ADVERTISEMENT

ಬೇಸಾಯದ ಜೊತೆಗೆ ಆದಾಯ ಗಳಿಸಲು ರೈತರಿಗಾಗಿ ‘ಕೃಷಿ ಪ್ರವಾಸೋದ್ಯಮ’ ಪರಿಚಯ

ವಿವಿಧ ಕ್ಷೇತ್ರಗಳಿಗೆ ಶೇ15 ರಿಂದ 25ರಷ್ಟು ಸಹಾಯಧನ l ಹೊಸ ಪ್ರವಾಸೋದ್ಯಮ ನೀತಿಯಲ್ಲಿ ಉಲ್ಲೇಖ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2024, 23:55 IST
Last Updated 7 ನವೆಂಬರ್ 2024, 23:55 IST
   

ಬೆಂಗಳೂರು: ರಾಜ್ಯದ ರೈತರು ಇನ್ನು ಮುಂದೆ ಬೇಸಾಯದ ಜೊತೆಗೆ ಪ್ರವಾಸೋದ್ಯಮದ ಮೂಲಕವೂ ಒಂದಷ್ಟು ಆದಾಯವನ್ನು ಗಳಿಸಬಹುದಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರ ವಿನೂತನ ‘ಕೃಷಿ ಪ್ರವಾಸೋದ್ಯಮ’ವನ್ನು ಪರಿಚಯಿಸಲಿದೆ.

ರೈತರು ತಮ್ಮ ಹೊಲ ಅಥವಾ ತೋಟಗಳಲ್ಲಿ ಕೃಷಿ ಆಸಕ್ತ ಪ್ರವಾಸಿಗರಿಗೆ ಕೃಷಿ ಚಟುವಟಿಕೆಗಳನ್ನು ಪರಿಚಯಿಸುವ ಜತೆಗೆ, ಆತಿಥ್ಯ ನೀಡಬಹುದು. ಊಟ, ತಿಂಡಿ, ವಾಸ್ತವ್ಯಕ್ಕೆ ದರವನ್ನೂ ನಿಗದಿ ಮಾಡಬಹುದು. ಹೊಸ ಪ್ರವಾಸೋದ್ಯಮ ನೀತಿಯು ಕೃಷಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಹಲವು ಅಂಶಗಳನ್ನು ಒಳಗೊಂಡಿದೆ.

ಕೃಷಿ ಪ್ರವಾಸೋದ್ಯಮ ನಡೆಸುವವರು ಸ್ವತಃ ರೈತರೇ ಆಗಿರಬೇಕು. ಅಲ್ಲದೇ, ಬೇಸಾಯ ನಡೆಸುತ್ತಿರಬೇಕು. ತೋಟ, ಗಾರ್ಡನ್‌, ಮೀನು ಸಾಕಣೆ ಕೊಳ, ರೇಷ್ಮೆ, ಪುಷ್ಪೋದ್ಯಮ ಅಥವಾ ಪಶು ಸಂಗೋಪನೆ ನಡೆಸುತ್ತಿರಬೇಕು. ಅತಿಥಿಗಳಾಗಿ ಬರುವವರಿಗೆ ಉಳಿದುಕೊಳ್ಳಲು 12 ಹಾಸಿಗೆಗಳ ಸಾಮರ್ಥ್ಯದ 6 ಕೊಠಡಿಗಳನ್ನು ಹೊಂದಿರಬೇಕು. ವಾಸ್ತವ್ಯದ ಕಟ್ಟಡವು ಒಟ್ಟು ಕೃಷಿ ಭೂಮಿಯ ಶೇ 10ರಷ್ಟನ್ನು ಮೀರಬಾರದು. ಆದರೆ, ಕೃಷಿ ಪ್ರವಾಸೋದ್ಯಮ ನಡೆಸುವವರಿಗೆ ಹೆಚ್ಚುವರಿಯಾಗಿ ವಿದ್ಯುತ್‌ ಮತ್ತು ನೀರಿನ ಶುಲ್ಕ ವಿಧಿಸುವುದಿಲ್ಲ.

ADVERTISEMENT

ಕೃಷಿ ಪ್ರವಾಸೋದ್ಯಮ ಯೋಜನೆಯಡಿ ರೈತ, ಕೃಷಿ ಉತ್ಪಾದನಾ ಸಂಘಟನೆಗಳು ಅಥವಾ ಕೃಷಿ ಉತ್ಪನ್ನಗಳ ಉತ್ಪಾದನಾ ಸೊಸೈಟಿಗಳಿಗೆ ಸಹಾಯಧನ ನೀಡಲಾಗುತ್ತದೆ.

