ಬೆಂಗಳೂರು: ರಾಜ್ಯಕ್ಕೆ ಹೆಚ್ಚು ಬಂಡವಾಳ ಆಕರ್ಷಿಸಲು ಹಿಂದೆ ರೂಪಿಸಿದ್ದ ‘ಇನ್‌ವೆಸ್ಟ್ ಕರ್ನಾಟಕ ಫೋರಂ’ ಅನ್ನು (ಐಕೆಎಫ್) ಪುನರ್ ರಚಿಸಲಾಗಿದ್ದು, ಸಹ ಅಧ್ಯಕ್ಷರನ್ನಾಗಿ ಉದ್ಯಮಿ ಸಜ್ಜನ್ ಜಿಂದಾಲ್ ಅವರನ್ನು ನೇಮಿಸಲಾಗಿದೆ.
ಕಿರ್ಲೋಸ್ಕರ್ ಸಿಸ್ಟಮ್ಸ್ ಅಧ್ಯಕ್ಷೆ ಗೀತಾಂಜಲಿ ಕಿರ್ಲೋಸ್ಕರ್, ಏಕಸ್‌ಇಂಕ್ ಸಮೂಹದ ಅಧ್ಯಕ್ಷ ಅರವಿಂದ್ ಮೆಳ್ಳಿಗೇರಿ, ಜೆಟ್ವಕ್ಸ್ ಕಂಪನಿಯ ಸಹ ಸಂಸ್ಥಾಪಕ ಅಂಕಿತ್ ಫತೇಪುರಿಯಾ, ಕೆನ್ನಮೆಟಲ್ ವ್ಯವಸ್ಥಾಪಕ ನಿರ್ದೇಶಕ ವಿಜಯಕೃಷ್ಣನ್ ವೆಂಕಟೇಶನ್ ಅವರನ್ನು ನಿರ್ದೇಶಕರಾಗಿ ನೇಮಿಸಲಾಗಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಮಾಹಿತಿ ನೀಡಿದ್ದಾರೆ.
ಐಕೆಎಫ್‌ಗೆ ಮಾರ್ಗದರ್ಶನ ನೀಡಲು ಇದೇ ಮೊದಲ ಬಾರಿಗೆ ಕಾರ್ಯತಂತ್ರ ಹೂಡಿಕೆ ಸಮಿತಿ (ಎಸ್ಐಸಿ) ರಚಿಸಲಾಗಿದೆ. ಉದ್ಯಮ ವಲಯದ ಮೃತ್ಯುಂಜಯ ಹಿರೇಮಠ, ರಾಮ್ ಟಿ. ಚಂದನಾನಿ, ಪ್ರಶಾಂತ್ ಪ್ರಕಾಶ್, ನಿಖಿಲ್ ಕಾಮತ್, ರವಿ ಮಾನಚಂದ್, ಅಶ್ವಿನ್ ಕೃಷ್ಣಸ್ವಾಮಿ, ಗೌರಿ ಶಂಕರ್ ನಾಗಭೂಷಣಂ, ಕಾಸರಗೋಡು ಉಲ್ಲಾಸ್ ಕಾರಂತ್ ಅವರನ್ನು ಸದಸ್ಯರಾಗಿ ಆಯ್ಕೆ ಮಾಡಲಾಗಿದೆ.
ಅಮೆರಿಕ, ಜರ್ಮನಿ, ಫ್ರಾನ್ಸ್, ನೆದರ್‌ಲೆಂಡ್ಸ್, ಜಪಾನ್. ದಕ್ಷಿಣ ಕೊರಿಯಾ, ತೈವಾನ್ ಕಂಪನಿಗಳ ಜತೆ ನೂತನ ಸಮಿತಿ ವ್ಯವಹರಿಸಲಿದೆ. ರಾಜ್ಯಕ್ಕೆ ಹೆಚ್ಚಿನ ಹೂಡಿಕೆಯನ್ನು ಸೆಳೆಯಲು ಶ್ರಮಿಸಲಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.