೆ ನೀಡಿ ಅಶಾಂತಿ ಉಂಟು ಮಾಡಿದರೆ ಕಠಿಣ ಕ್ರಮ ಕೈಗೊಳ್ಳುತ್ತೇನೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ.
ನೀವು ತುರ್ತಾಗಿ ಪರಿಹರಿಸಬೇಕಾದ ಸಮಸ್ಯೆಗಳು ಯಾವುವು?
30 ವರ್ಷಗಳಿಂದ ಒಂದೇ ರೀತಿಯ ಸಮಸ್ಯೆಗಳಿವೆ. ಅವುಗಳ ಆಯಾಮ ಮಾತ್ರ ಬದಲಾಗಿದೆ.ಒಬ್ಬನಿಂದ ಎಲ್ಲವನ್ನೂ ಮಾಡಲು ಆಗುವುದಿಲ್ಲ. ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರದ ಜೊತೆ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತೇನೆ
ಭಯೋತ್ಪಾದನಾ ಚಟುವಟಿಕೆ ತಡೆ ಹಾಗೂ ಅಕ್ರಮವಾಸಿಗಳ ಗಡಿಪಾರಿಗೆ ಏನೆಲ್ಲ ಕ್ರಮ ಕೈಗೊಳ್ಳುತ್ತೀರಾ?
ಜನರಲ್ಲಿ ಭಯ ಹುಟ್ಟಿಸುವವರ ಹಾಗೂ ಅಕ್ರಮವಾಸಿಗಳ ವಿರುದ್ಧ ಕಠಿಣ ಕ್ರಮ ನಿಶ್ಚಿತ. ಅದರಲ್ಲಿ ರಾಜೀ ಆಗುವ ಪ್ರಶ್ನೆಯೇ ಇಲ್ಲ.
ಮಹಿಳೆ, ಮಕ್ಕಳ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ ?
ನನಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ರಾಜ್ಯದಲ್ಲಿ ಯಾವುದೇ ಮಹಿಳೆ ಮತ್ತು ಮಕ್ಕಳ ಮೇಲೆ ದೌರ್ಜನ್ಯ ನಡೆಯಲು ಬಿಡುವುದಿಲ್ಲ. ದೌರ್ಜನ್ಯ ಎಸಗಿದರೆ ಸಹಿಸುವುದಿಲ್ಲ.
ಸಿಬ್ಬಂದಿ ಕೊರತೆ ಇದೆಯಲ್ಲಾ?
ರಾಜ್ಯದ ಆರೂವರೆ ಕೋಟಿ ಜನರಿಗೆ ಕಾನೂನಿನ ಅನುಕೂಲ ಮಾಡಿಕೊಡುವ ಸಾಮರ್ಥ್ಯ 1 ಲಕ್ಷ ಪೊಲೀಸರಿಗೆ ಇದೆ. ಪೊಲೀಸರು ಜನರಿಗೋಸ್ಕರ ಇದ್ದಾರೆ. ಅವರು ಏನಾದರೂ ತಪ್ಪು ಮಾಡಿದರೆ ಶಿಕ್ಷೆ ಕೊಡುತ್ತೇವೆ. ಅವರು ಒಳ್ಳೆಯ ಕೆಲಸ ಮಾಡಿದಾಗ ಜನರು ಪ್ರಶಂಸೆ ವ್ಯಕ್ತಪಡಿಸಿ ಪ್ರೋತ್ಸಾಹಿಸಬೇಕು
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಲು ಅಧಿಕಾರಿಗಳ ಜೊತೆ ಸೇರಿ ಒಗ್ಗಟ್ಟಿನ ಕೆಲಸ ಮಾಡುತ್ತೇನೆ. ಈ ರೀತಿಯಾದರೆ ಸಿಬ್ಬಂದಿ ಕೊರತೆ ಕೆಲಸಕ್ಕೆ ಅಡ್ಡಿಯಾಗದು.
ಸೈಬರ್ ಅಪರಾಧಗಳ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿದೆ. ಇದರ ತಡೆಗೆ ನಿಮ್ಮ ಕ್ರಮ?
ಸೈಬರ್ ಅಪರಾಧಗಳ ತನಿಖೆ ಸವಾಲಿನ ಕೆಲಸ. ಜಿಲ್ಲೆಗೊಂದು ಠಾಣೆ ತೆರೆದರೆ ಸೈಬರ್ ಅಪರಾಧಗಳು ಕಡಿಮೆ ಆಗುವುದಿಲ್ಲ. ಜನರಲ್ಲಿ ಮೊದಲಿಗೆ ಜಾಗೃತಿ ಮೂಡಿಸಬೇಕಿದೆ. ಆ ಕೆಲಸಕ್ಕೆ ಹೆಚ್ಚು ಒತ್ತು ನೀಡುತ್ತೇನೆ.
ಇಲಾಖೆ ಕೆಲಸಕ್ಕೆ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳುತ್ತೀರಾ?
ತಂತ್ರಜ್ಞಾನದಲ್ಲಿ ನನಗೆ ಮೊದಲಿನಿಂದಲೂ ಹೆಚ್ಚು ಆಸಕ್ತಿ. ಇಂದಿನ ದಿನಮಾನದಲ್ಲಿ ತಂತ್ರಜ್ಞಾನ ಇಲ್ಲದೆ ಕೆಲಸ ಮಾಡಲು ಆಗುವುದಿಲ್ಲ. ತಂತ್ರಜ್ಞಾನವನ್ನು ಸಮರ್ಥವಾಗಿ ಉಪಯೋಗಿಸಿಕೊಳ್ಳುತ್ತೇನೆ. ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯ ಸ್ಥಾಪಿಸುವ ಉದ್ದೇಶವಿದೆ
ಬೆಂಗಳೂರಿನ ಸಮಸ್ಯೆಗಳಿಗೆ ನಿಮ್ಮ ಪರಿಹಾರ?
ಬೆಂಗಳೂರು ಸಂಚಾರ ದಟ್ಟಣೆ ಹಾಗೂ ಅಪರಾಧಗಳ ಬಗ್ಗೆ ಗೊತ್ತಿದೆ. ಒಂದೇ ರಾತ್ರಿಯಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಲು ಆಗುವುದಿಲ್ಲ. ಹಂತ ಹಂತವಾಗಿ ಆಗಬೇಕು. ಕಮಿಷನರ್ ಹಾಗೂ ಅಧಿಕಾರಿಗಳ ಸಭೆ ಕರೆದು ಚರ್ಚಿಸುವೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.