ಸಹಾಯಧನದ ಜತೆಗೆ ವಿನಾಯಿತಿ: ಹೊಸ ಬಗೆಯ ಪ್ರವಾಸೋದ್ಯಮಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಸಹಾಯ ಧನ, ಮುದ್ರಾಂಕ ಶುಲ್ಕ ವಿನಾಯಿತಿ, ತೆರಿಗೆ ವಿನಾಯಿತಿ ಸೇರಿ ವಿವಿಧ ರೀತಿಯ ಪ್ರೋತ್ಸಾಹಗಳನ್ನು ನೀತಿಯು ಒಳಗೊಂಡಿದೆ.

ಅದರಲ್ಲೂ ವಿಶೇಷವಾಗಿ ಸಾಹಸ, ಕ್ಯಾರವಾನ್‌, ಕ್ಯಾರವಾನ್ ಪಾರ್ಕ್‌, ಕ್ರೂಸ್‌, ಹೌಸ್‌ ಬೋಟ್‌, ವೆಲ್‌ನೆಸ್‌ ಸೆಂಟರ್‌ ಶೇ 25ರಷ್ಟು, ಪ್ರವಾಸೋದ್ಯಮ ಉದ್ದೇಶದ ಸಣ್ಣ ಐಷಾರಾಮಿ ಹೋಟೆಲ್‌ಗಳಿಗೆ ಶೇ 15ರಷ್ಟು ಸಹಾಯಧನವನ್ನು ಪ್ರವಾಸೋದ್ಯಮ ನೀತಿಯಲ್ಲಿ ಪ್ರಕಟಿಸಲಾಗಿದೆ.

ಸಾಹಸ ಪ್ರವಾಸೋದ್ಯಮ ಯೋಜನೆಯಲ್ಲಿ ಕನಿಷ್ಠ ₹25 ಲಕ್ಷ ಗರಿಷ್ಠ ₹2 ಕೋಟಿ, ಕೃಷಿ ಪ್ರವಾಸೋದ್ಯಮದಲ್ಲಿ ಕನಿಷ್ಠ ₹10 ಲಕ್ಷ ಗರಿಷ್ಠ ₹50 ಲಕ್ಷ, ಕ್ಯಾರವಾನ್‌ ಪಾರ್ಕ್‌ ಪ್ರಾಜೆಕ್ಟ್‌ನಲ್ಲಿ ಕನಿಷ್ಠ ₹25 ಲಕ್ಷ ಗರಿಷ್ಠ ₹2 ಕೋಟಿ, ಕ್ರೂಸ್‌ ಟೂರಿಸಂನಲ್ಲಿ ಕನಿಷ್ಠ ₹25 ಲಕ್ಷ ಗರಿಷ್ಠ ₹1 ಕೋಟಿ, ವೆಲ್‌ನೆಸ್‌ ಸೆಂಟರ್‌ ₹2 ಕೋಟಿ, ಐಷಾರಾಮಿ ಹೋಟೆಲ್‌ಗಳು (ಒನ್ ಸ್ಟಾರ್‌ನಿಂದ ತ್ರೀಸ್ಟಾರ್‌ವರೆಗೆ) ₹10 ಕೋಟಿ ಮಿತಿಯಲ್ಲಿ ಹೂಡಿಕೆ ಮಾಡಿದರೆ ಸಹಾಯಧನ ಸಿಗುತ್ತದೆ. 

ಆದರೆ, ಬೆಂಗಳೂರು ನಗರ ಜಿಲ್ಲೆ ಮತ್ತು ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯಲ್ಲಿ ಬಂಡವಾಳದ ಮೇಲಿನ ಸಹಾಯಧನ ಅನ್ವಯವಾಗುವುದಿಲ್ಲ. 

ಶೇ 50ರಷ್ಟು ಮುದ್ರಾಂಕ ಶುಲ್ಕ ವಿನಾಯಿತಿ: ಹೊಸ ಪ್ರವಾಸೋದ್ಯಮ ಯೋಜನೆಗಳನ್ನು ಆರಂಭಿಸುವವರು ಮತ್ತು ವಿಸ್ತರಣೆ ಮಾಡುವವರಿಗೆ ಮುದ್ರಾಂಕ ಶುಲ್ಕದಲ್ಲಿ ವಿನಾಯಿತಿ ಸಿಗಲಿದೆ.

ರಾಜ್ಯ ಸರ್ಕಾರ, ರಾಜ್ಯ ಹಣಕಾಸು ನಿಗಮ, ರಾಷ್ಟ್ರ ಮಟ್ಟದ ಹಣಕಾಸು ಸಂಸ್ಥೆಗಳು, ವಾಣಿಜ್ಯ ಬ್ಯಾಂಕ್‌ಗಳು, ಗ್ರಾಮೀಣ ಬ್ಯಾಂಕ್‌ ಮತ್ತಿತರ ಹಣಕಾಸು ಸಂಸ್ಥೆಗಳಲ್ಲಿ ಪಡೆಯುವಾಗ, ಸಾಲದ ಒಪ್ಪಂದ, ಸಾಲ ಪತ್ರ,  ಅಡಮಾನ ಪತ್ರಗಳಿಗೆ  ಮುದ್ರಾಂಕ ಶುಲ್ಕದಲ್ಲಿ ಶೇ 50ರಷ್ಟು ವಿನಾಯಿತಿ ನೀಡಲಾಗುವುದು. ಈ ವಿನಾಯಿತಿ ಗುತ್ತಿಗೆ ಪತ್ರ, ಗುತ್ತಿಗೆ ಮತ್ತು ಮಾರಾಟ ಪತ್ರ, ಉಪಗುತ್ತಿಗೆ, ಶುದ್ಧಕ್ರಮ ಪತ್ರಗಳಿಗೂ ಅನ್ವಯವಾಗುತ್ತದೆ.

ನೋಂದಣಿ ಶುಲ್ಕವನ್ನು ಶೇ 100ರಷ್ಟು ಮರುಪಾವತಿ ಮಾಡಲಾಗುತ್ತದೆ. ಪ್ರವಾಸೋದ್ಯಮ ಯೋಜನೆಗಾಗಿ ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯಾಗಿ ಪರಿವರ್ತಿಸಿದರೆ ಪರಿವರ್ತನಾ ಶುಲ್ಕವನ್ನೂ ಮರುಪಾವತಿಸಲಾಗುವುದು.

ಹೋಂ ಸ್ಟೇಗಳಿಗೆ ಉತ್ತೇಜನ

l ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳುವ ಹೋಂ ಸ್ಟೇಗಳಿಗೆ ಹಲವು ರೀತಿ ರಿಯಾಯಿತಿಗಳನ್ನು ಪ್ರಕಟಿಸಲಾಗಿದೆ

l ವಿದ್ಯುತ್‌ ಮತ್ತು ನೀರಿನ ಶುಲ್ಕವನ್ನು ಗೃಹ ಬಳಕೆಯ ಆಧಾರದಲ್ಲೇ ವಿಧಿಸಲಾಗುವುದು. ವಾಣಿಜ್ಯ ದರವನ್ನು ವಿಧಿಸುವುದಿಲ್ಲ

l ಸ್ವತ್ತು ತೆರಿಗೆಯನ್ನೂ ವಾಣಿಜ್ಯ ದರದಲ್ಲಿ ವಿಧಿಸದೇ, ಮನೆಗಳಿಗೆ ನಿಗದಿ ಮಾಡುವ ದರದಲ್ಲೇ ಪಾವತಿಸಲು ಅವಕಾಶ

l ಹೋಂ ಸ್ಟೇ ವ್ಯಾಖ್ಯಾನಕ್ಕೆ ಅನುಗುಣವಾಗಿ ವಾಸ್ತವ್ಯದ ಕೊಠಡಿಗಳಿಗಾಗಿ ಭೂಬದಲಾವಣೆ ಮಾಡುವ ಅಗತ್ಯವೂ ಇಲ್ಲ

ಮಹಿಳೆ ಮತ್ತು ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಹೆಚ್ಚಿನ ಸಹಾಯಧನ
ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪಂಗಡದವರು ಹಾಗೂ ಅಂಗವಿಕಲರು ಪ್ರವಾಸೋದ್ಯಮ ಯೋಜನೆಗಳನ್ನು ನಡೆಸಿದರೆ ಶೇ 5ರಷ್ಟು ಹೆಚ್ಚುವರಿ ಸಹಾಯಧನ ನೀಡಲಾಗುವುದು. ಅಲ್ಲದೇ, ಹೋಟೆಲ್‌ ಯೋಜನೆಗಳನ್ನು ಕಲ್ಯಾಣ ಕರ್ನಾಟಕ ಪ್ರದೇಶದ ಬೀದರ್‌, ಬಳ್ಳಾರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯನಗರ ಮತ್ತು ಯಾದಗಿರಿ, ಕಿತ್ತೂರು ಕರ್ನಾಟಕದ ಪ್ರದೇಶದ ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ವಿಜಯಪುರ, ಬಾಗಲಕೋಟೆ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಆರಂಭಿಸಿದರೆ ಹೆಚ್ಚುವರಿಯಾಗಿ ಶೇ 5ರಷ್ಟು ಸಹಾಯಧನ ಸಿಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.